AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ ಬ್ಯಾಗ್​​ನಲ್ಲಿ 6 ಲಕ್ಷ‌ ರೂ. ಪತ್ತೆ: ದುಡ್ಡು ತಂದಿದ್ಯಾಕೆ?

ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ ಬ್ಯಾಗ್​​ನಲ್ಲಿ 6 ಲಕ್ಷ ರೂಪಾಯಿ ಪತ್ತೆಯಾಗಿದೆ. ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಭೇಟಿಗೆಂದು ವಿಧಾನಸೌಧಕ್ಕೆ ಆಗಮಿಸಿದ್ದು, ಈ ವೇಳೆ ಪೊಲೀಸರು ತಪಾಸಣೆ ನಡೆಸಿದಾಗ ವ್ಯಕ್ತಿಯ ಬ್ಯಾಗ್​​ನಲ್ಲಿ ಹಣ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದು, ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ ಬ್ಯಾಗ್​​ನಲ್ಲಿ 6 ಲಕ್ಷ‌ ರೂ. ಪತ್ತೆ: ದುಡ್ಡು ತಂದಿದ್ಯಾಕೆ?
Vidhana Soudha
ಹರೀಶ್ ಜಿ.ಆರ್​.
| Edited By: |

Updated on:Mar 25, 2026 | 8:05 PM

Share

ಬೆಂಗಳೂರು, (ಮಾರ್ಚ್ 25): ಇತ್ತೀಚೆಗಷ್ಟೇ ವಿಧಾನಸೌಧದಲ್ಲಿ (Vidhan Soudha) ಲಕ್ಷಾಂತರ ಹಣ ಮತ್ತು ಚಿನ್ನಾಭರಣ ಕಳ್ಳತನವಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ವಿಧಾನಸೌಧದಲ್ಲಿ ಮತ್ತೊಂದು ಮನಿ ಬ್ಯಾಗ್ ಕೇಸ್ ಬೆಳಕಿಗೆ ಬಂದಿದೆ. ಹೌದು… ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ ಬ್ಯಾಗ್​​ನಲ್ಲಿ 6 ಲಕ್ಷ ರೂಪಾಯಿ ಪತ್ತೆಯಾಗಿದೆ. ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರನ್ನು ಭೇಟಿಯಾಗಲು ವಿಧಾನಸೌಧಕ್ಕೆ ಆಗಮನಿಸಿದ್ದು, ಈ ವೇಳೆ ಪೊಲೀಸರು ಯುವಕನ ಬ್ಯಾಗ್ ಪರಿಶೀಲನೆ ವೇಳೆ ಬರೋಬ್ಬರಿ ಆರು ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಇದರಿಂದ ಪೊಲೀಸರು ಶಾಕ್ ಆಗಿದ್ದು, ಕೂಡಲೇ ಯುವಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಇಂದು  (ಮಾರ್ಚ್ 25) ವ್ಯಕ್ತಿಯೊಬ್ಬರು ಕೆಂಗಲ್ ಗೇಟ್‌ ಮೂಲಕ ವಿಧಾನಸೌಧ ಒಳಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಯುವಕನ ಬ್ಯಾಗ್ ಪರಿಶೀಲನೆ ಮಾಡಿದಾಗ 6 ಲಕ್ಷ ರೂ, ಪತ್ತೆಯಾಗಿದೆ. ಆಗ ಪೊಲೀಸರು ,  ಇಷ್ಟು ದೊಡ್ಡ ಮೊತ್ತದ ಹಣದೊಂದಿಗೆ ಒಳಗೆ ಹೋಗುವಂತಿಲ್ಲ. ವಾಪಸ್ ಹೋಗಿ ಎಂದಿದ್ದಾರೆ. ಆದರೂ ಶಾಸಕರನ್ನು ನೋಡಲೇಬೇಕು ಎಂದು ಯುವಕ ಹಠ ಹಿಡಿದಿದ್ದ ಎನ್ನಲಾಗಿದೆ. ಬಳಿಕ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಎಸಿಪಿ ಕೃಷ್ಣಯ್ಯ ಅವರ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಯುವಕ, ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಲೆಟರ್ ಹೆಡ್ ಪಡೆಯಲು ಬಂದಿರುವುದಾಗಿ ಒಪ್ಪಿಕೊಂಡಿದ್ದು, ಹಣವನ್ನು ತನ್ನ ದೊಡ್ಡಪ್ಪನ ಚಿಕಿತ್ಸೆಗೆಂದು ತಂದಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ 10 ಲಕ್ಷ ರೂ. ಸಿಕ್ಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಕಾಂಗ್ರೆಸ್, ಸಚಿವರ ಹೆಸರು ಬಹಿರಂಗ

ವಿಚಾರಣೆ ವೇಳೆ ಯುವಕ ಹೇಳಿದ್ದೇನು?

ನಾನು ಶಾಸಕರನ್ನು ನೋಡಲು ಬಂದಿದ್ದೇನೆ. ನಾನು ಆ ಕ್ಷೇತ್ರದವನಾಗಿದ್ದು, ಶಾಸಕ ಯಶವಂತ ತಾಯಗೌಡ ಪಾಟೀಲ್ ಲೆಟರ್‌ಹೆಡ್ ಪಡೆಯಲು ಬಂದಿದ್ದೆ. ಇನ್ನು ಹಣದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಯುವಕ, ದೊಡ್ಡಪ್ಪನಿಗೆ ಹುಷಾರಿಲ್ಲ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದಕ್ಕೆ ಹಣ ತಂದಿದ್ದೆ ಎಂದು ಹೇಳಿಕೆ ನೀಡಿದ್ದಾನೆ.

2023ರಲ್ಲೂ ವಿಧಾನಸೌಧದಲ್ಲಿ ಹಣ ಸಿಕ್ಕಿತ್ತು

ಇನ್ನು 2023ರಲ್ಲೂ ಸಹ ಇದೇ ರೀತಿಯ ಪ್ರಕರಣ ನಡೆದಿತ್ತು. ಅಂದು ಕರ್ನಾಟಕ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವಾಗಲೇ ವಿಧಾನಸೌಧದಲ್ಲಿ ಅನಧಿಕೃತವಾಗಿ 10.5 ಲಕ್ಷ ಹಣ ಪತ್ತೆಯಾಗಿತ್ತು. ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್(Assistant Engineer of Public Works Department) ಜಗದೀಶ್​​ ಎನ್ನುವರು ಹಣ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಈ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ ಆಡಳಿತ, ವಿರೋಧ ಪಕ್ಷ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿತ್ತು.

ಸದ್ಯ ಇಂಡಿ ಕ್ಷೇತ್ರದ ಯುವಕನ ಮನಿ ಬ್ಯಾಗ್  ಪತ್ತೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Wed, 25 March 26

Follow Us