ಮಹಿಳೆಯರಿಗೆ ಶಕ್ತಿ ನೀಡಲು ಆಟೋ ಚಾಲಕರ ಶಕ್ತಿ ಕುಂದಿಸಿದ ಕಾಂಗ್ರೆಸ್ ಸರ್ಕಾರ; ಉಚಿತ ಬಸ್ ಪ್ರಯಾಣ ಯೋಜನೆ ಸ್ಥಗಿತಕ್ಕೆ ಒತ್ತಾಯ
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಕ್ಯಾಬ್, ಆಟೋ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ಖಾಸಗಿ ಬಸ್ಗಳು ಕೂಡ ಖಾಲಿ ಖಾಲಿ ಓಡಾಡುತ್ತಿವೆ. ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಭೀತಿಗೊಂಡಿರುವ ಆಟೋ, ಕ್ಯಾಬ್ ಮಾಲೀಕರು, ಯೋಜನೆ ಸ್ಥಗಿತಕ್ಕೆ ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು: ಮಹಿಳೆಯರಿಗೆ ಶಕ್ತಿ ತುಂಬಲು ಹೋದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಕ್ಯಾಬ್, ಆಟೋ ಹಾಗೂ ಖಾಸಗಿ ಬಸ್ ಮಾಲೀಕರ ಶಕ್ತಿಯನ್ನೇ ಕಿತ್ತುಕೊಂಡಿದೆ ಎಂಬ ಆಕ್ರೋಶ ಕೇಳಿಬರಲು ಆರಂಭವಾಗಿದೆ. ಶಕ್ತಿ ಯೋಜನೆಯಿಂದಾಗಿ (Shakti Scheme) ಕ್ಯಾಬ್, ಆಟೋ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ಖಾಸಗಿ ಬಸ್ಗಳು ಕೂಡ ಖಾಲಿ ಖಾಲಿ ಓಡಾಡುತ್ತಿವೆ. ಬಿಎಂಟಿಸಿ (BMTC) ಬಸ್ನಲ್ಲಿ ಮಹಿಳೆಯರಿಗೆ ಫ್ರೀ (Free Travel) ಘೋಷಣೆ ಮಾಡಿದ್ದೆ ತಡ ಶೇ 50 ರಿಂದ 75 ರಷ್ಟು ನಷ್ಟ ಉಂಟಾಗಿದೆ ಎಂದು ಕ್ಯಾಬ್ ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ ಉಚಿತ ಪ್ರಯಾಣದ ಯೋಜನೆ ಸ್ಥಗಿತಕ್ಕೆ ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ನಾರಾಯಣ ಸ್ವಾಮಿ, ನೂರಕ್ಕೂ ನೂರರಷ್ಟು ನಮ್ಮ ಕ್ಯಾಬ್ ಉದ್ಯಮ ಬಿದ್ದು ಹೋಗಿದೆ. ಮೊದಲು ಕ್ಯಾಬ್ನಲ್ಲಿ ಹೆಣ್ಣು ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಬಿಎಂಟಿಸಿ ಬಸ್ನಲ್ಲಿ ಫ್ರೀ ಅಂತ ಘೋಷಣೆ ಮಾಡಿದ ನಂತರ ಶೇ. 50 ರಿಂದ 75 ರಷ್ಟು ನಷ್ಟ ಉಂಟಾಗಿದೆ ಎಂದಿದ್ದಾರೆ.
ಉಚಿತ ಪ್ರಯಾಣದಿಂದ ಕ್ಯಾಬ್ಗಳಿಗೆ ನಗರದಲ್ಲಿ ಯಾವುದೇ ಬಾಡಿಗೆ ಸಿಗುತ್ತಿಲ್ಲ. ಪ್ರತಿದಿನ ಒಬ್ಬ ಕ್ಯಾಬ್ ಚಾಲಕ 1500 ರಿಂದ 2000 ರೂಪಾಯಿ ಬಾಡಿಗೆ ಹೋಗುತ್ತಿದ್ದ. ಈಗ 500 ರಿಂದ 600 ರೂಪಾಯಿ ಬಾಡಿಗೆ ಹೋಗುವುದು ಕಷ್ಟವಾಗಿದೆ. ಸರ್ಕಾರಕ್ಕೆ ನಾವು ಮಹಿಳೆಯರಿಗೆ ಉಚಿತ ನೀಡಲು ಕೇಳಿಕೊಂಡಿರಲ್ಲಿಲ್ಲ. ಸರ್ಕಾರ ಹೀಗೆ ಮಾಡಿದರೆ ಹೇಗೆ? ನಾವು ಬಂಡವಾಳ ಹಾಕಿರುವುದು ಯಾಕೆ? ಸರ್ಕಾರ ಚೂರು ಯೋಚನೆ ಮಾಡದೆ ಉಚಿತ ನೀಡಿದರೆ ನಮ್ಮ ಪರಿಸ್ಥಿತಿ ಏನು ಅಂತ ಪ್ರಶ್ನೆ ಮಾಡಿದ್ದಾರೆ.
ಕ್ಯಾಬ್ ಚಾಲಕರು ಪ್ರತಿದಿನ ಹತ್ತರಿಂದ ಹದಿನೈದು ಟ್ರಿಪ್ ಮಾಡುತ್ತಿದ್ದರು. ಆದರೆ ಈಗ ನಾಲ್ಕೈದು ಟ್ರಿಪ್ ಮಾಡುತ್ತಿದ್ದಾರೆ. ದಯವಿಟ್ಟು ಸರ್ಕಾರ ಉಚಿತ ಬಸ್ ಪ್ರಯಾಣ ಯೋಜನೆಯನ್ನು ನಿಲ್ಲಿಸಬೇಕು. ಸರ್ಕಾರ ಗ್ಯಾರೆಂಟಿ ನೀಡಿರುವುದಕ್ಕೆ ಉಚಿತ ನೀಡುತ್ತಿದೆ. ಆದರೆ ನಮ್ಮ ಕಥೆ ಏನು? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು ಆಟೋ ಚಾಲಕರಿಗೆ ಶೇಕಡಾ 50 ರಷ್ಟು ನಷ್ಟ
ಬಿಎಂಟಿಸಿ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವ ಹಿನ್ನೆಲೆ ಬೆಂಗಳೂರು ಆಟೋ ಚಾಲಕರಿಗೆ ಶೇ 50 ರಷ್ಟು ಹೊಡೆತ ಬಿದ್ದಿದೆ. ಪ್ರತಿದಿನ ಒಬ್ಬ ಆಟೋ ಚಾಲಕ 1500 ರೂಪಾಯಿವರೆಗೆ ಬಾಡಿಗೆ ಮಾಡಿಕೊಳ್ಳುತ್ತಿದ್ದ. ಸದ್ಯ 700 ರಿಂದ 800 ರೂ.ವರೆಗೆ ಬಾಡಿಗೆ ಸಿಗುತ್ತಿದೆ. ಬೆಳಿಗ್ಗೆ 10 ರಿಂದ ನಾಲ್ಕು ಸಂಜೆ ಗಂಟೆಯವರೆಗೆ ಮಹಿಳೆಯರು ಯಾರು ಆಟೋ ಹತ್ತುತ್ತಿಲ್ಲ. ಈ ಸಮಯದಲ್ಲಿ ಆಟೋ ಚಾಲಕರನ್ನು ಕೇಳುವವರೇ ಇಲ್ಲ ಎಂದು ಪೀಸ್ ಆಟೋ ಟ್ಯಾಕ್ಸಿ ಅಂಡ್ ಆಟೋ ಡ್ರೈವರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರಘು ಹೇಳಿದ್ದಾರೆ.
ಸರ್ಕಾರವು ಮಹಿಳೆಯರಿಗೆ ಶಕ್ತಿ ನೀಡಲು ಹೋಗಿ ಆಟೋ ಚಾಲಕರ ಶಕ್ತಿ ಕಿತ್ತುಕೊಂಡಿದೆ. ಇದಕ್ಕೆ ಕೂಡಲೇ ಸರ್ಕಾರ ಆಟೋ ಚಾಲಕರಿಗೆ ಪರಿಹಾರ ನೀಡಲೇಬೇಕು. ಪ್ರತಿದಿನ 15 ರಿಂದ 20 ಬಾಡಿಗೆ ಹೋಗುತ್ತಿದ್ದೆವು. ಹದಿನೈದು ಗಂಟೆ ಡ್ಯೂಟಿ ಮಾಡಿದರೂ ಹಿಂದಿನ ರೀತಿಯಲ್ಲಿ ಬಾಡಿಗೆ ಆಗುತ್ತಿಲ್ಲ. ದೂರ ಪ್ರಯಾಣಕ್ಕೆ ಯಾವುದೇ ದೊಡ್ಡ ಬಾಡಿಗೆ ಬರುತ್ತಿಲ್ಲ. ಬಾಡಿಗೆ ಇಲ್ಲದೆ ಆಟೋಚಾಲಕರು ಸುಮ್ಮನೆ ರೌಂಡ್ಸ್ ಹಾಕುವ ಪರಿಸ್ಥಿತಿ ಎದುರಾಗಿದೆ ಎಂದರು.
ಇದನ್ನೂ ಓದಿ: Shakti Scheme: ಪತ್ನಿಗೆ ಫ್ರೀ ಟಿಕೆಟ್, ಒಂದು ಪ್ಲೇಟ್ ತಿಂಡಿಯ ಹಣ ಉಳಿಯಿತು ಎಂದ ಪತಿ
ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ನೀಡಿದರೆ ಏನು ಸಮಸ್ಯೆ ಇರಲಿಲ್ಲ. ಶ್ರೀಮಂತರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದು ನಮಗೆ ಸಮಸ್ಯೆ ಆಗಿದೆ. ಈ ಬಗ್ಗೆ ಸರ್ಕಾರ ಪರಿಶೀಲಿಸಿ ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದರೆ ಆಟೋ ಚಾಲಕರು ಜೀವನ ಮಾಡಬಹುದು ಎಂದು ರಘು ಹೇಳಿದ್ದಾರೆ.
ಖಾಸಗಿ ಬಸ್ ಮಾಲೀಕರಿಗೆ ಭಾರೀ ಹೊಡೆತ
ಶಕ್ತಿ ಯೋಜನೆಗೆ ಚಾಲನೆ ನೀಡಿದ ಎರಡನೇ ದಿನಕ್ಕೆ, ಅಂದರೆ ನಿನ್ನೆ ಶೇ. 85 ರಷ್ಟು ಖಾಸಗಿ ಬಸ್ ಮಾಲೀಕರಿಗೆ ನಷ್ಟ ಉಂಟಾಗಿದೆ. ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡಿರುವುದರಿಂದ, ಮಹಿಳೆಯರು ಮಾತ್ರ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿಲ್ಲ. ಹೆಂಡತಿ, ಅಕ್ಕ ತಂಗಿ, ಸ್ನೇಹಿತೆಯರ ಜೊತೆ ಮನೆಯ ಪುರುಷರು ಕೂಡ ಸರ್ಕಾರಿ ಬಸ್ನಲ್ಲೇ ಪ್ರಯಾಣಿಸುತ್ತಿದ್ದಾರೆ. ನಿನ್ನೆ ಯಾವುದೇ ಖಾಸಗಿ ಬಸ್ಸುಗಳಲ್ಲಿ ಹೆಚ್ಚಿನ ಸೀಟ್ಗಳು ಖಾಲಿ ಇದ್ದವು ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಾರೆ.
ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಈಗಾಗಲೇ ಕೋಟ್ಯಾಂತರ ರೂಪಾಯಿ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದೆ ಮತ್ತು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತದೆ ಹೊರತು ಕಡಿಮೆ ಆಗುವುದಿಲ್ಲ. ಸರ್ಕಾರಕ್ಕೆ ಖಾಸಗಿ ವಾಹನಗಳಿಂದ ಟ್ಯಾಕ್ಸ್ ಮೂಲಕ ಕೋಟ್ಯಾಂತರ ರೂಪಾಯಿ ತೆರಿಗೆ ಹೋಗುತ್ತಿದೆ. ಆ ತೆರಿಗೆ ಹಣಕ್ಕೂ ಹೊಡೆತ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದಿಂದ ನಮಗೆ ಯಾವುದೇ ಸಹಾಯವಿಲ್ಲದೆ ಮೂರು ತಿಂಗಳಿಗೊಮ್ಮೆ 60 ರಿಂದ ಒಂದು ಲಕ್ಷ ರೂಪಾಯಿ ವರೆಗೆ ತೆರಿಗೆ ಪಾವತಿ ಮಾಡುತ್ತಿದ್ದೆವು. ಖಾಸಗಿ ಬಸ್ಸುಗಳನ್ನು ನಾವು ಸಾರಿಗೆ ಇಲಾಖೆಯ ವಶಕ್ಕೆ ನೀಡುವಂತ ದುಸ್ಥಿತಿ ನಿರ್ಮಾಣ ಆಗಿದೆ. ಖಾಸಗಿ ಬಸ್ ನಂಬಿಕೊಂಡು ಜೀವನ ಮಾಡುತ್ತಿರುವ ಲಕ್ಷಾಂತರ ಕಂಡಕ್ಟರ್, ಡ್ರೈವರ್ ರಸ್ತೆಗೆ ಬೀಳಲಿದ್ದಾರೆ. ನಮ್ಮ ಖಾಸಗಿ ಬಸ್ಸುಗಳ ಮಾಹಿತಿಯನ್ನು ಸರ್ಕಾರಕ್ಕೆ ನೀಡುತ್ತೇವೆ. ಸರ್ಕಾರಿ ಬಸ್ಗಳಿಗೆ ನೀಡುವಂತೆ ನಮಗೂ ಪ್ಯಾಕೇಜ್ ನೀಡಲಿ ಎಂದು ನಟರಾಜ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ