
ಬೆಂಗಳೂರು, ಏಪ್ರಿಲ್ 04: ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್ ಬಿಗ್ ಶಾಕ್ ನೀಡಿದೆ. 2018ರ ಎಲೆಕ್ಷನ್ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಸಂಬಂಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಚುನಾವಣೆ ವೇಳೆ ಮತದಾರರಿಗೆ ಆಮಿಷ ಕೇಸ್ ಸಂಬಂಧ ಕಾಂಗ್ರೆಸ್ ನಾಯಕನ ವಿರುದ್ಧ ಅಬಕಾರಿ ಕಾಯ್ದೆ, ಐಪಿಸಿ ಅಡಿ ಕೇಸ್ ದಾಖಲಾಗಿತ್ತು. ಆದರೆ ಪ್ರಕರಣ ಸಂಬಂಧ ಕೋರ್ಟ್ ವಿಚಾರಣೆಗೆ ಹಾಜರಾಗದೇ ಶಾಸಕರು ಗೈರಾಗಿರುವ ಹಿನ್ನಲೆ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
2018ರ ವಿಧಾನಸಭಾ ಎಲೆಕ್ಷನ್ ಸಂದರ್ಭ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರಾಮನಗರ ತಾಲೂಕಿನ ಬಸವನಪುರ ಗ್ರಾಮದ ಬಳಿ ಇರುವ ಹೀಲ್ ವ್ಯೂ ರೆಸಾರ್ಟ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಹೆಚ್. ಸಿ. ಬಾಲಕೃಷ್ಣ ನಡೆಸಿದ್ದರು. ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ತಹಶೀಲ್ದಾರ್ ವಿಷಯವನ್ನು ಫ್ಲೈಯಿಂಗ್ ಸ್ಕ್ಯಾಡ್‌ಗೆ ತಿಳಿಸಿದ್ದರು. ಆ ಮಾಹಿತಿ ಆಧರಿಸಿ ಅಬಕಾರಿ ಸಬ್ ಇನ್ಸ್‌ಕ್ಟರ್ ಸಮೇತ ಸ್ಥಳಕ್ಕೆ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿ ಭೇಟಿ ನೀಡಿದ್ದು, ಈ ವೇಳೆ ವೇದಿಕೆ ಮೇಲೆ ಹೆಚ್.ಸಿ.ಬಾಲಕೃಷ್ಣ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದು ಕಂಡಿತ್ತು. ಈ ಕಾರ್ಯಕ್ರಮ ಆಯೋಜನೆ ಮಾಡಲು ಸಂಬಂಧಪಟ್ಟ ಚುನಾವಣೆ ಅಧಿಕಾರಿಯಿಂದ ಯಾವುದೇ ಅನುಮತಿಯನ್ನು ಪಡೆಯದ ಕಾರಣ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಬಿಜೆಪಿಗರಿಗೆ ನಾನೇ ಟಾರ್ಗೆಟ್ ಎಂದ ಸಿಎಂ; ಕಾರಣವನ್ನೂ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
ಅಲ್ಲದೆ, ಹಿಲ್ ವ್ಯೂನ ರೆಸಾರ್ಟ್‌ನಲ್ಲಿ ಪರವಾನಿಗೆ ಇಲ್ಲದೆ ಮದ್ಯಪಾನಕ್ಕೆ ವ್ಯವಸ್ಥೆಯನ್ನೂ ಮಾಡಿದ್ದ ಕಾರಣ ರೆಸಾರ್ಟ್ ಮಾನೇಜರ್ ವಿರುದ್ಧವೂ ಕ್ರಮ ಜರುಗಿಸುವಂತೆ ರಾಮನಗರ ರೂರಲ್ ಪೊಲೀಸ್ ಠಾಣೆಯಲ್ಲಿ ಕಲಂ 34 ಐಪಿಸಿ, ಕಲಂ 171(E) RP Act ಹಾಗೂ ಕಲಂ 34, 38(A) K.E Act-1965 ಅಡಿ ಪ್ರಕರಣ ದಾಖಲಾಗಿದ್ದು, ಈ ಕೇಸ್ನ ವಿಚಾರಣೆಯು 42ನೇ ಎಸಿಎಂಎಂ ಕೋರ್ಟ್ನಲ್ಲಿ ನಡೆಯುತ್ತಿತ್ತು. ಆದರೆ ಹಾಲಿ ಶಾಸಕ ಬಾಲಕೃಷ್ಣ ವಿಚಾರಣೆಗೆ ಬಾರದ ಕಾರಣ ನ್ಯಾಯಾಲಯವೀಗ ಬಿಸಿ ಮುಟ್ಟಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:30 pm, Sat, 4 April 26