ರೈತ ಯುವಕರನ್ನು ಮದುವೆಯಾಗೋರಿಗೆ 5 ಲಕ್ಷ ರೂ. ಕೊಡಿ: ಸಿಎಂಗೆ ರೈತ ಸಂಘದ ಅಧ್ಯಕ್ಷ ಮನವಿ
ರೈತ ಯುವಕರಿಗೆ ಹುಡುಗಿಯರು ಸಿಗುತ್ತಿಲ್ಲ. ರೈತ ಯುವಕರನ್ನು ಮದುವೆಯಾಗೋರಿಗೆ 5 ಲಕ್ಷ ರೂ. ಕೊಡುವಂತೆ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಈ ಕುರಿತಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೃಷಿನ ಲಾಭದಾಯಕ ಮಾಡಿದರೆ ಹೆಣ್ಣು ಸಿಗುವುದು ಕಷ್ಟ ಆಗುವುದಿಲ್ಲ. ಶೇ.80 ರಷ್ಟು ಜನ ಹಳ್ಳಿಗಳಲ್ಲಿದ್ದರು. ಈಗ ಶೇ.60 ರಷ್ಟು ಜನ ಇಲ್ಲೇ ಜೀವನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 10: ರೈತ ಯುವಕರಿಗೆ ಮದುವೆ ಆಗಲು ಹುಡುಗಿಯರು ಸಿಗುತ್ತಿಲ್ಲ. ರೈತ ಯುವಕರನ್ನು ಮದುವೆಯಾಗೋರಿಗೆ 5 ಲಕ್ಷ ರೂ. ಕೊಡಿ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸಿಎಂ ಸಿದ್ದರಾಮಯ್ಯ (Siddaramaiah) ಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಶಾಶ್ವತ ಬರ ಪರಿಹಾರಕ್ಕೆ ಸಣ್ಣ ನೀರಾವರಿಗೆ ಆದ್ಯತೆ ಕೊಡಿ. ಪಿಡಿಎಸ್ ಮೂಲಕ ಹಣ ಬದಲು ಜೋಳ, ರಾಗಿ ಧಾನ್ಯ ಕೊಡಲು ಮನವಿ ಮಾಡಲಾಗಿದೆ. ತಾತ್ಕಾಲಿಕ, ದೀರ್ಘಾವಧಿ ನೆರವಿನ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ರೈತ ಮುಖಂಡರು ಹಕ್ಕೊತ್ತಾಯ ಮಾಡಿದ್ದಾರೆ.
ಕೃಷಿನ ಲಾಭದಾಯಕ ಮಾಡಿದರೆ ಹೆಣ್ಣು ಸಿಗುವುದು ಕಷ್ಟ ಆಗುವುದಿಲ್ಲ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಡಗಲಪುರ ನಾಗೇಂದ್ರ ಅವರು ಇಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ರೈತರಿಗೆ ಮದುವೆ ಆಗಲು ಹುಡುಗಿಯರು ಸಿಗುವುದು ಕಷ್ಟ ಅಂತ ಮನವಿ ಸಲ್ಲಿಸಿದ್ದಾರೆ. ನಾವೆಲ್ಲರೂ ರೈತರ ಮನೆತನದವರು. ರೈತರ ಮಕ್ಕಳೇ ಈಗ ಎಲ್ಲಾ ಕಡೆ ಇರುವುದು. ಕೃಷಿನ ಲಾಭದಾಯಕ ಮಾಡಿದರೆ ಹೆಣ್ಣು ಸಿಗುವುದು ಕಷ್ಟ ಆಗುವುದಿಲ್ಲ. ಶೇ.80 ರಷ್ಟು ಜನ ಹಳ್ಳಿಗಳಲ್ಲಿದ್ದರು. ಈಗ ಶೇ.60 ರಷ್ಟು ಜನ ಇಲ್ಲೇ ಜೀವನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರ 80% ಲೂಟಿ ಮಾಡುತ್ತಿದ್ದು, ಮುಖ್ಯಮಂತ್ರಿಗಳೆ ಪೇ ಸಿದ್ದರಾಮಯ್ಯ ಅಂತ ಪೋಸ್ಟರ್ ಅಂಟಿಸಿಕೊಳ್ಳಿ: ಆರ್ ಅಶೋಕ್ ವಾಗ್ದಾಳಿ
ಪಟ್ಟಣಗಳಲ್ಲಿ ಈಗ ಸಮಸ್ಯೆ ಹೆಚ್ಚಾಗುತ್ತಿದೆ. ನಿಮ್ಮ ಹಕ್ಕೊತ್ತಾಯಗಳನ್ನ ಗಂಭೀರವಾಗಿ ಪರಿಗಣಿಸುತ್ತೇನೆ. ನಮ್ಮ ಮ್ಯಾನಿಫ್ಯಾಸ್ಟೋ ಕಮಿಟಿ ಬಂದಿದೆ. ರೈತರು, ಜನರ ಅಭಿಪ್ರಾಯ ಕೇಳ್ಳುತ್ತಾರೆ. ಬಡಗಲಪುರ ನಾಗೇಂದ್ರ ಅಲ್ಲಿಗೆ ಹೋಗಿ ಬಂದಿದ್ದಾರೆ. ಈಗ ನಾನೂ ಸಹ ಸದಸ್ಯನಿದ್ದೇನೆ. ಕೋಮುವಾದಿಗಳ ವಿರುದ್ಧವಾದ ನಿಲುವನ್ನ ನೀವು ತೆಗೆದುಕೊಂಡಿದ್ದೀರ ಇದು ಸ್ವಾಗತಾರ್ಹ. ಆರೋಗ್ಯಕರ ಸಮಾಜಕ್ಕೆ ಹೋರಾಟಗಳು ಬೇಕಾಗುತ್ತೆ. ಹೋರಾಟ ಇಲ್ಲದೆ ಹೋದರೆ ಸಮಾಜದ ಸಮಸ್ಯೆಗಳಿಗೆ ಉತ್ತರ ಸಿಗುವುದಿಲ್ಲ. ಸಂಘಟನೆ, ಹೋರಾಟ ಸಮಸ್ಯೆಗಳಿಗೆ ಅಗತ್ಯ ಎಂದು ಹೇಳಿದ್ದಾರೆ.
ಎಪಿಎಂಸಿ ಕಾಯ್ದೆ ಜಾರಿಗೆ ಮನವಿ ಮಾಡಿದ್ದಾರೆ. ವರದಿ ಬಂದ ಕೂಡಲೇ ಜಾರಿ ಮಾಡುತ್ತೇವೆ. 20 ಹಕ್ಕೊತ್ತಾಯ ಮಾಡಿದ್ದಾರೆ, ಯಾವುದು ಮಾಡಲು ಸಾಧ್ಯವೋ ಅದನ್ನ ಮಾಡುತ್ತೇವೆ. ಕೃಷಿಕ ಅನ್ನದಾತ. ರೈತ ಸಮುದಾಯದಿಂದ ಸ್ವಾವಲಂಬನೆ ಆಗಿದೆ ಎಂದರು.
ಇದನ್ನೂ ಓದಿ: ಈಶ್ವರಪ್ಪ ಹೇಳಿದ್ದು ಮತ್ತು ಕಾಂಗ್ರೆಸ್ ನಾಯಕರು ಅರ್ಥೈಸಿಕೊಂಡಿರುವುದರ ನಡುವೆ ಬಹಳ ವ್ಯತ್ಯಾಸವಿದೆ: ಬಿಎಸ್ ಯಡಿಯೂರಪ್ಪ
ಭಾರತದ ಜನಸಂಖ್ಯೆ 143 ಕೋಟಿ ಜನರ ಆಹಾರದ ಸ್ವಾವಲಂಬಿ ಆಗಿದೆ ಅಂದರೆ ರೈತರೇ ಕಾರಣ. ರೈತರು, ಸೈನಿಕರು, ಶಿಕ್ಷಕರು ಈ ಮೂವರನ್ನ ಸದಾ ನೆನೆಯಬೇಕು. ಇವರೆಲ್ಲರನ್ನ ಸ್ಮರಿಸೋದು ನಮ್ಮ ಕರ್ತವ್ಯ, ಜವಾಬ್ದಾರಿ. ಇವರಿಲ್ಲದೇ ಹೋದರೆ ದೇಶ ಕಷ್ಟದ ಸ್ಥಿತಿಗೆ ಹೋಗುತ್ತೆ ಎಂದು ಹೇಳಿದ್ದಾರೆ.
ಅವರಿಂದಲೇ ನಾನು ಎರಡು ಬಾರಿಗೆ ಸಿಎಂ ಆಗಿದ್ದೇನೆ: ಸಿಎಂ
ರೈತ ಸಂಘಟನೆಗೆ ನಂಜುಂಡಸ್ವಾಮಿ ಜೀವನವನ್ನು ಮುಡುಪಾಗಿಟ್ಟಿದ್ದರು. ನಾನು ಮೈಸೂರು ಜಿಲ್ಲೆಯ ರೈತರ ಸಂಘ ಜನರಲ್ ಸೆಕ್ರೆಟರಿ ಆಗಿದ್ದೆ. ನಂತರ ಚುನಾವಣೆಯಲ್ಲಿ ನಿಲ್ಲಬೇಕು ಅಂತ ರೈತ ಸಂಘದಿಂದ ದೂರ ಉಳಿದೆ. ಅವರು ನನ್ನ ಉಚ್ಚಾಟನೆ ಮಾಡಿದರು. ಎರಡು ವರ್ಷ ರೈತರ ಸಂಘದಲ್ಲಿ ಕೆಲಸ ಮಾಡಿದ್ದೇನೆ. ನಂಜುಂಡಸ್ವಾಮಿ ಹೇಳಿಕೊಟ್ಟಿದ್ದು ಏನೂ ಅಂದರೆ ಗಟ್ಟಿಯಾದ ನಿರ್ಧಾರ ಕೈಗೊಳ್ಳುತ್ತಿದ್ದರು.
ನಾನು ರಾಜಕೀಯ ಪಕ್ಷದ ಸದಸ್ಯ ಆಗಿದ್ರೆ, ರಾಜಕೀಯದಲ್ಲಿ ಆಸಕ್ತಿ ಬೆಳೆದಿದೆ ಅಂದರೆ ಅದಕ್ಕೆ ನಂಜುಂಡಸ್ವಾಮಿ ಕಾರಣ. ಅವರು ಇಲ್ಲದೇ ಇದ್ದರೆ ನಾನು ರಾಜಕೀಯಕ್ಕೆ ಬರುತ್ತಿದ್ದನೋ ನನಗೆ ಗೊತ್ತಿಲ್ಲ. ಅವರಿಂದಲೇ ನಾನು ಎರಡು ಬಾರಿಗೆ ಸಿಎಂ ಆಗಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:03 pm, Sat, 10 February 24