ಸರ್ಕಾರ 80% ಲೂಟಿ ಮಾಡುತ್ತಿದ್ದು, ಮುಖ್ಯಮಂತ್ರಿಗಳೆ ಪೇ ಸಿದ್ದರಾಮಯ್ಯ ಅಂತ ಪೋಸ್ಟರ್ ಅಂಟಿಸಿಕೊಳ್ಳಿ: ಆರ್ ಅಶೋಕ್ ವಾಗ್ದಾಳಿ
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಸರ್ಕಾರದ ಮೇಲೂ 40% ಕಮಿಷನ್ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಕಳೆದ ಎಂಟು ತಿಂಗಳಿಂದ ನಿರಂತರವಾಗಿ ಸರ್ಕಾರ ಕಮಿಷನ್ ಪಡೆಯುತ್ತಿದೆ. ಸರ್ಕಾರ ಸುಲಿಗೆ ಮಾಡುತ್ತಿದೆ ಎಂದು ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಇದು ಲೂಟಿಕೋರರ ಸರ್ಕಾರ ಎಂಬುದು ಸಾಬೀತು ಆಗಿದೆ. 80% ಲೂಟಿ ಮಾಡುತ್ತಿರುವುದು ನಿಜ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪ ಮಾಡಿದರು.
ಬೆಂಗಳೂರು, ಫೆಬ್ರವರಿ 10: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಕಾಂಗ್ರೆಸ್ ಸರ್ಕಾರದ (Congress Government) ಮೇಲೂ 40% ಕಮಿಷನ್ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಕಳೆದ ಎಂಟು ತಿಂಗಳಿಂದ ನಿರಂತರವಾಗಿ ಸರ್ಕಾರ ಕಮಿಷನ್ ಪಡೆಯುತ್ತಿದೆ. ಸರ್ಕಾರ ಸುಲಿಗೆ ಮಾಡುತ್ತಿದೆ ಎಂದು ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಇದು ಲೂಟಿಕೋರರ ಸರ್ಕಾರ ಎಂಬುದು ಸಾಬೀತು ಆಗಿದೆ. ಎಲ್ಲ ಮಂತ್ರಿಗಳು ಅವರವರ ಹೆಸರಲ್ಲಿ ಟ್ಯಾಕ್ಸ್ ಹಾಕಿಕೊಂಡಿದ್ದಾರೆ. ಡೆವಲಪರ್ಗಳು, ಗುತ್ತಿಗೆದಾರರು ಹೇಳುವ ಪ್ರಕಾರ ಸ್ಕ್ವೇರ್ ಫೀಟ್ ಜಾಗಕ್ಕೆ ಹಣ ನಿಗದಿ ಮಾಡಿದ್ದರೆ. ಸ್ಕ್ವೇರ್ ಫೀಟ್ ಜಾಗಕ್ಕೆ 75 ರೂ. ಹಣ ನಿಗದಿಪಡಿಸಿದ್ದಾರೆ. 4000 ಚದರ ಅಡಿ ಮೇಲೆ ಬಿಲ್ಡಿಂಗ್ ಕಟ್ಟುವವರಿಂದ ಹಣ ವಸೂಲಿ ಮಾಡಿದ್ದಾರೆ. 80% ಲೂಟಿ ಮಾಡುತ್ತಿರುವುದು ನಿಜ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashok) ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಪೇಸಿಎಂ ಪೋಸ್ಟರ್ ಅಂಟಿಸಿದ್ದರು. ನಿಮ್ಮ ಮುಖದ ಮೇಲೆ ಯಾವ ಪೋಸ್ಟರ್ ಅಂಟಿಸಿಕೊಳ್ಳುತ್ತೀರಾ? ಈಗ ಪೇಸಿದ್ದರಾಮಯ್ಯ ಅಂತಾ ಪೋಸ್ಟರ್ ಅಂಟಿಸಿಕೊಳ್ಳುತ್ತೀರಾ? ಪಂಚ ರಾಜ್ಯ ಚುನಾವಣೆಗೆ ದುಡ್ಡು ಲೂಟಿ ಮಾಡಿ ಕಳಿಸಿದ್ದಾಯ್ತು. ಈಗ ಲೋಕಸಭಾ ಚುನಾವಣೆಗೂ ಲೂಟಿ ಮಾಡಿ ಕಳಿಸುತ್ತಿದ್ದೀರಾ?ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮತ್ತೆ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘ: ಈ ಬಾರಿ ಅಧಿಕಾರಿಗಳೇ ಹಣ ಕೇಳ್ತಿದ್ದಾರೆ ಎಂದ ಕೆಂಪಣ್ಣ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಕಮಿಷನ್ ಇದೆ ಅಂತ ಸರ್ಕಾರದ ಮೇಲೆ ಗುರುತರ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪ ಇರುವ ಸರ್ಕಾರಕ್ಕೆ ಮುಂದುವರಿಯುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಕೆಂಪಣ್ಣ ಅವರು ಆರೋಪಿಸಿದ್ದನ್ನು ಸಿಬಿಐ ತನಿಖೆಗೆ ನೀಡಲಿ. ಕೆಂಪಣ್ಣ ಯಾರ ಯಾರ ಬಗ್ಗೆ ಹೇಳಿದ್ದಾರೆ ಅವರೆಲ್ಲರದ್ದೂ ತನಿಖೆಗೆ ನೀಡಿ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ನಾವು ಅಸೆಂಬ್ಲಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಿದ ನಂತರ ಕಾಂಗ್ರೆಸ್ನವರು ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಅವರು ಹಾದಿ ಬೀದಿಯಲ್ಲಿ ನಿಂತು ಉತ್ತರ ನೀಡಿಲ್ಲ. ನಿಮಗೆ ಧಮ್ ಇದ್ದರೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ಎಂದು ಸವಾಲು ಹಾಕಿದರು.
ದೇಶದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂಬ್ ಕೆಎಸ್ ಈಶ್ವರಪ್ಪ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದು ಕೆ.ಎಸ್.ಈಶ್ವರಪ್ಪ ಅವರ ವೈಯಕ್ತಿಕ ಹೇಳಿಕೆ. ಕೆ.ಎಸ್. ಈಶ್ವರಪ್ಪ ಅವರು ಯಾರೋ ಒಬ್ಬರಿಗೆ ಗುಂಡಿಕ್ಕಿ ಎಂದು ಹೇಳಿಲ್ಲ. ದೇಶದ್ರೋಹ ಕೆಲಸ ಮಾಡುವವರ ವಿರುದ್ಧ ಕಾನೂನು ತನ್ನಿ ಅಂದಿದ್ದಾರೆ ಎಂದರು.
ಇದನ್ನೂ ಓದಿ: ಅಧಿಕಾರಿಗಳು ಕಮೀಶನ್ ಕೇಳಿದ್ದರೆ ಕೆಂಪಣ್ಣನವರು ನಾಗಮೋಹನ್ ದಾಸ್ ಸಮಿತಿಗೆ ದೂರು ಸಲ್ಲಿಸಲಿ: ಸಿದ್ದರಾಮಯ್ಯ
ಸುಧಾಕರ್ ಭ್ರಮ ನಿರಸನ ಆಗುವುದು ಬೇಡ
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ. ಕೆ. ಸುಧಾಕರ್ಗೆ ಟಿಕೆಟ್ ಕೊಡಲ್ಲ ಅಂತಲೂ ಹೇಳಿಲ್ಲ ಕೊಡುತ್ತೇವೆ ಅಂತಲೂ ಹೇಳಿಲ್ಲ. ಪಾರ್ಟಿ ಇನ್ನೂ ಏನೂ ನಿರ್ಧಾರವೇ ಮಾಡಿಲ್ಲ. ಸುಧಾಕರ ಈಗಲೇ ಭ್ರಮ ನಿರಸನ ಆಗುವುದು ಬೇಡ. ಪಾರ್ಟಿ ನಾಯಕರು ಗೆಲ್ಲುವ ಮಾನದಂಡದ ಮೇಲೆ ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ವಿರುದ್ಧ ಹೋರಾಟಕ್ಕೆ ಎಸ್ಡಿಪಿಐ ಕರೆ ನೀಡಿರುವ ವಿಚಾರವಾಗಿ ಮಾತನಾಡಿದ ಅವರು ಇದು ದೇಶದ್ರೋಹದ ಹೇಳಿಕೆ. ಪಿಎಫ್ಐ ಬ್ಯಾನ್ ಆಗಿದೆ. ಎಸ್ಸಿಪಿಐನ ಒಂದು ಅಂಗ ಸಂಸ್ಥೆ ಪಿಎಫ್ಐ. ಪಿಎಫ್ಐನಲ್ಲಿರುವವರು ಈಗ ಎಸ್ಸಿಪಿಐಗೆ ಬಂದು ಇಲ್ಲಿ ಸೇರಿಕೊಂಡಿದ್ದಾರೆ. ಕೋರ್ಟ್ ಆದೇಶದ ಪ್ರಕಾರ ಅಲ್ಲಿ ಪೂಜೆ ಆಗುತ್ತಿದೆ. ಜ್ಞಾನವಾಪಿ ಅದು ಹಿಂದು ದೇವಾಲಯ ಅಂತ ಕುರುಹು ಸಿಕ್ಕಿದೆ. ಇದಕ್ಕೆ ಎಲ್ಲಾ ಪೂರಕ ದಾಖಲೆ ಸಿಕ್ಕಿದೆ. ರಾಮನ ಮಂದಿರ ಕಟ್ಟಿರುವುದು ಕೋರ್ಟ್ ಆದೇಶದ ಮೇರೆಗೆ. ಅಲ್ಲಿ ಉರ್ದು, ಅರೇಬಿಕ್ ಸಾಕ್ಷಿ ಸಿಕ್ಕಿದ್ದರೆ ಹೇಳಬಹುದಿತ್ತು. ಆದರೆ ಜ್ಞಾನವಾಪಿಯಲ್ಲಿ ಸಿಕ್ಕಿರುವುದು ಹಿಂದೂ ದೇವಾಲಯದ ಪೂರವೆಗಳು. ಕೋರ್ಟ್ ತೀರ್ಪು ನಿಮಗೆ ಒಪ್ಪಿಗೆ ಇಲ್ಲ ಅಂದರೆ ಹೈಕೋರ್ಟ್, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಹೋಗಬಹುದು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Sat, 10 February 24