ಇಂದು ಮೈಸೂರಿಗೆ ಅಮಿತ್ ಶಾ, ಮಂಡ್ಯ, ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ತೀರ್ಮಾನ?
ಮಂಡ್ಯ ಲೋಕಸಭಾ ಕ್ಷೇತ್ರ ಈಗ ಬಿಸಿ ಬಿಸಿ ಚರ್ಚೆಯಲ್ಲಿದೆ. ಒಂದೆಡೆ ದೆಹಲಿಯಲ್ಲಿ ಮಂಡ್ಯ ಬಿಜೆಪಿ ಟಿಕೆಟ್ಗಾಗಿ ಸುಮಲತಾ ಅಂಬರೀಶ್ ಕಸರತ್ತು ನಡೆಸಿದ್ದರೆ, ಇತ್ತ ಜೆಡಿಎಸ್ ಮಂಡ್ಯ ನಮಗೆ ಬೇಕೆಂದು ಪಟ್ಟು ಹಿಡಿದಿದೆ. ಇದರ ಮಧ್ಯೆ ಇಂದು ಮೈಸೂರಿಗೆ ಅಮಿತ್ ಶಾ ಆಗಮಿಸಲಿದ್ದು, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಹಿಸಲಿದ್ದಾರೆ. ಇದರ ಜೊತೆ ಜೊತೆಗೆ ಲೋಕಸಭಾ ಚುನಾವಣೆ ಸಂಬಂಧ ಮಹತ್ವದ ಸಭೆ ನಡೆಸಲಿದ್ದು, ಮಂಡ್ಯ ಕ್ಷೇತ್ರ, ಎಚ್ಡಿ ಕುಮಾರಸ್ವಾಮಿ ಸ್ಪರ್ಧೆ ಹಾಗೂ ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನಕೈಗೊಳ್ಳುವ ಸಾಧ್ಯತೆಗಳಿವೆ.
ಮೈಸೂರು, (ಫೆಬ್ರವರಿ 10): ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆ ರಾಜಕೀಯ ಕಣ ರಂಗೇರುತ್ತಿದೆ. ಈಗ ಎಲ್ಲರ ದೃಷ್ಟಿ ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha constituency) ಮೇಲೆ ನೆಟ್ಟಿದೆ. ಮತ್ತೊಂದೆಡೆ ಈ ಬಾರಿ ಲೋಕಸಭೆ ಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಎಚ್ಡಿ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದು (ಫೆ.10) ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಆಗಮಿಸಲಿದ್ದು, ಎಲ್ಲಾ ಗೊಂದಲಗಳನ್ನು ಬಗೆಹರಿಸಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಸೀಟು ಹಂಚಿಕೆ, ಮಂಡ್ಯ ಕ್ಷೇತ್ರ ಹಾಗೂ ಎಚ್ಡಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಕ್ಲ್ಯಾರಿಟಿ ಸಿಗುವ ಸಾಧ್ಯತೆಗಳಿವೆ.
ಇಂದು ರಾತ್ರಿ 10.50ಕ್ಕೆ ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಅಮಿತ್ ಶಾ, ನೇರವಾಗಿ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರೆಡಿಸನ್ ಬ್ಲೂ ಹೋಟೆಲ್ಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ. ಇನ್ನು ನಾಳೆ (ಫೆ.11) ಬೆಳಗ್ಗೆ ಚಾಮುಂಡೇಶ್ವರಿ ದರ್ಶನ ಪಡೆದು ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನ ಸುತ್ತೂರು ಮಠದಿಂದ ವಾಪಸ್ ರೆಡಿಸನ್ ಬ್ಲೂ ಹೋಟೆಲ್ ಆಗಮಿಸಿ ಎರಡು ಗಂಟೆಗಳ ಕಾಲ ಲೋಕಸಭಾ ಚುನಾವಣೆ ಸಂಬಂಧ ರಾಜ್ಯ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: ಈ ಬಾರಿ ಲೋಕಸಭೆಗೆ ಕುಮಾರಸ್ವಾಮಿ ಸ್ಪರ್ಧಿಸುವ ಸುಳಿವು ನೀಡಿದ ದೇವೇಗೌಡ, ಯಾವ ಕ್ಷೇತ್ರದಿಂದ?
ಮಹತ್ವದ ಸಭೆ ನಡೆಸಲಿರುವ ಅಮಿತ್ ಶಾ
ಇನ್ನು ನಾಳೆ (ಭಾನುವಾರ) ಮಧ್ಯಾಹ್ನ 2.40ಕ್ಕೆ ಅಮಿತ್ ಶಾ ರೆಡಿಸನ್ ಬ್ಲೂ ಹೋಟೆಲ್ ಬಿಜೆಪಿ ನಾಯಕರ ಸಭೆ ನಡೆಸಲಿದ್ದು, ಲೋಕಸಭೆ ಚುನಾವಣೆ ಸಂಬಂಧ ಮಹತ್ವ ಚರ್ಚೆ ನಡೆಸಲಿದ್ದಾರೆ. ಇನ್ನು ಮುಖ್ಯವಾಗಿ ಸಭೆಯಲ್ಲಿ ಬಿಜೆಪಿ ನಾಯಕರ ಜೊತೆಗೆ ಮಿತ್ರ ಪಕ್ಷದ ನಾಯಕ ಎಚ್ಡಿ ಕುಮಾರಸ್ವಾಮಿ ಸಹ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಸಭೆ ಮಹತ್ವ ಪಡೆದುಕೊಂಡಿದ್ದು, ಈ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಅದರಲ್ಲೂ ಮುಖ್ಯವಾಗಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕೋ ಅಥವಾ ಉಳಿಸಿಕೊಂಡು ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸಬೇಕೋ ಎನ್ನುವ ಬಗ್ಗೆಯೂ ನಿರ್ಧಾರವಾಗಲಿದೆ. ಹಾಗೇ ಈ ಬಾರಿ ಲೋಕಸಭಾ ಚುನಾವಣೆಗೆ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಬಗ್ಗೆಯೂ ಅಮಿತ್ ಶಾ ಮಾತುಕತೆ ನಡೆಸಲಿದ್ದು, ಯಾವ ಕ್ಷೇತ್ರದಿಂದ ಎಚ್ಡಿಕೆ ಸ್ಪರ್ಧಿಸಿದರೆ ಬಿಜೆಪಿಗೆ ಲಾಭವಾಗಲಿದೆ ಎನ್ನುವ ಬಗ್ಗೆಯೂ ಚರ್ಚಿಸಲಿದ್ದಾರೆ.
ಕುಮಾರಸ್ವಾಮಿ ಕಣಕ್ಕಿಳಿಸುವ ಬಗ್ಗೆ ಶಾ ಲೆಕ್ಕಾಚಾರ
ಮೂಲಗಳ ಪ್ರಕಾರ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದರೆ ಅವರ ವರ್ಚಸ್ಸು ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಕ್ಷೇತ್ರಗಳ ಮೇಲೂ ಬೀಳುವುದರಿಂದ ಗೆಲುವು ಸುಲಭವಾಗಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ಹೀಗೆ ಕುಮಾರಸ್ವಾಮಿ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರಗಳಿಗೂ ಸಹ ಅನುಕೂಲವಾಗುವ ಸಂಬಂಧ ಅಮಿತ್ ಶಾ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ಡಿಕೆ ಬ್ರದರ್ಸ್ ಪ್ರಭಾವ ಕುಗ್ಗಿಸಲು ಕುಮಾರಸ್ವಾಮಿಯನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಶಾ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಅಂಶಗಳನ್ನು ನಾಳಿನ ಸಭೆಯಲ್ಲಿ ನಾಯಕರ ಜೊತೆ ಶಾ ಚರ್ಚಿಸುವ ಸಾಧ್ಯೆತಗಳಿವೆ. ಅಲ್ಲದೇ ಕುಮಾರಸ್ವಾಮಿ ಕಣಕ್ಕಿಳಿಯುವ ಕ್ಷೇತ್ರವನ್ನು ಅಮಿತ್ ಶಾ ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಸೀಟು ಹಂಚಿಕೆ ಫೈನಲ್?
ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು-ಕೊಡಗು ಸೇರಿದಂತೆ ಒಟ್ಟು ಆರು ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಈ ಸಂಬಂಧ ನಾಳಿನ ಸಭೆಯಲ್ಲಿ ಅಮಿತ್ ಶಾ, ಕುಮಾರಸ್ವಾಮಿ ಹಾಗೂ ರಾಜ್ಯ ಬಿಜೆಪಿ ನಾಯಕರ ಚರ್ಚಿಸಿ ಸೀಟು ಹಂಚಿಕೆ ಫೈನಲ್ ಮಾಡುವ ಸಾಧ್ಯತೆಗಳಿವೆ. ಇದರ ಜೊತೆಗೆ ದೆಹಲಿ ಮಟ್ಟದಲ್ಲೂ ಸದ್ದು ಮಾಡುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರ ಯಾರಿಗೆ ಎನ್ನುವುದನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಅಮಿತ್ ಶಾ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಹಿಸುವುದರ ಜೊತೆ ಜೊತೆಗೆ ಲೋಕಸಭಾ ಚುನಾವಣೆ ಸಂಬಂಧ ರಾಜ್ಯ ನಾಯಕರ ಜೊತೆ ಸಭೆ ಮಾಡಲಿದ್ದು, ಒಂದಷ್ಟು ಅಂತೆ-ಕಂತೆಗಳಿಗೆ ತೆರೆಬೀಳುವ ಸಾಧ್ಯತೆಗಳಿವೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ