
ಬೆಂಗಳೂರು, ಜುಲೈ 20: ಶೀಘ್ರದಲ್ಲಿ ಗಣೇಶ ಹಬ್ಬವು ಸಮೀಪಿಸುತ್ತಿದೆ. ಹೀಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ಮೂರ್ತಿಗಳ ಹಾವಳಿಯನ್ನು ತಡೆಗಟ್ಟಲು ತುರ್ತು ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಕೃಷ್ಣಬೈರೇಗೌಡಗೆ (Krishna Byre Gowda) ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
‘ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರತಿ ವರ್ಷದಂತ ಈ ವರ್ಷವೂ ಮಾರುಕಟ್ಟೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳ ಹಾವಳಿ ವಿಪರೀತವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ನಮ್ಮ ಜಲಮೂಲಗಳು ಮತ್ತು ಪರಿಸರ ತೀವ್ರವಾಗಿ ಹಾಳಾಗುವುದಲ್ಲದೆ, ಗಣೇಶನ ಮೇಲಿನ ಸಾಂಪ್ರದಾಯಿಕ ಶ್ರದ್ಧೆ ಹಾಗೂ ಪಾವಿತ್ರ್ಯತೆಗೂ ಧಕ್ಕೆಯಾಗುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: 2700 ಅನಾಥ ವಾಹನಗಳನ್ನು ಪಟ್ಟಿ ಮಾಡಿದ್ದೇವೆ, ಟೋಯಿಂಗ್ ಬಳಿಕವೂ ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
‘ಜೂನ್ 28ರಂದು ಪ್ರಧಾನಿ ನರೇಂದ್ರ ಮೋದಿ ಸಹ ತಮ್ಮ “ಮನ್ ಕೀ ಬಾತ್” ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವಂತೆ ಹಾಗೂ ಪಿಓಪಿ ಮೂರ್ತಿಗಳನ್ನು ತ್ಯಜಿಸುವಂತೆ ದೇಶದ ಜನತೆಗೆ ಗಣೇಶನ ಹಬ್ಬಕ್ಕೂ ಸುಮಾರು 75 ದಿನಗಳ ಮುಂಚೆಯೇ ಕರೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
‘ಈ ಗಂಭೀರ ವಿಚಾರದ ಕುರಿತು ಈ ಹಿಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ಆಯುಕ್ತ ಮಹೇಶ್ವರ್ ರಾವ್ಗೆ ಜೂನ್ 29ರಂದು ಪತ್ರದ ಮೂಲಕ ಗಮನಕ್ಕೆ ತರಲಾಗಿತ್ತು. ಅದಾದ ಮೇಲೆ, ಜುಲೈ 12 ರಂದು ಮತ್ತೊಂದು ಪತ್ರ ಸಹ ಕಳುಹಿಸಲಾಗಿತ್ತು. ಅವರು ಜುಲೈ 13ರಂದು ಈ ಬಗ್ಗೆ ನನಗೆ ಉತ್ತರ ನೀಡುವುದಾಗಿ ತಿಳಿಸಿದ್ದರು. ಆದರೆ, GBA ಯಿಂದ ಇದುವರೆಗೂ ನನಗೆ ಸಂಬಂಧಪಟ್ಟವರಿಂದ ಯಾವುದೇ ರೀತಿಯ ಉತ್ತರವಾಗಲೀ ಅಥವಾ ಪ್ರತಿಕ್ರಿಯೆಯಾಗಲೇ ಬಂದಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳು ಬಡವರು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ. ಆದ್ಧರಿಂದ ಈ ವಿಷಯವನ್ನು ನೀವು ಗಂಭೀರವಾಗಿ ಪರಿಗಣಿಸಿ, ಕೂಡಲೇ ಮಧ್ಯಪ್ರವೇಶಿಸಬೇಕು. ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ನೀಡಿ ತುರ್ತು ಕ್ರಮಕೈಗೊಳ್ಳುವಂತೆ’ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.