AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಯಮ ಹೇಳೋರು ಎಲ್ಲೋದ್ರು?: ಜಯನಗರದಲ್ಲಿ ಪೊಲೀಸರು ಸೀಜ್ ಮಾಡಿದ ವಾಹನಗಳಿಂದಲೇ ಅರ್ಧ ರಸ್ತೆ ಬ್ಲಾಕ್

ಬೆಂಗಳೂರಿನ ಜಯನಗರದಲ್ಲಿ ಟ್ರಾಫಿಕ್ ಪೊಲೀಸರು ವಶಪಡಿಸಿಕೊಂಡ ಸೀಜ್ ವಾಹನಗಳು ವರ್ಷಗಳಿಂದ ರಸ್ತೆ ಬದಿಯಲ್ಲೇ ನಿಂತಿವೆ. ಇವು ಅರ್ಧ ರಸ್ತೆಯನ್ನು ಆಕ್ರಮಿಸಿ, ತೀವ್ರ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ನಾಗರಿಕರು ನಿಯಮ ಪಾಲಿಸದಿದ್ದರೆ ದಂಡ ವಿಧಿಸುವ ಪೊಲೀಸರೇ, ತಮ್ಮ ವಾಹನಗಳಿಂದ ರಸ್ತೆ ತಡೆದಿರುವುದು ದ್ವಂದ್ವ ನೀತಿಗೆ ಉದಾಹರಣೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ನಿಯಮ ಹೇಳೋರು ಎಲ್ಲೋದ್ರು?: ಜಯನಗರದಲ್ಲಿ ಪೊಲೀಸರು ಸೀಜ್ ಮಾಡಿದ ವಾಹನಗಳಿಂದಲೇ ಅರ್ಧ ರಸ್ತೆ ಬ್ಲಾಕ್
ಸೀಜ್ ವಾಹನ ಸಮಸ್ಯೆImage Credit source: Tv9 kannada
TV9 Web
| Edited By: |

Updated on: Jul 16, 2026 | 8:09 AM

Share

ಬೆಂಗಳೂರು, ಜು.16: ರಾಜಧಾನಿಯ ಜನರಿಗೆ ಸಂಚಾರ ನಿಯಮ ಪಾಲನೆ ಮಾಡುವಂತೆ ಮತ್ತು ರಸ್ತೆ ಬದಿ ವಾಹನ ನಿಲ್ಲಿಸದಂತೆ ದಿನವಿಡೀ ಪಾಠ ಹೇಳುವ ಟ್ರಾಫಿಕ್ ಪೊಲೀಸರೇ ಈಗ ನಿಯಮ ಉಲ್ಲಂಘಿಸುತ್ತಿದ್ದಾರಾ? ಇಂತಹದ್ದೊಂದು ಗಂಭೀರ ಪ್ರಶ್ನೆ ಈಗ ಸಿಲಿಕಾನ್ ಸಿಟಿಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಜಯನಗರದ ಪ್ರಮುಖ ರಸ್ತೆಯೊಂದರ ಬದಿಯಲ್ಲೇ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಸೀಜ್ ಮಾಡಿರುವ ವಾಹನಗಳು ವರ್ಷಗಳಿಂದ ಧೂಳು ಹಿಡಿದು ನಿಂತಿದ್ದು, ಅರ್ಧ ರಸ್ತೆಯನ್ನೇ ಆಕ್ರಮಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ದೃಶ್ಯ ಜಯನಗರದ ಪ್ರಮುಖ ರಸ್ತೆಯಲ್ಲಿ ಕಂಡು ಬಂದಿದೆ. ಇಲ್ಲಿ ಸಾಲು ಸಾಲಾಗಿ ಸಾಲುಗಟ್ಟಿ ನಿಂತಿರುವುದು ಯಾವುದೇ ಸಾಮಾನ್ಯ ಸವಾರರ ವಾಹನಗಳಲ್ಲ. ಬದಲಾಗಿ ಪೊಲೀಸರು ವಿವಿಧ ಅಪರಾಧ ಹಾಗೂ ಅಪಘಾತ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ (ಸೀಜ್) ವಾಹನಗಳು. ಈ ವಾಹನಗಳು ಕಳೆದ ಕೆಲವು ತಿಂಗಳುಗಳಲ್ಲ, ಬರೋಬ್ಬರಿ ವರ್ಷಗಳಿಂದ ಇದೇ ರಸ್ತೆ ಬದಿಯಲ್ಲಿ ಧೂಳು ಹಿಡಿದು, ತುಕ್ಕು ಹಿಡಿದು ನಿಂತಿವೆ.

ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ಈ ವಾಹನಗಳಿಂದಾಗಿ ಅರ್ಧ ರಸ್ತೆಯೇ ಮುಚ್ಚಿ ಹೋಗಿದೆ. ಇದರ ಪರಿಣಾಮವಾಗಿ ಈ ಭಾಗದಲ್ಲಿ ಪ್ರತಿದಿನ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತಿದ್ದು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಬೆಂಗಳೂರು ನಗರದಾದ್ಯಂತ ರಸ್ತೆ ಬದಿಗಳಲ್ಲಿ ಅನಾಥವಾಗಿ ಅಥವಾ ದೀರ್ಘಕಾಲ ನಿಂತಿರುವ ಸಾರ್ವಜನಿಕರ ವಾಹನಗಳನ್ನು ಗುರುತಿಸಿ, ನೋಟಿಸ್ ಸ್ಟಿಕ್ಕರ್ ಅಂಟಿಸಿ ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರು ಜಂಟಿಯಾಗಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಜಯನಗರದ ಈ ರಸ್ತೆಯಲ್ಲಿ ಪೊಲೀಸರೇ ಕಾನೂನು ಉಲ್ಲಂಘಿಸಿ ಸೀಜ್ ವಾಹನಗಳನ್ನು ರಸ್ತೆಯಲ್ಲೇ ಬಿಟ್ಟಿರುವುದು ಸಾರ್ವಜನಿಕರ ಕಣ್ಣು ಕೆಂಪಾಗಿಸಿದೆ. “ಸಾಮಾನ್ಯ ನಾಗರಿಕರು ಗಾಡಿ ನಿಲ್ಲಿಸಿದರೆ ದಂಡ ಹಾಕುವ ಪೊಲೀಸರು, ತಾವೇ ರಸ್ತೆ ಆಕ್ರಮಿಸಿಕೊಂಡಾಗ ಮೌನ ವಹಿಸುವುದು ಎಷ್ಟು ಸರಿ? ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು,” ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

“ರಸ್ತೆ ನಿಯಮ ಪಾಲನೆ ಬಗ್ಗೆ ಜನರಿಗೆ ಪಾಠ ಹೇಳುವ ಇಲಾಖೆಗಳು ಮೊದಲು ತಮ್ಮ ಆವರಣ ಹಾಗೂ ತಮ್ಮ ವಶದಲ್ಲಿರುವ ವಾಹನಗಳ ಸೂಕ್ತ ವಿಲೇವಾರಿ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಇಲಾಖೆಗೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಮತ್ತೊಂದು ನ್ಯಾಯ ಎನ್ನುವ ತಾರತಮ್ಯ ನಿಲ್ಲಬೇಕು.” ಎಂದು ಸ್ಥಳೀಯ ನಿವಾಸಿ ಜಯಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಅತ್ಯುತ್ತಮ ವಾಯು ಗುಣಮಟ್ಟ: ಬೆಂಗಳೂರಿನ ಹಲವೆಡೆ ‘ಗ್ರೀನ್ ಜೋನ್’

ಒಟ್ಟಿನಲ್ಲಿ, ಜನರ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವ ಈ ಸೀಜ್ ವಾಹನಗಳನ್ನು ಪೊಲೀಸ್ ಇಲಾಖೆಯು ತಕ್ಷಣವೇ ತೆರವುಗೊಳಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಮುಕ್ತಗೊಳಿಸುತ್ತಾ? ಅಥವಾ ತನ್ನದೇ ಇಲಾಖೆಯ ಉಲ್ಲಂಘನೆಯನ್ನು ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us