
ನವದೆಹಲಿ, ಅಕ್ಟೋಬರ್ 12: ಕಾವೇರಿ ನೀರು ಹರಿಸುವ ವಿಚಾರ ಸಂಬಂಧ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಇಂದು ನಡೆದಿದೆ. ಸರಿಯಾದ ಪ್ರಮಾಣದಲ್ಲಿ ನೀರು ಬಿಡ್ತಿಲ್ಲ ಎಂದಿರುವ ತಮಿಳುನಾಡು, CWMA ಆದೇಶದ ಅನ್ವಯ ಬಾಕಿ ನೀರು ಹರಿಸುವಂತೆ ಮನವಿ ಮಾಡಿದೆ. ಇತ್ತ ಜಲಾಶಯಗಳಲ್ಲಿ ನೀರಿಲ್ಲ ಎಂದು ನ್ಯಾ.ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠಕ್ಕೆ ಕರ್ನಾಟಕ ಸರ್ಕಾರ ತಿಳಿಸಿದೆ. ಕಳೆದ ವಿಚಾರಣೆ ವೇಳೆ CWMA ಆದೇಶ ಪಾಲನೆಗೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು ಎನ್ನುವುದಿಲ್ಲಿ ಗಮನಾರ್ಹ.
ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದು, ಎಲ್‌ನಿನೋದಿಂದಾಗಿ ಇದು ಮಳೆಯ ಅಭಾವವಿರುವ ವರ್ಷವಾಗಿದೆ. ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ಜುಲೈನಿಂದ ಈವರೆಗೆ 11 ಟಿಎಂಸಿ ನೀರು ಕಡಿಮೆ ಹರಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೀಠ, ಹಿಂದೆಲ್ಲಾ ಬೋರ್ಡ್ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ನೀರು ಬಿಟ್ಟಿರುವ ಅಂಕಿ ಅಂಶ ನೀಡಿದ್ದಾರಲ್ಲ ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿರುವ ತಮಿಳುನಾಡು ಪರ ವಕೀಲರು, 3 ಸಾವಿರ ಕ್ಯೂಸೆಕ್ ನೀರು ಹರಿಸುವುದು ಮುಖ್ಯವಲ್ಲ. ಬಾಕಿ 11 ಟಿಎಂಸಿ ನೀರು ಹರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ನೀರು ಹೆಚ್ಚು ಇದ್ದರೆ ಮಾತ್ರ ಬಾಕಿ ಬಿಡಬಹುದು. ಹೆಚ್ಚುವರಿ ನೀರು ಇಲ್ಲದಿದ್ದಾಗ ಬಾಕಿ ನೀರು ಬಿಡುವುದು ಹೇಗೆ? ಎಂದು ಕೋರ್ಟ್ ಮರುಪ್ರಶ್ನಿಸಿದ್ದು, ಮಳೆ ಅಭಾವದ ವೇಳೆ ಕೊಡಬೇಕಾದ ನೀರೂ ಕೊಟ್ಟಿಲ್ಲ ಎಂದು ತಮಿಳುನಾಡು ಈ ವೇಳೆ ಕೋರ್ಟ್ಗೆ ತಿಳಿಸಿದೆ.
ಇದನ್ನೂ ಓದಿ: ಕಾವೇರಿ ಜಲ ವಿವಾದ: CWMA ಆದೇಶದಿಂದ ಕಂಗೆಟ್ಟ ಕರ್ನಾಟಕ; ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಕರ್ನಾಟಕ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದ್ದು, CWRC ಮತ್ತು CWMA ಎರಡೂ ಕಡೆ ತಜ್ಞ ಅಧಿಕಾರಿಗಳಿದ್ದಾರೆ. ಎರಡೂ ರಾಜ್ಯಗಳ ಪ್ರತಿನಿಧಿಗಳ ವಾದ ಆಲಿಸಿ ತೀರ್ಮಾನಿಸಿದ್ದಾರೆ. ಈ ವರ್ಷ ಕರ್ನಾಟಕಕ್ಕೆ ಬಹಳ ಕಷ್ಟಕರ ವರ್ಷ ಬರಗಾಲವಿದೆ. ಅಣೆಕಟ್ಟುಗಳಲ್ಲಿರುವ ನೀರನ್ನು ಕುಡಿಯಲು ಕಾಯ್ದಿರಿಸಲಾಗಿದೆ. ಬೆಳೆ ಬೆಳೆಯದಂತೆ ರೈತರಿಗೆ ಮನವಿ ಮಾಡಲಾಗಿದೆ. 57 ಟಿಎಂಸಿ ನೀರಿನಲ್ಲಿ 45 ಟಿಎಂಸಿ ನೀರು ಬೆಂಗಳೂರು, ಮೈಸೂರು ನಗರಗಳಿಗೆ ಕುಡಿಯುವ ನೀರು ಬೇಕಿದೆ. ಕರ್ನಾಟಕಕ್ಕೆ ಮಳೆ ತರುವ ನೈಋತ್ಯ ಮಾನ್ಸೂನ್ ಮುಕ್ತಾಯವಾಗಿದೆ. ಆದರೆ ತಮಿಳುನಾಡಿಗೆ ಈಶಾನ್ಯ ಮಾರುತಗಳು ಮಳೆ ತರುವ ಸಾಧ್ಯತೆಯಿದೆ. CWMA ಸೂಚಿಸಿರುವಂತೆಯೇ ಕರ್ನಾಟಕ ನೀರು ಬಿಡುತ್ತಿದ್ದು, 2000 ಕ್ಯೂಸೆಕ್ಸ್ ಮಾತ್ರ ಬಿಡಲು ಸಾಧ್ಯವೆಂದು ಕರ್ನಾಟಕ ಹೇಳಿತ್ತು. ಆದರೆ CWMA 3000 ಕ್ಯೂಸೆಕ್ಸ್ ನೀರು ಬಿಡಲು ಹೇಳಿದೆ. ನಾವು ನೀರು ಬಿಡುತ್ತಿದ್ದೇವೆ ಎಂದು ಕರ್ನಾಟಕದ ವಾದಿಸಿದೆ. ಈ ವೇಳೆ ಪ್ರತಿಬಾರಿಯೂ ತಮಿಳುನಾಡು ಸಮಸ್ಯೆ ಹೇಳುತ್ತಿದೆ ಎಂದ ಸುಪ್ರೀಂಕೋರ್ಟ್ ಅರ್ಜಿಗಳ ಆದೇಶ ಕಾಯ್ದಿರಿಸಿದೆ. ಅಲ್ಲದೆ ತಮಿಳುನಾಡು ರೈತರ ಪರ ವಕೀಲರ ವಾದ ಆಲಿಸಲು ನಕಾರ ವ್ಯಕ್ತಪಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.