ಬೆಂಗಳೂರಿನಲ್ಲಿ ಇಳಿಯುವುದಕ್ಕಿಂತ ಮುನ್ನ ಥಾಯ್ ಏರ್‌ವೇಸ್ ವಿಮಾನದ ಟೈರ್ ಸ್ಫೋಟ: 150 ಪ್ರಯಾಣಿಕರು ಅಪಾಯದಿಂದ ಪಾರು
256 ಆಸನಗಳಿರುವ ವಿಮಾನ TG 325, ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಬ್ಯಾಂಕಾಕ್‌ನಿಂದ ಹೊರಟು ರಾತ್ರಿ 11:32 ಕ್ಕೆ ಬೆಂಗಳೂರಿಗೆ ಬಂದಿಳಿಯಿತು. ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ವಿಮಾನವು ಟೈರ್ ಸ್ಫೋಟಗೊಂಡರೂ...
ಬೆಂಗಳೂರು: ಬೆಂಗಳೂರಿನ (Bengaluru) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ನಲ್ಲಿ ಇಳಿಯುವುದಕ್ಕಿಂತ ಕೆಲವೇ ಕ್ಷಣ ಮೊದಲು ಥಾಯ್ ಏರ್‌ವೇಸ್ ವಿಮಾನದ (Thai Airways) ಟೈರ್ ಸ್ಫೋಟಗೊಂಡ ಘಟನೆ ವರದಿ ಆಗಿದೆ. ವಿಮಾನದಲ್ಲಿ ಸಿಬ್ಬಂದಿಯೊಂದಿಗೆ ಕನಿಷ್ಠ 150 ಪ್ರಯಾಣಿಕರಿದ್ದರು. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಐಎಎನ್ಎಸ್ ವರದಿ ಮಾಡಿದೆ.ಮಂಗಳವಾರ (ಏಪ್ರಿಲ್ 26) ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಸಂಜೆ (ಏಪ್ರಿಲ್ 27) ಏರ್ ಲೈನ್ಸ್ ನ ತಾಂತ್ರಿಕ ತಂಡ ಸ್ಪೇರ್ ವೀಲ್ ನೊಂದಿಗೆ ಆಗಮಿಸಿದೆ. ವಿಮಾನವು ಏಪ್ರಿಲ್ 28 ರಂದು ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಹಾರಲಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಖಚಿತಪಡಿಸಿವೆ. 256 ಆಸನಗಳಿರುವ ವಿಮಾನ TG 325, ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಬ್ಯಾಂಕಾಕ್‌ನಿಂದ ಹೊರಟು ರಾತ್ರಿ 11:32 ಕ್ಕೆ ಬೆಂಗಳೂರಿಗೆ ಬಂದಿಳಿಯಿತು. ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ವಿಮಾನವು ಟೈರ್ ಸ್ಫೋಟಗೊಂಡರೂ ಸಹ, ವಿಮಾನವು ಸುರಕ್ಷಿತವಾಗಿ ಟಾರ್ಮ್ಯಾಕ್‌ನಲ್ಲಿ ಇಳಿಯಿತು ಎಂದು ಮೂಲಗಳು ಹೇಳಿವೆ. ವಿಮಾನ ಹಾರಾಟ ಸಮಯದಲ್ಲೇ ಸ್ಫೋಟ ಸಂಭವಿಸಿದ್ದು ಇದು ಪೈಲಟ್‌ಗಳ ಗಮನಕ್ಕೆ ಬಂದಿರಲಿಲ್ಲ ಎಂದು ತಜ್ಞರು ಹೇಳಿದ್ದಾರೆ. ಪ್ರಯಾಣಿಕರು ಮತ್ತು ಸಿಬ್ಬಂದಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಹಿಂಬದಿಯ ಒಂದು ಟೈರ್ ಛಿದ್ರವಾಗಿರುವುದನ್ನು ಪೈಲಟ್ ಗಮನಿಸಿರಲಿಲ್ಲ ಎಂದು ಹಿರಿಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಗ್ರೌಂಡ್ ಸಿಬ್ಬಂದಿ ಹಾನಿಯನ್ನು ಗುರುತಿಸಿ ಅವರಿಗೆ ಎಚ್ಚರಿಕೆ ನೀಡಿದರು. ಅದೃಷ್ಟವಶಾತ್ ಇಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿಯೂ ಸಹ ಯಾವುದೇ ತೊಂದರೆಯಾಗಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ
ವಿಮಾನದಲ್ಲಿದ್ದ ಜನರನ್ನು ಇಳಿಸಿದ ನಂತರ ವಿಮಾನವನ್ನು ತಪಾಸಣೆಗೊಳಪಡಿಸಲಾಗಿದೆ. ಬುಧವಾರ (ಏಪ್ರಿಲ್ 27) ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ವಿಮಾನ ಟೇಕ್ ಆಫ್ ಆಗಬೇಕಿತ್ತು ಆದರೆ ಘಟನೆಯ ನಂತರ ಪ್ರಯಾಣವನ್ನು ರದ್ದುಗೊಳಿಸಲಾಯಿತು.
ಇದನ್ನೂ ಓದಿ: ಇಡೀ ಈಶಾನ್ಯ ರಾಜ್ಯಗಳಿಂದ ಎಎಫ್‌ಎಸ್‌ಪಿಎ ತೆಗೆದು ಹಾಕಲು ಕೇಂದ್ರ ಪ್ರಯತ್ನಿಸುತ್ತಿದೆ: ನರೇಂದ್ರ ಮೋದಿ
Published On - 3:01 pm, Thu, 28 April 22