TV9 Kannada News Live: ಶೆಡ್​​ಗೆ ಬೆಂಕಿ ತಗುಲಿ ಮಕ್ಕಳಿಬ್ಬರು ದಹನ; ಬೆಟ್ಟದಿಂದ ಜಿಗಿದು ಇಂಜಿನಿಯರ್ ಆತ್ಮಹತ್ಯೆ

ಬೆಂಗಳೂರಿನ ಕೊತ್ತನೂರು ಸಮೀಪದ ನಾರಾಯಣಪುರದಲ್ಲಿ ಶೆಡ್‌ಗೆ ಬೆಂಕಿ ತಗುಲಿ ಇಬ್ಬರು ಮಕ್ಕಳು ಸಜೀವ ದಹನವಾಗಿರುವಂತಹ ಘಟನೆ ನಡೆದಿದೆ. ಇನ್ನು ತುಮಕೂರಿನಲ್ಲಿ PWD ಇಂಜಿನಿಯರ್ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಬೆಳಗಾವಿಯಲ್ಲಿ ಹುಟ್ಟುಹಬ್ಬದ ದಿನವೇ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯದ ಪ್ರಮುಖ ಸುದ್ದಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

TV9 Kannada News Live: ಶೆಡ್​​ಗೆ ಬೆಂಕಿ ತಗುಲಿ ಮಕ್ಕಳಿಬ್ಬರು ದಹನ; ಬೆಟ್ಟದಿಂದ ಜಿಗಿದು ಇಂಜಿನಿಯರ್ ಆತ್ಮಹತ್ಯೆ
ಅತ್ನಿ ಅವಘಡ, ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್
Image Credit source: tv9 kannada

Updated on: May 11, 2026 | 7:57 PM

ಬೆಂಗಳೂರು, ಮೇ 11: ನಗರದ ಕೊತ್ತನೂರು ಸಮೀಪದ ನಾರಾಯಣಪುರದಲ್ಲಿ ಶೆಡ್‌ಗೆ ಬೆಂಕಿ (fire tragedy) ತಗುಲಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಅರ್ಜುನ್ (5) ಮತ್ತು ಆಶಾ (3) ಮೃತ ಮಕ್ಕಳು. ಮತ್ತೊಂದು ಪ್ರಕರಣದಲ್ಲಿ PWD ಸಹಾಯಕ ಇಂಜಿನಿಯರ್​​ ಬೆಟ್ಟದಿಂದ ಜಿಗಿದು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ತುಮಕೂರು ತಾಲೂಕಿನ ದೇವರಾಯನದುರ್ಗ ಬೆಟ್ಟದಲ್ಲಿ ನಡೆದಿದೆ. ಮಂಜುಪ್ರಸಾದ್​​ (33) ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್​.

ನಡೆದಿದ್ದೇನು?

ದುರ್ಗಪ್ಪ ಮತ್ತು ಸಾವಿತ್ರಿ ದಂಪತಿ ಕಳೆದ ಆರು ತಿಂಗಳಿಂದ ಇಬ್ಬರು ಮಕ್ಕಳೊಂದಿಗೆ ನಾರಾಯಣಪುರದ ಶೆಡ್‌ಗಳಲ್ಲಿ ವಾಸವಾಗಿದ್ದರು. ಜೆಸಿಎಸ್ ಕಂಪನಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಂಪತಿ, ಕಳೆದ ಒಂದು ವಾರದಿಂದ ಊರಿಗೆ ಹೋಗಿದ್ದರು. ಕೆಲಸ ಅಂತ ಇಂದು ಬೆಂಗಳೂರಿಗೆ ಮರಳಿದ್ದಾರೆ. ಕೆಲಸ ಮಾಡುವ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಬರಬೇಡಿ ಎಂದು ಮೇಸ್ತ್ರಿ ಸೂಚಿಸಿದ್ದರಿಂದ ತಾಯಿ ಮಕ್ಕಳನ್ನು ಅಜ್ಜಿಯ ಜೊತೆ ಶೆಡ್‌ನಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು.

ಮಧ್ಯಾಹ್ನ ಸುಮಾರು 1 ಗಂಟೆಗೆ ಅಜ್ಜಿ ಮಕ್ಕಳನ್ನು ಶೆಡ್‌ನಲ್ಲಿ ಬಿಟ್ಟು ಬಹಿರ್ದೆಸೆಗೆ ಹೋಗಿದ್ದಾರೆ. ಅವರು ಹಿಂತಿರುಗಿ ಬರುವಷ್ಟರಲ್ಲಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ. ಸದ್ಯ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ.

ಬೆಟ್ಟದಿಂದ ಜಿಗಿದು PWD ಸಹಾಯಕ ಇಂಜಿನಿಯರ್ ಆತ್ಮಹತ್ಯೆ

ಪಾವಗಡ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಪ್ರಸಾದ್ (33) ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರಿನ ಸತ್ಯಮಂಗಲ ನಿವಾಸಿಯಾಗಿದ್ದ ಮಂಜುಪ್ರಸಾದ್, ಅವರ ತಾಯಿ ಒಂದೂವರೆ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಾಯಿಯ ನಿಧನದ ಬಳಿಕ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಮಂಜುಪ್ರಸಾದ್, ಕೊರಟಗೆರೆಯಲ್ಲಿ ಸಂಬಂಧಿಕರಿಗೆ ಮೊಬೈಲ್ ಮತ್ತು ಮನೆಯ ಕೀ ಕೊಟ್ಟಿದ್ದರು. ಬಳಿಕ ಮೀಟಿಂಗ್ ಇದೆ ಎಂದು ಹೇಳಿ ದೇವರಾಯನದುರ್ಗಕ್ಕೆ ಬಂದು ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನ ಓದಿ: ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದವಳ ಜೊತೆ ಲಿವಿನ್ ರಿಲೇಶನ್​ಶಿಪ್; ರೀಲ್ಸ್ ರಾಣಿ ಕಾಟಕ್ಕೆ ಯುವಕ ಬಲಿ?

ಕುಟುಂಬಸ್ಥರು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಕೂಡಲೇ ಕ್ಯಾತ್ಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಹುಟ್ಟುಹಬ್ಬದ ದಿನವೇ ನೇಣುಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಹುಟ್ಟು ಹಬ್ಬದ ದಿನವೇ ನೇಣುಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಳಗಾವಿ ನಗರದ ಅಜಂ ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ನಂತರದ ಬಾಲಕಿಯರು ವಸತಿ ನಿಲಯದಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ್ ನಾಯಕ(21) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಕಾವೇರಿ ಬಿಎಸ್‌ಸಿ ಅಂತಿಮ‌ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಇನ್ನು ಮೂರು ತಿಂಗಳ ಹಿಂದಷ್ಟೇ ವಿದ್ಯಾರ್ಥಿನಿಗೆ ಎಂಗೇಜ್ಮೆಂಟ್ ಆಗಿತ್ತು. ಪೊಲೀಸ ಪೇದೆಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮನೆ ಬಳಿ ಕಾರ್ಯಕ್ರಮ ಆಯೋಜನೆ ವಿಚಾರಕ್ಕೆ ಗಲಾಟೆ: ಸೋದರರ ನಡುವೆ ಮಾರಾಮಾರಿ

ಮನೆ ಬಳಿ ಸಂಗೀತ ಕಾರ್ಯಕ್ರಮ ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸೋದರರ ನಡುವೆ ಗಲಾಟೆ ನಡೆದು ಹಲ್ಲೆ ನಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಗಾರ ವಡ್ಡು ಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ ಮತ್ತು ನೆತ್ರಾವತಿ, ಮಂಜುನಾಥ್ ಹಾಗೂ ಭಾರತಿ ದಂಪತಿ ಮೇಲೆ ಕೋಲಿನಿಂದ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ದಲಿತ ಮಹಿಳೆ ಮೂರು ದಿನದ ಬಳಿಕ ಶವವಾಗಿ ಪತ್ತೆ: ಸಾವಿನ ಸುತ್ತ ಹತ್ತಾರು ಅನುಮಾನ

ಮನೆಯಂಗಳದಲ್ಲಿ ಸಂಗೀತ ಕಾರ್ಯಕ್ರಮ ಮಾಡಲು ಚಂದ್ರಶೇಖರ ಯೋಜಿಸಿದ್ದರು. ಆದರೆ ನಮಗೆ ವಯಸ್ಸಾಗಿದೆ, ಇಲ್ಲಿ ಬೇಡ ಎಂದು ಮಂಜುನಾಥ್ ವಿರೋಧ ವ್ಯಕ್ತಪಡಿಸಿದ್ದರು. ಆದರೂ ನಾವು ಇಲ್ಲೇ ಮಾಡುತ್ತೇವೆ ಎಂದು ಚಂದ್ರಶೇಖರ ಪಟ್ಟು ಹಿಡಿದಿದ್ದರು. ಈ ವಿವಾದಕ್ಕೆ ಸಂಬಂಧಿಸಿ ಮಂಜುನಾಥ್ ಠಾಣೆ ಮೆಟ್ಟಿಲೇರಿದ್ದರೂ ನ್ಯಾಯ ಸಿಕ್ಕಿರಲಿಲ್ಲ. ಪೊಲೀಸರಿಂದ ಚಂದ್ರಶೇಖರ್​​ಗೆ ಬೆಂಬಲ ಸಿಗುತ್ತಿದ್ದಂತೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us