ಉಬರ್ ಆ್ಯಪ್‌ನಲ್ಲೂ ನಮ್ಮ ಮೆಟ್ರೋ ಟಿಕೆಟ್ ಖರೀದಿಸ್ಬಹುದು! ಅದು ಹೇಗೆ ಗೊತ್ತಾ? ಇಲ್ಲಿದೆ ನೋಡಿ
ಬೆಂಗಳೂರಿನ ಮೆಟ್ರೋ ಹಾಗೂ ಉಬರ್ ಪ್ರಯಾಣಿಕರಿಗೆ ಸಂತಸದ ಸುದ್ದಿ. ಇನ್ನು ಮುಂದೆ ಮೆಟ್ರೋ ಟಿಕೆಟ್‌ಗಳನ್ನು ನೇರವಾಗಿ ಉಬರ್ ಅಪ್ಲಿಕೇಶನ್ ಮೂಲಕ ಖರೀದಿಸಬಹುದು. ಇದು ಸರತಿ ಸಾಲು ತಪ್ಪಿಸಿ, ಪ್ರಯಾಣ ಯೋಜನೆಗಳನ್ನು ಸುಲಭಗೊಳಿಸುತ್ತದೆ. UPI ಪಾವತಿ ಮೂಲಕ ಟಿಕಟ್ ಖರೀದಿ ಮಾಡಬಹುದು, ಇದು ಮೆಟ್ರೋ ಆಗಮನದ ಸಮಯದ ಮಾಹಿತಿಯನ್ನು ನೀಡುತ್ತದೆ. ಇದಲ್ಲದೆ, ಉಬರ್ ಡೈರೆಕ್ಟ್ ಮೂಲಕ ಸರಕು ವಿತರಣೆ ಮತ್ತು ಭವಿಷ್ಯದಲ್ಲಿ ಉಬರ್ ಶಟಲ್ ಸೇವೆಗಳು ಸಹ ಬೆಂಗಳೂರಿಗೆ ಬರಲಿವೆ.

ಬೆಂಗಳೂರು,ಡಿ.15: ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಹಾಗೂ ಉಬರ್ ಪ್ರಯಾಣಿಕರಿಗೆ ಪ್ರಯಾಣ ಸುಲಭಗೊಳಿಸಲು ಹೊಸ ತಂತ್ರಜ್ಞಾನ ಬರಲಿದೆ. ಹೌದು ಇನ್ಮುಂದೆ ಮೆಟ್ರೋ ಟಿಕೆಟ್‌ಗಳನ್ನು ನೇರವಾಗಿ ಉಬರ್ ಅಪ್ಲಿಕೇಶನ್ ಮೂಲಕ ಖರೀದಿಸಬಹುದು. ಈ ಮೂಲಕ ಬೆಂಗಳೂರಿನಲ್ಲಿ ಓಡಾಡುವುದು ಈಗ ಸ್ವಲ್ಪ ಸುಲಭವಾಗಲಿದೆ. ಟ್ರಾಫಿಕ್ನಿಂದ ತಪ್ಪಿಸಿಕೊಳ್ಳಲು ಹಾಗೂ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ಕ್ಯಾಬ್ ಸರಳಗೊಳಿಸಲು, ದೈನಂದಿನ ಪ್ರಯಾಣ ಸಂಕಷ್ಟಗಳನ್ನು ಕಡಿಮೆ ಮಾಡಲು ಈ ಹೆಜ್ಜೆಯನ್ನು ಇಡಲಾಗಿದೆ. ಜತೆಗೆ ಮೆಟ್ರೋ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ಟಿಕೆಟ್ಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ. ಅಪ್ಲಿಕೇಶನ್ಗಳನ್ನು ಬದಲಾವಣೆ ಮಾಡಿಕೊಳ್ಳುವುದು ಬೇಡ. UPI ಪಾವತಿಗಳನ್ನು ಬಳಸಿಕೊಂಡು ಉಬರ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಹೇಳಲಾಗಿದೆ.
ಇದು ಮೆಟ್ರೋ ಟಿಕೆಟ್ ಖರೀದಿಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಟಿಕೆಟ್‌ಗಳ ಜೊತೆಗೆ, ಈ ಅಪ್ಲಿಕೇಶನ್ ಮೆಟ್ರೋ ಬರುವ ಸಮಯವನ್ನು ಕೂಡ ಇದು ತಿಳಿಸುತ್ತದೆ. ಜತೆಗೆ ಪ್ರಯಾಣಿಕರಿಗೆ ಸೇವೆಗಳನ್ನು ಟ್ರ್ಯಾಕ್ ಮಾಡಲು ಮತ್ತು ಅವರ ಪ್ರಯಾಣವನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುತ್ತದೆ. ಇನ್ನು ಉಬರ್ ಬೆಂಗಳೂರಿನಲ್ಲಿ ಉಬರ್ ಡೈರೆಕ್ಟ್ ಅನ್ನು ಪ್ರಾರಂಭಿಸಿದೆ. ಇದು ನಗರದಲ್ಲಿ ವ್ಯವಹಾರ ನಡೆಸಬಹುದಾದ ಸ್ಥಳಗಳನ್ನು ತಿಳಿಸುತ್ತದೆ. ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ದಿನಸಿ ಖರೀದಿಗೆ ಅಥವಾ ಉತ್ತಮ ಮಾರುಕಟ್ಟೆಗಳ ಬಗ್ಗೆಯೂ ಇದು ತಿಳಿಸುತ್ತದೆ.
ಉಬರ್ ಆಪ್ ನಲ್ಲಿ ನಮ್ಮ ಮೆಟ್ರೋ ಟಿಕೆಟ್ ಬುಕ್ ಮಾಡುವುದು ಹೇಗೆ?
ಬೆಂಗಳೂರಿನ ಪ್ರಯಾಣಿಕರು ಈಗ ಉಬರ್ ಅಪ್ಲಿಕೇಶನ್ ಮೂಲಕ ಮೆಟ್ರೋ ಟಿಕೆಟ್‌ಗಳನ್ನು ಸುಲಭವಾಗಿ ಖರೀದಿಸಬಹುದು, ಉಬರ್ ಆ್ಯಪ್ಗೆ ಹೋಗಿ, ಅಲ್ಲಿ ಪಟ್ಟಿ ಮಾಡಿರುವ ಚಿಹ್ನೆಯಲ್ಲಿ ಮೆಟ್ರೋ ಆಯ್ಕೆ ಮಾಡಿಕೊಳ್ಳಬೇಕು. ನಂತರ ಲೊಕೇಶನ್ ಕೇಳುತ್ತದೆ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿರ ಎಂಬದನ್ನು ನಮೂದಿಸಿದ ನಂತರ ಹಣ ಪೇ ಮಾಡಲು ಕೇಳುತ್ತದೆ. ನಂತರ UPI ಆಯ್ಕೆ ಮಾಡಿಕೊಂಡು ಪೇ ಮಾಡಿದ್ರೆ ಟಿಕೆಟ್ ಬುಕ್ ಆಗುತ್ತದೆ. ಇದರಿಂದ ಪ್ರಯಾಣಿಕರು ಬೇರೆ ಮೆಟ್ರೋ ಆ್ಯಪ್ಗಳನ್ನು ಓಪನ್ ಮಾಡುವ ಅವಶ್ಯಕತೆ ಇಲ್ಲ. ಹಾಗೂ ನಿಲ್ದಾಣದಲ್ಲಿ ಹೋಗಿಟಿಕೆಟ್ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಕೂಡ ಬರುವುದಿಲ್ಲ.

ಉಬರ್ ಅಪ್ಲಿಕೇಶನ್ ಮೂಲಕ ಸರಕು ವಿತರಣಾ ಸೇವೆಗಳು ಆರಂಭ
ಉಬರ್ ಇಂಡಿಯಾದ ಪ್ರಕಾರ, ಉಬರ್ ಡೈರೆಕ್ಟ್ ಅನ್ನು “ಪ್ಲಗ್-ಅಂಡ್-ಪ್ಲೇ” ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಉಬರ್ ಸರಕು ವಿತರಣಾ ಸೇವೆಯನ್ನು ಕೂಡ ಆರಂಭಿಸಲಿದೆ. ಯಾವುದೇ ಆಂತರಿಕ ಹಸ್ತಕ್ಷೇಪ ಇಲ್ಲದೆ, ತನ್ನ ಡಿಲರ್ಗಳಿಗೆ ಗ್ರಾಹಕರ ನೇರ ಸಂಪರ್ಕವನ್ನು ಸಾಧಿಸುತ್ತದೆ. ಇನ್ನು ಉಬರ್ ಪ್ಲಾಟ್‌ಫಾರ್ಮ್‌ನಲ್ಲಿರುವ ಚಾಲಕರು ನೀವು ಆರ್ಡರ್ ಮಾಡಿದ ಸರಕುಗಳು ನಿಮ್ಮ ಮನೆಗೆ ತಂದುಕೊಡುತ್ತಾರೆ. ಇದು ಉಬರ್ ಚಾಲಕರಿಗೆ ಹೆಚ್ಚಿನ ದುಡಿಮೆಯನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಉಬರ್ ಬೆಂಗಳೂರಿನಲ್ಲಿ ಉಬರ್ ಶಟಲ್ ಆರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೆಹಲಿ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇದನ್ನು ಬೆಂಗಳೂರಿನಲ್ಲಿ ಪ್ರಯತ್ನಿಸಿದರೆ ಕಚೇರಿಗೆ ಹೋಗುವವರಿಗೆ ಸುಲಭವಾಗಲಿದೆ.
ಇದನ್ನೂ ಓದಿ: ಅಯ್ಯೋ ಬೆಂಗಳೂರಲ್ಲಿ ಇಷ್ಟೊಂದು ಗುಂಡಿಗಳಾ! ಜನ ಓಡಾಡೋದಾದ್ರೂ ಹೇಗೆ ಎಂದ ಯುರೋಪ್ ದಂಪತಿ
ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಕೂಡ ದೊಡ್ಡ ಪಾತ್ರವವನ್ನು ವಹಿಸಿದೆ. ಈ ಮೂಲಕ ಇಲ್ಲಿಯೂ ಉಬರ್ ತನ್ನ ಅಪ್ಲಿಕೇಶನ್ ಬಳಸುವ ಯೋಜನೆಯನ್ನು ಹಾಕಿಕೊಂಡಿದೆ. ಮುಂದಿನ ಎರಡು ವರ್ಷಗಳಲ್ಲಿ, ಎಲ್ಲಾ ಮೆಟ್ರೋ ಕಾರಿಡಾರ್‌ಗಳಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಮೆಟ್ರೋ ರೈಲುಗಳು ಓಡುವ ನಿರೀಕ್ಷೆಯಿದೆ, ಹಾಗಾಗಿ ಇದು ಕಾಯುವ ಸಮಯವನ್ನು ಕಡಿಮೆ ಮಾಡುವುದು, ಜನದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Mon, 15 December 25




