
ಬೆಂಗಳೂರು, ಮಾರ್ಚ್ 15: ಯುಗಾದಿ ಮತ್ತು ಈದ್-ಉಲ್-ಫಿತ್ರ್ ಹಬ್ಬಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ಊರುಗಳು ಮತ್ತು ಅಂತಾರಾಜ್ಯಗಳ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಹೀಗಾಗಿ ಹಬ್ಬಗಳ ವೇಳೆ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಆಗಬಾರದೆಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈ ಸಂದರ್ಭ ರಾಜ್ಯದಾದ್ಯಂತ 2,000 ಹೆಚ್ಚುವರಿ ಬಸ್ಸುಗಳ ಸಂಚಾರಕ್ಕೆ ನಿರ್ಧರಿಸಿರೋದಾಗಿ ಪ್ರಕಟಣೆ ಮೂಲಕ KSRTC ತಿಳಿಸಿದೆ.
— KSRTC (@KSRTC_Journeys) March 15, 2026
ಸಾರಿಗೆ ನಿಗಮದ ಮಾಹಿತಿ ಪ್ರಕಾರ, ಮಾರ್ಚ್ 19ರಂದು ಯುಗಾದಿ ಹಾಗೂ ಮಾರ್ಚ್ 21ರಂದು ಈದ್-ಉಲ್-ಫಿತ್ರ್ ಹಬ್ಬಗಳಿರುವ ಹಿನ್ನೆಲೆಯಲ್ಲಿ ಮಾರ್ಚ್ 18, 19 ಮತ್ತು 20ರಂದು ವಿಶೇಷ ಬಸ್ ಸೇವೆಗಳು ಇರಲಿವೆ. ಇದೇ ವೇಳೆ ವಿವಿಧ ರಾಜ್ಯ ಮತ್ತು ಅಂತಾರಾಜ್ಯಗಳಿಂದ ಮಾರ್ಚ್ 22ರಂದು ಬೆಂಗಳೂರಿಗೆ ಹಿಂದಿರುಗಲೂ ಈ ವಿಶೇಷ ಬಸ್ ಸೇವೆಗಳು ಇರಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಮತ್ತು ಬಳ್ಳಾರಿ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ಸುಗಳು ಸಂಚರಿಸಲಿವೆ. ಇದಲ್ಲದೆ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಕುಶಾಲನಗರ ಹಾಗೂ ಮಡಿಕೇರಿ ಕಡೆಗೂ ಹೆಚ್ಚುವರಿ ಬಸ್ ಸೇವೆಗಳು ಲಭ್ಯವಿರಲಿವೆ. ಪ್ರಯಾಣಿಕರು KSRTC ವೆಬ್‌ಸೈಟ್ ಹಾಗೂ ಕರ್ನಾಟಕ ಮತ್ತು ನೆರೆ ರಾಜ್ಯಗಳಲ್ಲಿನ ರಿಸರ್ವೇಶನ್ ಕೌಂಟರ್‌ಗಳ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ ಶೇ.5 ರಿಯಾಯಿತಿ ಹಾಗೂ ಹೋಗಿ-ಬರುವ (ರಿಟರ್ನ್) ಪ್ರಯಾಣದ ಟಿಕೆಟ್ ಒಂದೇ ವೇಳೆ ಬುಕ್ ಮಾಡಿದರೆ ಶೇ. 10ರಷ್ಟು ರಿಯಾಯಿತಿಯನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.