
ಬೆಂಗಳೂರು, ಅಕ್ಟೋಬರ್ 31: ಅಗತ್ಯ ವಸ್ತುಗಳಾದ ಹಾಲು ಮತ್ತು ಮೊಸರಿನ ದರ ಏರಿಕೆ ಸಂಬಂಧ ಕರ್ನಾಟಕ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಕಾಣದ ಭಾರಿ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ. ತನ್ನ ಆರ್ಥಿಕ ದುರಾಡಳಿತ ಹಾಗೂ ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ (KMF) ಮೂಲಕ ಮೊಸರಿನ ದರವನ್ನು ಅತಿರೇಕದ ಮಟ್ಟಕ್ಕೆ ಏರಿಸಲಾಗಿದೆ ಎಂದವರು ಆರೋಪಿಸಿದ್ದಾರೆ.
ಒಂದು ಲೀಟರ್ ಮೊಸರಿನ ಬೆಲೆಯನ್ನು ₹54 ರಿಂದ ₹68 ಕ್ಕೆ ಏರಿಕೆ ಮಾಡಲಾಗಿದೆ. ₹14 ಅಂದರೆ ಶೇ. 25.93% ಹೆಚ್ಚಳವಾಗಿದೆ. ಹಾಗೆಯೇ ಅರ್ಧ ಲೀಟರ್ ಮೊಸರಿನ ದರ ₹28 ರಿಂದ ₹34ಕ್ಕೆ ಹೆಚ್ಚಿದ್ದು, ₹6 ಅಂದರೆ ಶೇ. 21.43% ಏರಿಕೆಯಾಗಿದೆ. ಹಾಲಿನ ದರವನ್ನು ಲೀಟರ್‌ಗೆ ₹8 ರಷ್ಟು ಹೆಚ್ಚಿಸಿದ್ದ ಸರ್ಕಾರ, ಈಗ ಒಂದೇ ಬಾರಿಗೆ ಶೇ. 21% ರಿಂದ 26% ರಷ್ಟು ಮೊಸರಿನ ಬೆಲೆ ಏರಿಸಿ ಬಡ ಹಾಗೂ ಕೆಳ-ಮಧ್ಯಮ ವರ್ಗದ ಕುಟುಂಬಗಳ ಹೊಟ್ಟೆಯ ಮೇಲೆ ನೇರ ದಾಳಿ ಮಾಡಿದೆ ಎಂದು ಜೋಶಿ ದೂರಿದ್ದಾರೆ. ಮೊಸರು ಐಷಾರಾಮಿ ವಸ್ತುವಲ್ಲ, ಅದು ದಿನನಿತ್ಯದ ಆಹಾರ. ಅಭಿವೃದ್ಧಿ ಕೆಲಸಗಳಿಗೆ ಅನುದಾನವಿಲ್ಲದೆ, ಆಡಳಿತಾತ್ಮಕ ವೈಫಲ್ಯದಿಂದ ಬೊಕ್ಕಸ ಬರಿದಾಗಿಸಿಕೊಂಡಿರುವ ಸರ್ಕಾರ, ತನ್ನ ರಾಜಕೀಯ ತಪ್ಪುಗಳಿಗೆ ಬಡವರಿಂದ ದಂಡ ವಸೂಲಿ ಮಾಡುತ್ತಿದೆ. ಇದು ಸಂಪೂರ್ಣ ಜನವಿರೋಧಿ ಹಾಗೂ ದುಬಾರಿ ಸರ್ಕಾರದ ನೀತಿಗೆ ಹಿಡಿದ ಕೈಗನ್ನಡಿ ಎಂದವರು ತಿವಿದಿದ್ದಾರೆ.
ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್: ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್‌ಗೆ 14 ರೂ.ಹೆಚ್ಚಳ
ರಾಜ್ಯ ಸರ್ಕಾರದಿಂದ ಹಾಲು, ಮೊಸರಿನ ದರ ಏರಿಕೆ ವಿಚಾರವಾಗಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ನಾಲ್ಕನೇ ಬಾರಿ ಹಾಲಿನ ದರ ಏರಿಕೆ ಆಗಿದೆ. ಈ ಸರ್ಕಾರ ಬಹಳ ದಿನ ಇರಲ್ಲ, ಪಾಪರ್ ಆಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.