AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲಿಗೆ ಮುಗಿಬೀಳ್ತಿದ್ದಾರೆ ಪ್ರಯಾಣಿಕರು! ಒಂದೇ ತಿಂಗಳಲ್ಲಿ 55 ಸಾವಿರ ಮಂದಿ ಸಂಚಾರ

ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮೊದಲ ತಿಂಗಳಲ್ಲೇ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. 55,000 ಕ್ಕೂ ಹೆಚ್ಚು ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಿದ್ದು, 100% ಗಿಂತ ಹೆಚ್ಚು ಬುಕಿಂಗ್ ಆಗಿದೆ. ಕೇರಳ, ತಮಿಳುನಾಡು, ಕರ್ನಾಟಕವನ್ನು ಸಂಪರ್ಕಿಸುವ ಈ ಅರೆ ಹೈಸ್ಪೀಡ್ ರೈಲು ಕ್ರಿಸ್‌ಮಸ್, ಹೊಸ ವರ್ಷ ಮತ್ತು ಶಬರಿಮಲೆ ಯಾತ್ರಿಕರಿಂದಲೂ ಹೆಚ್ಚಿನ ಬೇಡಿಕೆ ಪಡೆದು ಜನಪ್ರಿಯವಾಗಿದೆ.

ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲಿಗೆ ಮುಗಿಬೀಳ್ತಿದ್ದಾರೆ ಪ್ರಯಾಣಿಕರು! ಒಂದೇ ತಿಂಗಳಲ್ಲಿ 55 ಸಾವಿರ ಮಂದಿ ಸಂಚಾರ
Vande Bharath Express
ಭಾವನಾ ಹೆಗಡೆ
|

Updated on:Dec 10, 2025 | 12:15 PM

Share

ಬೆಂಗಳೂರು, ಡಿಸೆಂಬರ್ 10: ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಮೊದಲ ತಿಂಗಳಲ್ಲೇ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡೂ ಬದಿಯ ಪ್ರಯಾಣಿಕರು ಮಾಡಿರುವ ಬುಕಿಂಗ್‌ಗಳು 100% ದಾಟಿದ್ದು, ಇಲ್ಲಿಯವರೆಗೆ 55,000 ಕ್ಕೂ ಹೆಚ್ಚು ಪ್ರಯಾಣಿಕರು ವಂದೇ ಭಾರತ್ ಎಕ್ಸ್‌ಪ್ರೆಸ್​ನಲ್ಲಿ ಪ್ರಯಾಣಿಸಿದ್ದಾರೆ.

100 ಪ್ರತಿಶತಕ್ಕೂ ಹೆಚ್ಚು ಬುಕಿಂಗ್

ಈ ರೈಲು ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ಕರ್ನಾಟಕವನ್ನು ಸಂಪರ್ಕಿಸುವ ಮೊದಲ ಅಂತಾರಾಜ್ಯ ಅರೆ ಹೈಸ್ಪೀಡ್ ಪ್ರೀಮಿಯಂ ರೈಲು ಎಂಬ ಖ್ಯಾತಿ ಪಡೆದಿದ್ದು, ನವೆಂಬರ್‌ನಲ್ಲಿ ಬೆಂಗಳೂರು-ಎರ್ನಾಕುಲಂ ಗೆ 11,447 ಪ್ರಯಾಣಿಕರು ಪ್ರಯಾಣಿಸಿದ್ದು, ಸರಾಸರಿ 127% ಬುಕಿಂಗ್ ಆಗಿದೆ ಎಂದು ಹೇಳಲಾಗಿದೆ.

ನೈಋತ್ಯ ರೈಲ್ವೆ (SWR) ಬೆಂಗಳೂರು ವಿಭಾಗದ ಅಂಕಿಅಂಶಗಳ ಪ್ರಕಾರ, ಡಿಸೆಂಬರ್‌ನಲ್ಲಿ 16,129 ಪ್ರಯಾಣಿಕರು ಸಂಚರಿಸಿದ್ದು, ಶೇ. 117 ಬುಕಿಂಗ್ ಆಗಿದೆ ಎಂದು ತಿಳಿದುಬಂದಿದೆ. ಎರ್ನಾಕುಲಂ-ಬೆಂಗಳೂರು ಸೇವೆಯು ನವೆಂಬರ್‌ನಲ್ಲಿ 12,786 ಪ್ರಯಾಣಿಕರು ಈ ಸೇವೆಯನ್ನು ಸ್ವೀಕರಿಸಿದ್ದು, ಶೇ.141 ರಷ್ಟು ಬುಕಿಂಗ್ ಆಗಿದೆ ಎಂದು ಹೇಳಲಾಗಿದೆ. ಡಿಸೆಂಬರ್‌ನಲ್ಲಿ ಈ ಸಂಖ್ಯೆ 14,742 ಕ್ಕೆ ಏರಿದ್ದು, ಸರಾಸರಿ ಶೇ.106 ರಷ್ಟು ಬುಕಿಂಗ್ ನಡೆದಿದೆ.

ಹೊಸ ವರ್ಷಕ್ಕೆ ಟಿಕೆಟ್ ಬುಕಿಂಗ್ ಇನ್ನೂ ಹೆಚ್ಚುವ ಸಾಧ್ಯತೆ

ಪ್ರತೀಕ್ಷಾ ಪಟ್ಟಿಯಲ್ಲಿರುವ ಪ್ರಯಾಣಿಕರನ್ನೂ ಸೇರಿಸಿ, ರೈಲ್ವೇಸ್ ಒಟ್ಟು ಬುಕಿಂಗ್‌ಗಳ ಸಂಖ್ಯೆಯಾಗಿ ಆಕ್ಯುಪೆನ್ಸಿಯನ್ನು ಲೆಕ್ಕಾಚಾರ ಮಾಡುತ್ತದೆ. ಇದರರ್ಥ 100 ಸೀಟುಗಳು ಲಭ್ಯವಿದ್ದು, ಅದರಲ್ಲಿ 27 ಬುಕಿಂಗ್‌ಗಳು ಪ್ರತೀಕ್ಷಾ ಪಟ್ಟಿಯಲ್ಲಿದ್ದರೆ , ಆಗ ಆಕ್ಯುಪೆನ್ಸಿಯನ್ನು 127% ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ ವಂದೇ ಭಾರತ್ ಸ್ಲೀಪರ್ ಟ್ರೈನುಗಳ ಬಿಡುಗಡೆ ಮತ್ತಷ್ಟು ವಿಳಂಬ; ಕೆಲ ಸಮಸ್ಯೆಗಳು ಪತ್ತೆ

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳು ಹಾಗೂ ಶಬರಿಮಲೆ ತೀರ್ಥಯಾತ್ರೆಯಿಂದಾಗಿ ಡಿಸೆಂಬರ್‌ನಲ್ಲಿ ಟಿಕೆಟ್‌ಗಳಿಗೆ ಬೇಡಿಕೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ದೈನಂದಿನ ಪ್ರಯಾಣಿಕರು, ವ್ಯಾಪಾರದ ಸಲುವಾಗಿ ಪ್ರಯಾಣಿಸುವವರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಲ್ಲಿ ಈ ರೈಲು ಜನಪ್ರಿಯ ಆಯ್ಕೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:13 pm, Wed, 10 December 25