
ಬೆಂಗಳೂರು, ಜೂನ್ 15: ರಾಜ್ಯದ ಆಡಳಿತದ ನಾಡಿಮಿಡಿತವೇ ವಿಧಾನಸೌಧ (Vidhana Soudha). ಸರ್ಕಾರದ ಅನೇಕ ನಿರ್ಧಾರಗಳು ರೂಪುಗೊಳ್ಳುವುದು ಈ ಶಕ್ತಿಕೇಂದ್ರದಲ್ಲಿ. ಆದರೆ ಇದೇ ವಿಧಾನಸೌಧದಲ್ಲಿ ಇದೀಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಯಪಾಲನೆಯ ಕಳ್ಳಾಟ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಡಿಕೆ ಶಿವಕುಮಾರ್ (DK Shivakumar) ಆದೇಶಕ್ಕೂ ಡೋಂಟ್ ಕೇರ್ ಇಲ್ಲದಂತಾಗಿದೆ.
ಆಡಳಿತ ಯಂತ್ರಕ್ಕೆ ಚುರುಕು ನೀಡಿ, ಸಾರ್ವಜನಿಕ ಧ್ವನಿಯಾಗಿ ಸರ್ಕಾರ ಕೆಲಸ ಮಾಡಬೇಕೆಂಬುದು ಸಿಎಂ ಡಿಕೆ ಶಿವಕುಮಾರ್ ಅವರ ವಾಗ್ದಾನ. ಇದಕ್ಕಾಗಿಯೇ ಜನಪರ ಕೆಲಸ ಮಾಡಬೇಕೆಂದು ವಿಧಾನಸೌಧದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಿರಬೇಕೆಂದು ಸೂಚಿಸಿದ್ದರು. ಆದರೆ ಈ ಆದೇಶ ವಿಧಾನಸೌಧದಲ್ಲಿ ಪಾಲನೆ ಆಗದಿರುವುದು ಟಿವಿ9 ಕ್ಯಾಮರಾಗೆ ಕಂಡಿದೆ. ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದಾಗ ಸಮಯ ಉಲ್ಲಂಘನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ
ವಿಧಾನಸೌಧದ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಇತ್ತೀಚೆಗೆ ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದರು. ಸಿಎಂ ಸೂಚನೆ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡ ಅಧಿಕೃತ ಆದೇಶ ಹೊರಡಿಸಿ, ಎಲ್ಲಾ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದ್ದರು. ಆದರೆ ನೆಲಮಟ್ಟದಲ್ಲಿ ಪರಿಸ್ಥಿತಿ ಮಾತ್ರ ಬೇರೆಯದೇ ಕಥೆ ಹೇಳುತ್ತಿದೆ. ಬೆಳಗ್ಗೆ 10 ಗಂಟೆಯ ಗಡುವು ಮುಗಿದರೂ ಹಲವರು ಕಚೇರಿಗೆ ಆಗಮಿಸಿರಲಿಲ್ಲ. 11 ಗಂಟೆಗೆ ಸಿಬ್ಬಂದಿ, ಅಧಿಕಾರಿಗಳು ಒಬ್ಬೊಬ್ಬರಾಗಿ ವಿಧಾನಸೌಧ ಪ್ರವೇಶಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಸಮಯಪಾಲನೆಗೆ ಮಾದರಿಯಾಗಬೇಕಾದ ಆಡಳಿತ ಕೇಂದ್ರದಲ್ಲೇ ಈ ರೀತಿಯ ನಿರ್ಲಕ್ಷ್ಯ ಕಂಡುಬರುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಸರ್ಕಾರದ ಆದೇಶಗಳು ಸಾಮಾನ್ಯ ಜನರಿಗೆ ಮಾತ್ರ ಅನ್ವಯವಾಗುತ್ತವೆಯಾ ಅಥವಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಸಮಾನವಾಗಿ ಅನ್ವಯವಾಗುತ್ತವೆಯೇ ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.
ವಿಧಾನಸೌಧದ ಸಿಬ್ಬಂದಿ ಸಮಯಪಾಲನೆ ಕುರಿತು ಕಟ್ಟುನಿಟ್ಟಿನ ಕ್ರಮಗಳ ಕೊರತೆ ಇದಕ್ಕೆ ಕಾರಣವೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ರಾಜ್ಯದ ಆಡಳಿತದ ಕೇಂದ್ರವಾಗಿರುವ ವಿಧಾನಸೌಧದಲ್ಲೇ ಸಮಯಪಾಲನೆ ಪಾಲನೆಯಾಗದಿದ್ದರೆ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳ ಸ್ಥಿತಿ ಏನಾಗಿರಬೇಡ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್ನ್ಯೂಸ್ ನೀಡಿದ ಸಿಎಂ ಡಿಕೆ ಶಿವಕುಮಾರ್: ವಿಡಿಯೋ ನೋಡಿ
ಸಿಎಂ ಸೂಚನೆ ಮತ್ತು ಮುಖ್ಯ ಕಾರ್ಯದರ್ಶಿಗಳ ಆದೇಶದ ಬಳಿಕವೂ ಪರಿಸ್ಥಿತಿ ಬದಲಾಗದಿದ್ದರೆ, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:22 pm, Mon, 15 June 26