ಪಶ್ಚಿಮ ಬಂಗಾಳ BJP ಮುಖಂಡನ ಮೇಲೆ ಗುಂಡಿನ ದಾಳಿ: ಆರೋಪಿ ಬೆಂಗಳೂರಿನಲ್ಲಿ ಸಿಕ್ಕ
ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಪ್ರಿಯಾಂಗು ಪಾಂಡೆ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಮೋಹಿತ್ ಮಹತೋ ಎಂಬ ಆರೋಪಿಯ ಬಂಧಿಸುವ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿದೆ.

ಬೆಂಗಳೂರು, ಮೇ 28: ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಪ್ರಿಯಾಂಗು ಪಾಂಡೆ (Priyangu Pandey) ಮೇಲೆ ಗುಂಡಿನ ದಾಳಿ ಕೇಸ್ಗೆ ಸಂಬಂಧಿಸಿದಂತೆ ನಗರದಲ್ಲಿ ಮತ್ತೊಬ್ಬ ಆರೋಪಿಯನ್ನು ಎನ್ಐಎ (NIA) ಬಂಧಿಸಿದೆ. ಮೋಹಿತ್ ಮಹತೋ ಅಲಿಯಾಸ್ ಸಾಹಿಲ್ ಬಂಧತ ಆರೋಪಿ. ಆತನ ಬಳಿಯಿದ್ದ ಮೊಬೈಲ್ ಸೇರಿದಂತೆ ಕೆಲವು ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 17 ಜನರನ್ನ ಬಂಧಿಸಲಾಗಿದೆ.
2024ರ ಆ.28ರಲ್ಲಿ ಮಾಜಿ ಸಂಸದ ಅರ್ಜುನ್ ಸಿಂಗ್ ಮನೆಗೆ ತೆರಳುವ ಮಾರ್ಗಮಧ್ಯೆ ಭಾತ್ಪರಾ ಬಳಿ ಪ್ರಿಯಾಂಗು ಪಾಂಡೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ಪ್ರಿಯಾಂಗು ಪಾಂಡೆ ಮತ್ತು ಅವರ ಕಾರು ಚಾಲಕ ಗಾಯಗೊಂಡಿದ್ದರು. ಸ್ಥಳೀಯ ಪೊಲೀಸರು 12 ಜನ ಆರೋಪಿಗಳನ್ನ ಬಂಧಿಸಿದ್ದರು. ಎನ್ಐಎ ಯಿಂದ ಈ ಪ್ರಕರಣದಲ್ಲಿ ಇಲ್ಲಿವರೆಗೂ ಒಟ್ಟು ಐದು ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 15,441 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ: 5,277 ಉದ್ಯೋಗ ಸೃಷ್ಟಿ
ಭಾಟ್ಪಾರಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತನ್ನ ಮೇಲೆ ಗುಂಡು ಹಾರಿಸಿ ಬಾಂಬ್ ಎಸೆದಿದ್ದಾರೆ ಎಂದು ಪ್ರಿಯಾಂಗು ಪಾಂಡೆ ಆರೋಪಿಸಿದ್ದರು. ‘ನಾನು ನಮ್ಮ ನಾಯಕ ಅರ್ಜುನ್ ಸಿಂಗ್ ಅವರ ನಿವಾಸಕ್ಕೆ ಹೋಗುತ್ತಿದ್ದೆವು. ಭಟ್ಪರಾ ಪುರಸಭೆಯಿಂದ ಜೆಟ್ಟಿಂಗ್ ಯಂತ್ರದಿಂದ ರಸ್ತೆಯನ್ನು ನಿರ್ಬಂಧಿಸಲಾಗಿತ್ತು’.
‘ನಮ್ಮ ಕಾರು ನಿಂತ ಕ್ಷಣ, ಸುಮಾರು 50 ರಿಂದ 60 ಜನರು ನನ್ನ ವಾಹನದ ಮೇಲೆ ಕನಿಷ್ಠ ಏಳರಿಂದ ಎಂಟು ಬಾಂಬ್ ಎಸೆದರು. ನಂತರ ಏಳು ಸುತ್ತು ಗುಂಡಿನ ದಾಳಿ ಮಾಡಿದ್ದರು. ಇದು ತೃಣಮೂಲ ಮತ್ತು ಪೊಲೀಸರ ಜಂಟಿ ಸಂಚು’ ಎಂದು ಪ್ರಿಯಾಂಗು ಪಾಂಡೆ ಆರೋಪಿಸಿದ್ದರು.
ಇದನ್ನೂ ಓದಿ: ರೆಡ್ ಅಲರ್ಟ್: ಕೊಡಗು ಜಿಲ್ಲೆಯಾದ್ಯಂತ 2 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಈ ದಾಳಿ ಹಿಂದೆ ತೃಣಮೂಲ ನಾಯಕರಾದ ತರುಣ್ ಸೌ ಮತ್ತು ಶಾಸಕ ಸೋಮನಾಥ್ ಶ್ಯಾಮ್ ಅವರ ಕೈವಾಡವಿದೆ ಎಂದು ಮಾಜಿ ಸಂಸದ ಅರ್ಜುನ್ ಸಿಂಗ್ ಆರೋಪಿಸಿದ್ದರು. ದುಷ್ಕರ್ಮಿಗಳನ್ನು ಕಾಕಿನಾರಾದಿಂದ ಕರೆತರಲಾಗಿದೆ ಎಂದು ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:47 pm, Wed, 28 May 25







