ಬೆಂಗಳೂರು, ಮಾರ್ಚ್ 7: ಮಳೆಯ ಕೊರತೆ (Rain Deficit), ಅಂತರ್ಜಲ ಮಟ್ಟ ಕುಸಿತ, ಅಸಮರ್ಪಕ ಮೂಲಸೌಕರ್ಯ ಯೋಜನೆ ಮತ್ತು ನೀರಿನ ಟ್ಯಾಂಕರ್ ಕಾರ್ಯಾಚರಣೆಯ ಪ್ರಭಾವ ಸೇರಿದಂತೆ ಹಲವಾರು ಕಾರಣಗಳಿಂದ ಬೆಂಗಳೂರಿನಲ್ಲಿ ಈವರೆಗೆ ಕಂಡುಕೇಳರಿಯದ ಮಟ್ಟದಲ್ಲಿ ನೀರಿನ ಬಿಕ್ಕಟ್ಟು (Bengaluru Water Crisis) ಉಂಟಾಗಿದೆ. ಐಟಿ ಹಬ್ ಮೇಲೆಯೂ ಬರಗಾಲದ ಬಿಸಿ ಈ ವರ್ಷ ತೀವ್ರವಾಗಿ ತಟ್ಟುತ್ತಿದೆ. ಬರ ಮಾತ್ರವಲ್ಲದೆ ಇನ್ನೂ ಅನೇಕ ಅಂಶಗಳು ನಗರದ ನೀರಿನ ಬಿಕ್ಕಟ್ಟಿಗೆ ಕಾರಣವಾಗಿವೆ.
ಸಾಕಷ್ಟು ಮಳೆಯಾಗದೆ ಕಾವೇರಿ ನದಿಯ ನೀರಿನ ಮಟ್ಟದಲ್ಲಿ ಇಳಿಮುಖವಾಗಿದೆ. ಈ ಕೊರತೆಯು ಕುಡಿಯುವ ನೀರಿಗೆ ಮಾತ್ರವಲ್ಲದೆ ನೀರಾವರಿಯ ಮೇಲೂ ಪರಿಣಾಮ ಬೀರುತ್ತಿದೆ. ಇದಲ್ಲದೆ, ಇತ್ತೀಚಿನ ತಿಂಗಳುಗಳಲ್ಲಿ ಮಳೆಯ ಕೊರತೆಯು ಬೆಂಗಳೂರಿನಲ್ಲಿ ಬೋರ್‌ವೆಲ್‌ಗಳು ಬತ್ತಲು ಕಾರಣವಾಗಿದೆ. ನಗರದ ನೀರು ಪೂರೈಕೆಯ ಜವಾಬ್ದಾರಿಯನ್ನು ಹೊಂದಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಪ್ರಮುಖವಾಗಿ ನೀರಿಗಾಗಿ ಕಾವೇರಿ ನದಿಯನ್ನು ಅವಲಂಬಿಸಿದೆ. ಕಾವೇರಿ ನೀರಿನ ಸಂಪರ್ಕವಿಲ್ಲದ ಪ್ರದೇಶಗಳು ಬೋರ್‌ವೆಲ್ ಅಥವಾ ಟ್ಯಾಂಕರ್ ನೀರನ್ನು ಅವಲಂಬಿಸಿವೆ.
ಪ್ರಮುಖವಾಗಿ ಭೀಕರ ಬರಗಾಲವೇ ಐಟಿ ಹಬ್ ಗಂಭೀರ ನೀರಿನ ಸಮಸ್ಯೆ ಎದುರಿಸಲು ಕಾರಣವಾಗಿದೆ. ಸಾಕಷ್ಟು ಮಳೆಯಾಗದ ಕಾರಣ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಬೆಂಗಳೂರು ನಗರವು ನೀರಿಗಾಗಿ ಪ್ರಮುಖವಾಗಿ ಕಾವೇರಿ ನದಿಯನ್ನೇ ಅವಲಂಬಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ಮಾಹಿತಿಯ ಪ್ರಕಾರ, ಕಾವೇರಿ ಕೊಳ್ಳದ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆಆರ್‌ಎಸ್ ಮತ್ತು ಕಬಿನಿಗಳಲ್ಲಿನ ನೀರಿನ ಸಂಗ್ರಹವು ಫೆಬ್ರವರಿ ಕೊನೆಯ ವೇಳೆಗೆ ಅವುಗಳ ಒಟ್ಟು ಸಾಮರ್ಥ್ಯದ ಶೇಕಡಾ 39 ರಷ್ಟು ಮಾತ್ರವೇ ಇದೆ. ಈ ಜಲಾಶಯಗಳ ಒಟ್ಟು ಸಾಮರ್ಥ್ಯ 114.57 ಟಿಎಂಸಿ ಆಗಿದೆ. ಮತ್ತು ಪ್ರಸ್ತುತ, ಈ ಜಲಾಶಯಗಳು ಸುಮಾರು 44.65 ಟಿಎಂಸಿ ನೀರನ್ನು ಮಾತ್ರ ಹೊಂದಿವೆ. ಕಳೆದ ವರ್ಷ ಇದೇ ಸಮಯದಲ್ಲಿ ಈ ಜಲಾಶಯಗಳಲ್ಲಿ ಸುಮಾರು 64.61 ಟಿಎಂಸಿ ನೀರು ಇತ್ತು.
ಮಳೆಯ ಕೊರತೆಯ ಕಾರಣ ಬೆಂಗಳೂರಿನ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಅಪಾರ್ಟ್ಮೆಂಟ್ಗಳು ಹಾಗೂ ಕಾವೇರಿ ನೀರು ಸರಬರಾಜು ಇಲ್ಲದ ಕಡೆಗಳಲ್ಲಿ ಬಲುದೊಡ್ಡ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ: ಬೆಂಗಳೂರು ನೀರಿನ ಬಿಕ್ಕಟ್ಟು ಬಗೆಹರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು? ಇಲ್ಲಿದೆ ವಿವರ
ಇತ್ತೀಚೆಗೆ ಬಿಬಿಎಂಪಿ ಸಭೆಯಲ್ಲಿ ಬೆಂಗಳೂರಿನ ಬೋರ್ವೆಲ್ಗಳ ಬಗ್ಗೆ ಮಾಹಿತಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ದಾಖಲೆಗಳ ಪ್ರಕಾರ ನಗರದಲ್ಲಿರುವ 16,781 ಬೋರ್‌ವೆಲ್‌ಗಳಲ್ಲಿ 6,997 ಬತ್ತಿ ಹೋಗಿವೆ. ಉಳಿದ 7,784 ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದರು.
ನೀರು ಸರಬರಾಜು ಸುಗಮವಾಗಿ ಆಗುವಂತೆ ನೋಡಿಕೊಳ್ಳಲು ಸರ್ಕಾರ ಹೊಸ ಬೋರ್‌ವೆಲ್‌ಗಳನ್ನು ಕೊರೆಯಿಸಲಿದೆ. ನೀರು ಸರಬರಾಜಿಗೆ ಸಂಬಂಧಿಸಿ ಸ್ಥಳೀಯ ಮಾರಾಟಗಾರರು ಮತ್ತು ತಮಿಳುನಾಡು ಮಾರಾಟಗಾರರ ನಡುವೆ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಅದನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಡಿಸಿಎಂ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ