ಸಾಂದರ್ಭಿಕ ಚಿತ್ರ
Image Credit source: Getty Images
ಬೆಂಗಳೂರು, ಅಕ್ಟೋಬರ್ 29: ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆ ಬರೆ ಬಿದ್ದಿದ್ದು, ನಂದಿನಿ ಹಾಲಿನ ದರ 8 ರೂ. ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನವೆಂಬರ್ 1ರಿಂದ ಈ ಪರಿಷ್ಕೃತ ದರ ಜಾರಿಗೆ ಬರಲಿದೆ. ಕರ್ನಾಟಕದಲ್ಲಿ 2023ರ ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಹಲವಾರು ಅಗತ್ಯ ವಸ್ತುಗಳು, ಸೇವೆಗಳು ಮತ್ತು ತೆರಿಗೆಗಳ ದರವನ್ನು ಹೆಚ್ಚಿಸಲಾಗಿದೆ. ಯಾವೆಲ್ಲ ವಸ್ತು ಮತ್ತು ಸೇವೆಗಳ ದರದಲ್ಲಿ ಹೆಚ್ಚಳವಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾವುದೆಲ್ಲದರ ಬೆಲೆ ಹೆಚ್ಚಳ?
- ನಂದಿನಿ ಹಾಲು: 2023ರಿಂದ ಕರ್ನಾಟಕದಲ್ಲಿ ‘ನಂದಿನಿ’ ಹಾಲಿನ ದರವನ್ನು ಒಟ್ಟು 4 ಬಾರಿ ಪರಿಷ್ಕರಣೆ ಮಾಡಲಾಗಿದೆ. ಆಗಸ್ಟ್ 2023ರಲ್ಲಿ ಪ್ರತಿ ಲೀಟರ್‌ಗೆ ₹3, 2024ರ ಜೂನ್ನಲ್ಲಿ ಲೀಟರ್‌ಗೆ ₹2, 2025ರ ಏಪ್ರಿಲ್ನಲ್ಲಿ ಲೀಟರ್‌ಗೆ ₹4 ಏರಿಕೆಯಾಗಿತ್ತು. ಈಗ ಮತ್ತೆ ದರ ಹೆಚ್ಚಳವಾಗಿದ್ದು, 2026ರ ನವೆಂಬರ್ 1ರಿಂದ ಜಾರಿಗೆ ಬರುವಂತೆ ₹8 ಏರಿಕೆ ಮಾಡಲಾಗಿದೆ.
- ಮದ್ಯಗಳ ದರ: ರಾಜ್ಯದಲ್ಲಿ ಮೊದಲ ಬಾರಿಗೆ AIB (Alcohol-in-Beverage) ಆಧಾರಿತ ನೂತನ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತಂದ ಬಳಿಕ ಕೆಲ ಮದ್ಯಗಳ ದರದಲ್ಲಿ ಭಾರಿ ಏರಿಕೆಯಾಗಿತ್ತು,.
- ಬಸ್ ಪ್ರಯಾಣ ದರ: ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣವಿದ್ದರೂ, ಸಾಮಾನ್ಯ ಪ್ರಯಾಣಿಕರ ಬಸ್ ಟಿಕೆಟ್ ದರವನ್ನು ಶೇ. 15 ರಷ್ಟು 2025ರ ಜನವರಿಯಲ್ಲಿ ಹೆಚ್ಚಿಸಲಾಗಿತ್ತು.
- ನಮ್ಮ ಮೆಟ್ರೋ ಪ್ರಯಾಣ ದರ: ಬೆಂಗಳೂರಿನ ಮೆಟ್ರೋ ಗರಿಷ್ಠ ಪ್ರಯಾಣ ದರವನ್ನು ₹60 ರಿಂದ ₹90 ಕ್ಕೆ (ಶೇ. 51 ರಷ್ಟು) 2025ರ ಫೆಬ್ರವರಿಯಲ್ಲಿ ಏರಿಸಲಾಗಿತ್ತು. ಇದಾದ ಬಳಿಕ ಫೆಬ್ರವರಿ 9, 2026 ರಿಂದ ಅನ್ವಯವಾಗುವಂತೆ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ನೀತಿಯ ಅನ್ವಯ ಶೇಕಡಾ 5 ರಷ್ಟು ದರ ಹೆಚ್ಚಳ ಮಾಡಲಾಗಿದೆ.
- ವಿದ್ಯುತ್ ದರ: ಗೃಹಜ್ಯೋತಿ ಯೋಜನೆ ಜಾರಿಯಾದ ಬೆನ್ನಲ್ಲೇ, ಜೂನ್ 2023ರಲ್ಲಿ ಕರ್ನಾಟಕದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ಸರಾಸರಿ ಪ್ರತಿ ಯೂನಿಟ್‌ಗೆ 70 ಪೈಸೆ ದರ ಏರಿಕೆ ಮಾಡಿ ಆದೇಶ ಹೊರಡಿಸಿತ್ತು 2026ರ ಮೇಯಲ್ಲಿ ಬೆಸ್ಕಾಂ (BESCOM) ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳವಾಗಿತ್ತು.
- ವಾಹನ ನೋಂದಣಿ ಮತ್ತು ಜೀವಿತಾವಧಿ ತೆರಿಗೆ: ಮಾರ್ಚ್ 2024ರಲ್ಲಿ ಹೊಸ ದ್ವಿಚಕ್ರ ವಾಹನಗಳ ನೋಂದಣಿ ಮೇಲೆ ₹500 ಮತ್ತು ಹೊಸ ಕಾರುಗಳ ನೋಂದಣಿ ಮೇಲೆ ₹1,000 ವರೆಗೆ ಹೆಚ್ಚುವರಿ ಸೆಸ್ ಅನ್ನು ವಿಧಿಸಲಾಗಿತ್ತು. ಈ ಹಿಂದೆ ಸಂಪೂರ್ಣ ರಸ್ತೆ ತೆರಿಗೆ ವಿನಾಯಿತಿ ಹೊಂದಿದ್ದ ಎಲೆಕ್ಟ್ರಿಕ್ ವಾಹನಗಳ ಪೈಕಿ, 25 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರುಗಳ ಮೇಲೆ ಶೇ. 10ರಷ್ಟು ಜೀವಿತಾವಧಿ ತೆರಿಗೆ ಆರಂಭಾಗಿತ್ತು.
- ಆಸ್ತಿ ನೋಂದಣಿ ಶುಲ್ಕ: ಕರ್ನಾಟಕದಲ್ಲಿ ಆಸ್ತಿ ನೋಂದಣಿ ಶುಲ್ಕವನ್ನು ಆಗಸ್ಟ್ 31, 2025ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ಎಲ್ಲಾ ಮಾದರಿಯ ಆಸ್ತಿ ವಹಿವಾಟುಗಳ ನೋಂದಣಿ ಶುಲ್ಕವನ್ನು ಆಸ್ತಿ ಮೌಲ್ಯದ ಶೇ. 2 ಕ್ಕೆ ಹೆಚ್ಚಿಸಲಾಗಿದೆ (ಹಿಂದೆ ಇದು ಶೇ. 1 ರಷ್ಟಿತ್ತು).
ಇದನ್ನೂ ಓದಿ: ಕರ್ನಾಟಕದ ಜನತೆಗೆ ಬಿಗ್ ಶಾಕ್: ಹಾಲಿನ ದರ 8 ರೂ.ಹೆಚ್ಚಳಕ್ಕೆ ಸಂಪುಟ ತೀರ್ಮಾನ
ಸಾರಿಗೆ ಬಸ್ ಟಿಕೆಟ್ ದರವೂ ಮತ್ತೆ ಹೆಚ್ಚಳ ಸಾಧ್ಯತೆ
ನವೆಂಬರ್ 5ರಿಂದ ಸಾರಿಗೆ ಬಸ್ ಟಿಕೆಟ್ ದರದಲ್ಲೂ ಹೆಚ್ಚಳ ಸಾಧ್ಯತೆ ಇದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಾರಿಗೆ ಇಲಾಖೆ ಆರ್ಥಿಕ ಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರಕ್ಕೆ ತೀರ್ಮಾನಿಸಲಾಗಿದೆ. ದರ ಏರಿಕೆ ವಿಚಾರವನ್ನು ಸಾರಿಗೆ ಸಚಿವರ ವಿವೇಚನೆಗೆ ಸಚಿವ ಸಂಪುಟ ಬಿಟ್ಟಿದ್ದು, ಶೀಘ್ರವೇ ಟಿಕೆಟ್ ದರ ಹೆಚ್ಚಳ ಬಗ್ಗೆ ಸಾರಿಗೆ ಇಲಾಖೆ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.