
ಬೆಂಗಳೂರು, ಮೇ 29: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿರೋದು ರಾಜ್ಯ ರಾಜಕಾರಣದಲ್ಲಿ ಹತ್ತು ಹಲವು ಬದಲಾವಣೆಗಳಿಗೆ ನಾಂದಿ ಹಾಡಿದೆ. ನೂತನ ಮುಖ್ಯಮಂತ್ರಿಯ ಆಯ್ಕೆ, ಸಚಿವ ಸಂಪುಟ ಹೀಗೆ ನಾನಾ ಚರ್ಚೆಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದ್ದರೆ ಇತ್ತ ಬಿಜೆಪಿ ಕೂಡ ತನ್ನದೇ ಆದ ತಂತ್ರ ಹೆಣೆಯಲು ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ರಾಜೀನಾಮೆ ರಾಜ್ಯ ಬಿಜೆಪಿಯಲ್ಲಿನ ರಾಜಕೀಯ ಲೆಕ್ಕಾಚಾರ ಬದಲು ಮಾಡುವ ಸಾಧ್ಯತೆ ಇದ್ದು, ಜಾತಿ ಸಮೀಕರಣದ ಆಧಾರದಲ್ಲಿ ಕೆಲ ನಿರ್ಧಾರಗಳು ಹೊರಬರುವ ಸಾಧ್ಯತೆ ಬಗ್ಗೆ ಅಂದಾಜಿಸಲಾಗಿದೆ.
ಇನ್ನು ಸಿದ್ದರಾಮಯ್ಯನವರ ರಾಜೀನಾಮೆ ಹಿನ್ನೆಲೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ನೇಮಕ ಬಹುತೇಕ ಕನ್ಫರ್ಮ್ ಆಗಿದೆ. ಹೀಗಾದಲ್ಲಿ ಸಿಎಂ ಮತ್ತು ವಿಪಕ್ಷ ನಾಯಕ ಇಬ್ಬರೂ ಒಂದೇ ಸಮುದಾಯದವರಾಗಲಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಆರ್.ಅಶೋಕ್ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ, ಕಾಂಗ್ರೆಸ್ನಲ್ಲಿ ಅಧಿಕಾರ ಬದಲಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಜಾತಿ ಸಮೀಕರಣ ನಡೆಯುವ ಸಾಧ್ಯತೆ ಇದೆ. ಲಿಂಗಾಯತ, ಒಕ್ಕಲಿಗ, ದಲಿತ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಆಗಬಹುದೆಂಬ ಸುಳಿವು ಸಿಕ್ಕಿದೆ.
ಇದನ್ನೂ ಓದಿ:
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ನಾಯಕರ ಕೊರತೆ ಎದುರಿಸುತ್ತಿರವ ಕಾರಣ ಒಬಿಸಿ ಮತ್ತು ಕುರುಬ ಸಮುದಾಯ ಫೋಕಸ್ಗೆ ಬಿಜೆಪಿ ಮುಂದಾಗುವ ಸಾಧ್ಯತೆ ಇದೆ. 63 ಬಿಜೆಪಿ ಶಾಸಕರಲ್ಲಿ ಕೇವಲ 13 ಮಂದಿ ಒಬಿಸಿ ಸಮುದಾಯದವರಿದ್ದರೆ, 36 ಶಾಸಕರು ಮೇಲ್ವರ್ಗಕ್ಕೆ ಸೇರಿದವರು. ಆ ಪೈಕಿ 19 ಲಿಂಗಾಯತ, 11 ಒಕ್ಕಲಿಗ, 6 ಬ್ರಾಹ್ಮಣ ಶಾಸಕರನ್ನು ಬಿಜೆಪಿ ಹೊಂದಿದೆ. ರಾಜ್ಯದಲ್ಲಿ ಕುರುಬ ಸಮುದಾಯ ಮತಗಳು ಶೇ.7ರಿಂದ ಶೇ.8ರಷ್ಟಿದ್ದು, ಈಶ್ವರಪ್ಪ ಪಕ್ಷ ತ್ಯಜಿಸಿದ ಬಳಿಕ ಬಿಜೆಪಿಯಲ್ಲಿ ಕುರುಬ ನಾಯಕರ ಕೊರತೆ ಎದುರಾಗಿದೆ. ಭೈರತಿರನ್ನು ಲಾಂಚ್ ಮಾಡುವ ಪ್ರಯತ್ನದಲ್ಲಿ ಬಿಜೆಪಿ ಇತ್ತಾದರೂ ಆ ಕಾರ್ಯಕದಲ್ಲಿ ಬಿಜೆಪಿ ವಿಫಲವಾಗಿದೆ. ಹೀಗಾಗಿ ಸದ್ಯ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:17 pm, Fri, 29 May 26