AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ, MLC ಸ್ಥಾನ ಕೊಡಿಸ್ತೇನೆಂದವನಿಗೆ ₹1.50 ಕೋಟಿ ಕೊಟ್ಟು ಕೈಸುಟ್ಟುಕೊಂಡ ಮಹಿಳೆ!

ಕಾಂಗ್ರೆಸ್‌ನಿಂದ MLC ಸ್ಥಾನ ಕೊಡಿಸುವುದಾಗಿ ನಂಬಿಸಿ 1.50 ಕೋಟಿ ರೂ. ಪಡೆದು ವಂಚನೆ ಮಾಡಿರುವ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೆಹಲಿ ಪ್ರವಾಸದ ವೇಳೆ ಅಸಭ್ಯವಾಗಿ ವರ್ತಿಸಿದ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ. ಪ್ರಕರಣದ ಪೂರ್ಣ ಮಾಹಿತಿ ಇಲ್ಲಿದೆ.

ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ, MLC ಸ್ಥಾನ ಕೊಡಿಸ್ತೇನೆಂದವನಿಗೆ ₹1.50 ಕೋಟಿ ಕೊಟ್ಟು ಕೈಸುಟ್ಟುಕೊಂಡ ಮಹಿಳೆ!
ಆರೋಪಿ ಯರಿಸ್ವಾಮಿImage Credit source: tv9
ವಿಕಾಸ್​ ಬಿಎಂ
| Edited By: |

Updated on:Jul 29, 2026 | 11:46 AM

Share

ಮುಖ್ಯಾಂಶಗಳು

  • MLC ಸ್ಥಾನ ಹೆಸರಲ್ಲಿ ಕೋಟಿ ವಂಚನೆ ಆರೋಪ
  • ₹1.50 ಕೋಟಿ ಪಡೆದು ನಂಬಿಕೆ ದ್ರೋಹ
  • ಮಹಿಳೆ ದೂರಿನ ಮೇರೆಗೆ ಬೆಂಗಳೂರಿನ ಹಲಸೂರು ಗೇಟ್ ಠಾಣೆಯಲ್ಲಿ ಕೇಸ್ ದಾಖಲು

ಬೆಂಗಳೂರು, ಜುಲೈ 29: ಕಾಂಗ್ರೆಸ್ (Congress) ಪಕ್ಷದಿಂದ ವಿಧಾನ ಪರಿಷತ್ (MLC) ಸದಸ್ಯ ಸ್ಥಾನ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಬೆಂಗಳೂರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಮೂಲದ ಸಮಾಜಸೇವಕಿ ನೀಡಿರುವ ದೂರಿನ ಅನ್ವಯ, ಪ್ರಮುಖ ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡ ವ್ಯಕ್ತಿ, ರಾಜಕೀಯ ನಾಯಕರ ಜೊತೆಗಿನ ಫೋಟೋಗಳನ್ನು ತೋರಿಸಿ ನಂಬಿಕೆ ಗಳಿಸಿದ್ದ. ಬಳಿಕ 1.50 ಕೋಟಿ ರೂ. ಪಡೆದು ವಂಚನೆ ಮಾಡಿದ್ದಾನೆ.

ದೂರುದಾರ ಮಹಿಳೆ ಮಂಗಳೂರಿನ ಮೂಲದವರಾಗಿದ್ದು, ಖಾಸಗಿ ಟ್ರಸ್ಟ್ ಮೂಲಕ ಕ್ಯಾನ್ಸರ್ ಮುಕ್ತ ಅಭಿಯಾನ ಸೇರಿದಂತೆ ವಿವಿಧ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಯರಿಸ್ವಾಮಿ ಎಂಬಾತ ಮಹಿಳೆಯ ಪರಿಚಯ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಪ್ರಮುಖ ರಾಜಕಾರಣಿಗಳ ಜತೆಗಿನ ಫೋಟೊ ತೋರಿಸಿ ಯಾಮಾರಿಸಿದ ಯರಿಸ್ವಾಮಿ

ತಾನು ಕಾಂಗ್ರೆಸ್‌ನ ಪ್ರಮುಖ ನಾಯಕರ ಮಾಧ್ಯಮ ಸಲಹೆಗಾರನಾಗಿದ್ದು, ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ ಆರೋಪಿ, ರಾಜ್ಯದ ಹಲವು ಪ್ರಮುಖ ರಾಜಕಾರಣಿಗಳೊಂದಿಗೆ ಇರುವ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸ ಗಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

₹5 ಕೋಟಿ ಬೇಡಿಕೆ, ಬಳಿಕ ₹1.25 ಕೋಟಿಗೆ ಒಪ್ಪಂದ

‘ನೀವು ಇಷ್ಟು ಸಮಾಜಸೇವೆ ಮಾಡುತ್ತಿದ್ದೀರಿ. ನೀವು ಯಾಕೆ MLC ಆಗಬಾರದು? ಕಾಂಗ್ರೆಸ್‌ನಿಂದ ನಿಮ್ಮನ್ನು MLC ಮಾಡಿಸುತ್ತೇನೆ’ ಎಂದು ಹೇಳಿದ ಆರೋಪಿ, ಆರಂಭದಲ್ಲಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಮಹಿಳೆ ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಬಳಿಕ, 1.25 ಕೋಟಿ ರೂ.ಗೆ ಮಾತುಕತೆ ಅಂತಿಮಗೊಂಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆದರೆ 2024ರ ಆಗಸ್ಟ್‌ನಿಂದ 2025ರ ಜನವರಿವರೆಗೆ ವಿವಿಧ ಹಂತಗಳಲ್ಲಿ ಒಟ್ಟು ₹1.50 ಕೋಟಿ ಹಣವನ್ನು ಆರೋಪಿ ಮತ್ತು ಆತನ ಸಹಚರರಾದ ಸಿದ್ದರಾಜು ಹಾಗೂ ಬಸವರಾಜು ಅವರಿಗೆ ನೀಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ಸಮೀಪದ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಹಣ ಹಸ್ತಾಂತರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿ ಪ್ರವಾಸದ ವೇಳೆ ಅಸಭ್ಯ ವರ್ತನೆ ಆರೋಪ

ಹಣ ಪಡೆದ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಆರೋಪಿಯು ಮಹಿಳೆಯನ್ನು ದೆಹಲಿಗೂ ಕರೆದೊಯ್ದಿದ್ದಾನೆ ಎನ್ನಲಾಗಿದೆ. ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯವಿದ್ದ ವೇಳೆ ಆರೋಪಿ ಮಹಿಳೆಯ ಕೊಠಡಿಯ ಬಾಗಿಲು ಬಡಿದು, ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹಣ ವಾಪಸ್ ಕೇಳಿದಾಗ ಬೆದರಿಕೆ ಆರೋಪ

MLC ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಮಹಿಳೆ ಹಣವನ್ನು ವಾಪಸ್ ಕೇಳಿದಾಗ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಸಂತ್ರಸ್ತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:21 am, Wed, 29 July 26

Follow Us