
ಬೆಂಗಳೂರು, ಆಗಸ್ಟ್ 09: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಬೆನ್ನಲ್ಲೇ ಮೇಲ್ಮನೆಯ ಪ್ರಮುಖ ಸ್ಥಾನಗಳೆಲ್ಲವೂ ಖಾಲಿಯಾಗಿವೆ. ಸಭಾಪತಿ, ಉಪಸಭಾಪತಿಯಿಂದ ಹಿಡಿದು ಸಭಾ ನಾಯಕರವರೆಗೂ ಯಾರೂ ಸದ್ಯಕ್ಕಿಲ್ಲ. ನೂತನ ಸಭಾಪತಿಯಾಗಿ ಸಲೀಂ ಅಹ್ಮದ್ ಮತ್ತು ಉಪ ಸಭಾಪತಿಯಾಗಿ ಉಮಾಶ್ರೀ ಅವರ ಹೆಸರನ್ನು ಅದಾಗಲೇ ಎಐಸಿಸಿ ಶಿಫಾರಸ್ಸು ಮಾಡಿದ್ದರೂ ಸಭಾ ನಾಯಕ ಯಾರಾಗಾಲಿದ್ದಾರೆ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದಿತ್ತು. ಆದ್ರೀಗ ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಬಹುತೇಕ ಈ ಜವಾಬ್ದಾರಿ ಕನ್ಫರ್ಮ್ ಎನ್ನಲಾಗಿದೆ.
ಎಂಎಲ್ಸಿ ಗಾಯತ್ರಿ ಶಾಂತೇಗೌಡ ಸಚಿವ ಸ್ಥಾನವನ್ನು ಹೈಕಮಾಂಡ್ ತಡೆಹಿಡಿದಿರುವ ಕಾರಣ ವಿಧಾನ ಪರಿಷತ್ನಿಂದ ಯತೀಂದ್ರ ಸಿದ್ದರಾಮಯ್ಯ ಮಾತ್ರ ಏಕೈಕ ಸಚಿವರಾಗಿದ್ದಾರೆ. ಹೀಗಾಗಿ ಯತೀಂದ್ರಗೆ ಸಭಾ ನಾಯಕ ಸ್ಥಾನ ಸಿಗಬಹುದೆಂಬ ಲೆಕ್ಕಾಚಾರ ಶುರುವಾಗಿದೆ. ಜೊತೆಗೆ ಈಗಾಗಲೇ ಮೌನಕ್ಕೆ ಶರಣಾಗಿರುವ ಸಿದ್ದರಾಮಯ್ಯ ಅವರ ಮುನಿಸನ್ನು ಕೂಡ ಕಡಿಮೆಮಾಡುವ ಪ್ರಯತ್ನವನ್ನು ಹೈಕಮಾಂಡ್ ಮಾಡಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಪರಿಷತ್ ಪ್ರತಿನಿಧಿಸುವ ಕಾಂಗ್ರೆಸ್ ಸದಸ್ಯರು ಮುಂದೆ ಸಚಿವರಾಗಲಿದ್ದಾರಾ ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಇಲ್ಲ. ಈ ನಡುವೆ ಆಗಸ್ಟ್ 13ರಿಂದ ಮಳೆಗಾಲದ ಅಧಿವೇಶನ ಆರಂಭವಾಗಲಿರುವ ಕಾರಣ ಪರಿಷತ್ನಲ್ಲಿ ಯತೀಂದ್ರ ಅವರೇವ ಆಡಳಿತ ಪಕ್ಷವನ್ನು ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್, ಪರಿಷತ್ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ
ಆಗಸ್ಟ್ 13 ರಿಂದ ಆಗಸ್ಟ್ 27ರವರೆಗೆ ನಡೆಯುವ ವಿಧಾನಮಂಡಲದ ಮುಂಗಾರು ಅಧಿವೇಶನ ಹಿನ್ನೆಲೆ ಹಂಗಾಮಿ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಟಿ.ಬಿ.ಜಯಚಂದ್ರ ಸ್ಪೀಕರ್ ಕಚೇರಿಗೆ ನಾಳೆ ಭೇಟಿ ನೀಡಲಿದ್ದಾರೆ. 10 ದಿನಗಳ ಕಾಲ ನಡೆಯಲಿರುವ ಅಧಿವೇಶನದ ಮೊದಲ ದಿನ ಮಾಜಿ ಸಚಿವ ಡಿ.ಸುಧಾಕರ್, ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಸೇರಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ಶುಕ್ರವಾರದಿಂದ ನಿಗದಿತ ವೇಳಾಪಟ್ಟಿಯಂತೆ ಕಲಾಪಗಳು ಪ್ರಾರಂಭವಾಗಲಿದ್ದು, ಹಂಗಾಮಿ ಸ್ಪೀಕರ್ ಸಿದ್ಧತೆ ಪರಿಶೀಲಿಸಲಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:56 pm, Sun, 9 August 26