Zika virus: ಬೆಂಗಳೂರು ನಗರಕ್ಕೆ ಜಿಕಾ ತಲೆನೋವು, ಗರ್ಭಿಣಿಯರಿಗೆ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆಗೆ ಸಿದ್ಧತೆ
ಸಿಲಿಕಾನ್ ಸಿಟಿಯ ಬೆಂಗಳೂರಿನಲ್ಲಿ ವೈರಸ್ ಉಪಟಳ ಕೊನೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಡೆಂಗ್ಯೂ ಅಟ್ಟಹಾಸ ಕಡಿಮೆ ಆಗುತ್ತಿದ್ದ ಹಾಗೆಯೇ ಜೀಕಾ ವೈರಸ್ ಆರ್ಭಟ ಶುರು ಮಾಡಿದೆ. ಅತ್ತ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಜಿಕಾದಿಂದಲೇ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಈ ಮಧ್ಯೆ, ಬೆಂಗಳೂರಿನಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲು ಇಲಾಖೆ ಮುಂದಾಗಿದೆ.
ಬೆಂಗಳೂರು, ಆಗಸ್ಟ್ 21: ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನದ ಮಧ್ಯೆ ಜಿಕಾ ಸೋಂಕಿನ ಭೀತಿ ಶುರುವಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ಜಿಕಾ ವೈರಸ್ಗೆ ಒಬ್ಬರು ವೃದ್ಧ ಬಲಿಯಾಗಿದ್ದು ರಾಜ್ಯದಲ್ಲಿ ಇದುವರೆಗೂ ಒಂಬತ್ತು ಜಿಕಾ ವೈರಸ್ ಪ್ರಕರಣ ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದು ಆರೋಗ್ಯ ಇಲಾಖೆಯ ಆತಂಕಕ್ಕೆ ಕಾರಣ ಆಗಿದ್ದು, ಗರ್ಭಿಣಿಯರ ಮೇಲೆ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ಇಡುತ್ತಿದೆ. ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆ ಕೂಡ ಮಾಡಿದೆ.
ಬೆಂಗಳೂರಿನ ಜಿಗಣಿಯಲ್ಲಿ ಗರ್ಭಿಣಿ ಸೇರಿದ ಹಾಗೇ 6 ಮಂದಿಯಲ್ಲಿ ಜಿಕಾ ಪತ್ತೆಯಾಗಿದ್ದು ಇಬ್ಬರು ಗುಣಮುಖರಾಗಿದ್ದರೆ, ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದೆ. ನಾಲ್ವರಲ್ಲಿ ಮೂವರು ಗರ್ಭಿಣಿಯರೇ ಆಗಿದ್ದು, ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಜಿಕಾ ವೈರಸ್ ಮಗುವಿನ ಬ್ರೈನ್ ಬೆಳವಣಿಗೆಗೆ ಸಮಸ್ಯೆಗೆ ಕಾರಣ ಆಗುತ್ತದೆ ಎಂಬ ಕಾರಣ ಇಲಾಖೆ ಗರ್ಭಿಣಿಯರ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕೂಡಾ ಮಾಡಲು ತಯಾರಿ ನಡೆಸುತ್ತಿದೆ.
ಗರ್ಭಿಣಿಯರಿಗೇ ಹೆಚ್ಚು ಅಪಾಯ: ಸ್ತ್ರೀರೋಗ ತಜ್ಞರ ಮಾಹಿತಿ
ಜಿಕಾ ವೈರಸ್ಗೆ ನಿಗದಿತ ಚಿಕಿತ್ಸೆ ಆಗಲಿ, ಲಸಿಕೆಯಾಗಲಿ ಇಲ್ಲ. ಈ ವೈರಸ್ ಗರ್ಭಿಣಿಯರಿಗೆ ಹೆಚ್ಚು ಅಪಾಯವೆಂದು ಅಧ್ಯಯನದಿಂದ ಬಯಲಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ ಎಂದು ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಇಂದಿರಾ ಕಬಾಡೆ ತಿಳಿಸಿದ್ದಾರೆ.
ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ ಸೋಂಕಿತ ತಾಯಿಯಿಂದ ಮಗುವಿಗೆ ಈ ವೈರಸ್ ವರ್ಗಾವಣೆ ಆಗುತ್ತದೆ. ರ್ಭಾವಸ್ಥೆಯಲ್ಲಿ ತಾಯಿಗೆ ಜಿಕಾ ಬಂದರೆ ಮಗು ಮೈಕ್ರೋಸೆಫಾಲಿ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ರೋಗದಲ್ಲಿ, ಶಿಶುಗಳಿಗೆ ಸಣ್ಣ ತಲೆ ಮತ್ತು ಮೆದುಳಿನ ಸಮಸ್ಯೆ ಉಂಟಾಗುತ್ತದೆ, ಹಾಗಾಗಿ ಎಚ್ಚರ ವಹಿಸುವುದು ಅನಿವಾರ್ಯ.
ಗರ್ಭಿಣಿಯರು ಏನು ಎಚ್ಚರಿಕೆ ವಹಿಸಬೇಕು?
- ಸೊಳ್ಳೆ ನಿವಾರಕಗಳನ್ನು ಬಳಸುವುದು.
- ಉದ್ದನೆಯ ತೋಳಿನ ಬಟ್ಟೆಗಳನ್ನು ಧರಿಸುವುದು, ನಿಂತ ನೀರನ್ನು ಕ್ಲೀನ್ ಮಾಡುತ್ತಾ ಇರುವುದು.
- ಗರ್ಭವತಿಯರು ಇರುವ ಕಡೆ ಸೊಳ್ಳೆ ಉತ್ಪತ್ತಿ ತಾಣ ಆಗದಂತೆ ನೋಡಿ ಕೊಳ್ಳುವುದು.
- ರಕ್ತ ತಪಾಸಣೆ ಮಾಡಬೇಕು.
- 2 ದಿನಕ್ಕಿಂತ ಹೆಚ್ಚು ಜ್ವರ ಕಂಡು ಬಂದರೆ ವೈದ್ಯರ ಬಳಿ ತಪಾಸಣೆ ಮಾಡಿ ಕೊಳ್ಳಬೇಕು.
ಇದನ್ನೂ ಓದಿ: ರಾಜ್ಯದಲ್ಲಿ 7 ಝಿಕಾ ವೈರಸ್ ಪತ್ತೆ, ಆರೋಗ್ಯ ಇಲಾಖೆ ಫುಲ್ ಅಲರ್ಟ್
ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ದದ್ದುಗಳು, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಹಾಗೂ ಇತರೆ ಲಕ್ಷಣಗಳು ಬಹುತೇಕರಲ್ಲಿ ಕಂಡುಬರುವುದಿಲ್ಲ. ಸಾಮಾನ್ಯವಾಗಿ ರೋಗದ ಲಕ್ಷಣಗಳು 2-7 ದಿನಗಳವರೆಗೆ ಇರುತ್ತದೆ. ಈಡಿಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಪಾರಾಗಲು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು, ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಛವಾಗಿಡುವುದು ಮುಖ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳಾಗಿವೆ. ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದು ಹಾಗೂ ಮುಚ್ಚಳದಿಂದ ಮುಚ್ಚುವುದು ಉತ್ತಮ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ