ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ವಿನೂತನ ಕಾರ್ಯಕ್ರಮ: ಕನ್ನಡ ಮಾತನಾಡುವ ಬಾಯಿಗೆ ಮಿಠಾಯಿ
ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ "ಕನ್ನಡ ಮಾತನಾಡುವ ಬಾಯಿಗೆ ಮಿಠಾಯಿ" ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪ್ರೊ. ಕೃಷ್ಣೇಗೌಡ ಮತ್ತು ಹಂಸಲೇಖ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಕಲಿಯಲು ಪುಸ್ತಕಗಳನ್ನು ವಿತರಿಸಲಾಯಿತು ಮತ್ತು ಜಾನಪದ ಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು ಕನ್ನಡ ಭಾಷೆಯನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಬೆಂಗಳೂರು, ಡಿಸೆಂಬರ್ 09: ಸದ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕನ್ನಡ (Kannada) ಎಂದರೆ ಎನ್ನಡ, ಕನ್ನಡ ಗೊತ್ತಿಲ್ಲ ಎನ್ನುವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ “ಕನ್ನಡ ಮಾತನಾಡುವ ಬಾಯಿಗೆ ಮಿಠಾಯಿ” ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರೋ, ಕೃಷ್ಣೇಗೌಡ, ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ, ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಕುರಬರಹಳ್ಳಿಯ ಕಾವೇರಿ ಬಸ್ ಸ್ಟ್ಯಾಂಡ್ ಸೇರಿದಂತೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ವಿಭಿನ್ನವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕನ್ನಡ ಮಾತಾಡುವ ಬಾಯಿಗೆ ಮಿಠಾಯಿ ಎಂದು ಹೆಸರಿಡಲಾಗಿತ್ತು.
ಕನ್ನಡ ಬಾರದವರ ಕೈಗೆ ಕನ್ನಡ ಕಲಿಸುವ ಪುಸ್ತಕ ನೀಡಿ ಕನ್ನಡ ಕಲಿಸಲು ಪ್ರೋ ಕೃಷ್ಣೇಗೌಡ ಮುಂದಾದರು. ಈ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್. ನಾರಾಯಣ್, ಮಾಜಿ ಸಚಿವ ರೇವಣ್ಣ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಈ ವೇಳೆ ಕನ್ನಡ ಮಾತಾಡಿದ ಕನ್ನಡಿಗರ ಬಾಯಿಗೆ ಮಿಠಾಯಿ, ಕನ್ನಡ ಬಾರದವರ ಕೈಗೆ ಕನ್ನಡ ಪುಸ್ತಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಬಾರದ ಬೇರೆ ಭಾಷೆಯವರಿಗೆ ಮೂವತ್ತು ದಿನದಲ್ಲಿ ಕನ್ನಡ ಕಲಿಯುವ ಕನ್ನಡ ಟು ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಹೀಗೆ ನಾಲ್ಕೈದು ಭಾಷೆಯವರು ಕನ್ನಡ ಕಲಿಯಲು ಸಹಾಯ ಆಗುವಂತಹ ಪುಸ್ತಕ ನೀಡಿ ಪ್ರೋತ್ಸಾಹಿಸಲಾಯಿತು.
ಇದನ್ನೂ ಓದಿ: ಕರ್ನಾಟಕದ ಬ್ಯಾಂಕ್ಗಳಲ್ಲಿ ಹಿಂದಿ ಹೇರಿಕೆ: ನಿರ್ಮಲಾ ಸಿತಾರಮನ್ಗೆ ಕನ್ನಡ ಪ್ರಾಧಿಕಾರ ಪತ್ರ
ಕಾರ್ಯಕ್ರಮದಲ್ಲಿ ಜಾನಪದ ಕಲಾ ತಂಡಗಳು ವಿಶೇಷ ಮೆರಗು ನೀಡಿದವು. ಕಾರ್ಯಕ್ರಮದಲ್ಲಿ ಹಾಲಕ್ಕಿ ಸುಗ್ಗಿ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಹುಲಿ ವೇಷ, ಚಿಲಿಪಿಲಿ ಗೊಂಬೆ, ಪೂಜಾ ಕುಣಿತ, ಮಹಿಳಾ ವೀರಗಾಸೆ, ಪುರುಷ ವೀರಗಾಸೆ, ಗೊರವರ ಕುಣಿತ, ಚಂಡೆಗೆ, ಗಾರುಡಿಗೊಂಬೆ, ಸ್ಟಿಕ್ ವಾಕರ್ ಸೇರಿದಂತೆ ಸಾಕಷ್ಟು ಜಾನಪದ ಕಲಾ ತಂಡಗಳು ಭಾಗಿಯಾಗಿದ್ದವು.
ನಿರ್ದೇಶಕ ಎಸ್ ನಾರಾಯಣ್ ರಿಂದ ರಾಜಸ್ಥಾನ ಮೂಲದ ವ್ಯಕ್ತಿಗೆ ಕನ್ನಡ ಕಲಿಸುವ ಪುಸ್ತಕ ನೀಡುವ ಮೂಲಕ ಕನ್ನಡ ಕಲಿಯಲು ಮತ್ತು ಕಲಿಸಲು ಪ್ರೋತ್ಸಾಹ ನೀಡಲಾಯಿತು. ಈ ವೇಳೆ ಮಾತನಾಡಿದ ವ್ಯಕ್ತಿ ನಾನು ರಾಜಸ್ಥಾನದಿಂದ ಬೆಂಗಳೂರಿಗೆ ಬಂದು 35 ವರ್ಷ ಆಗಿದೆ. ನಾನು ಕನ್ನಡ ಕಲಿಯುತ್ತಿದ್ದೇನೆ ಬೇರೆ ಅವರಿಗೂ ಕನ್ನಡ ಕಲಿಸಲು ತುಂಬಾ ಇಷ್ಟ ಆಗುತ್ತದೆ. ಈ ಕನ್ನಡ ಪುಸ್ತಕದಿಂದ ನಮ್ಮವರಿಗೆ ಕನ್ನಡ ಕಲಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 am, Mon, 9 December 24