ಭೀಮಾ ನದಿ ಅಬ್ಬರ: ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್​

ಭೀಮಾ ನದಿ ಪ್ರವಾಹದಿಂದಾಗಿ ಜೇವರ್ಗಿ ಪಟ್ಟಣದ ಸಮೀಪದ ಕಟ್ಟಿಸಂಗಾವಿ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಬಂದ್​ ಆಗಿದೆ. ಕಲಬುರಗಿಯ ವಿವಿಧೆಡೆ ಮನೆ, ದೇಗುಲಗಳಿಗೂ ನೆರೆ ನೀರು ನುಗ್ಗಿದ್ದು ಜನ ಪರದಾಟ ನಡೆಸಿದ್ದಾರೆ. ಕೃಷಿ ಭೂಮಿಗಳು ಮುಳುಗಡೆಯಾಗಿರೋದು ರೈತರನ್ನ ಕಂಗೆಡಿಸಿದೆ.

ಭೀಮಾ ನದಿ ಅಬ್ಬರ: ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್​
ಭೀಮಾ ನದಿ ಅಬ್ಬರ
Edited By:

Updated on: Sep 27, 2025 | 12:30 PM

ಕಲಬುರಗಿ/ಯಾದಗಿರಿ, ಸೆಪ್ಟೆಂಬರ್​ 27: ಕಲಬುರಗಿ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ನಿರಂತರವಾಗಿ ಮಳೆ (Rain) ಹಿನ್ನಲೆ ಭೀಮಾ ನದಿ ಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ. ಇದರ ಜೊತೆಗೆ ಮಹಾರಾಷ್ಟ್ರದಿಂದ ನದಿಗೆ 3.40 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ ಮಾಡಿರುವ ಪರಿಣಾಮ ಜೇವರ್ಗಿ ಪಟ್ಟಣದ ಸಮೀಪದ ಕಟ್ಟಿಸಂಗಾವಿ ಸೇತುವೆ ಮುಳುಗಡೆಯಾಗಿದೆ. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಬಂದ್​ ಆಗಿದ್ದು, ನಡು ರಸ್ತೆಯ ಮೇಲೆಯೇ ವಾಹನಗಳು ಕಿಲೋಮೀಟರ್​ಗಟ್ಟಲೆ ಕ್ಯೂ ನಿಂತಿವೆ.

ಮನೆ, ದೇಗುಲಗಳಿಗೆ ನುಗ್ಗಿದ ಹಳ್ಳದ ನೀರು

ಕಳೆದ‌ 48 ಗಂಟೆಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅವಾಂತರಗಳೇ ಸೃಷ್ಟಿಯಾಗಿದ್ದು, ಹಳ್ಳ ಭರ್ತಿಯಾಗಿ ಕರ್ಚಖೇಡ ಗ್ರಾಮಕ್ಕೆ ಮಳೆ ನೀರು ನುಗ್ಗಿದೆ. ಗ್ರಾಮದ ಹಲವು ಮನೆಗಳು, ದೇವಸ್ಥಾನಕ್ಕೆ ಹಳ್ಳದ ನೀರು ನುಗ್ಗಿದ ಪರಿಣಾಮ ಜನರು ಪರದಾಟ ನಡೆಸಿದ್ದಾರೆ. ಜೇವರ್ಗಿ ತಾಲೂಕಿನ ಯಂಕಂಚಿ ಗ್ರಾಮದ ಬಸವೇಶ್ವರ ದೇವಸ್ಥಾನ, ಮಹಾಲಕ್ಷ್ಮೀ ದೇವಸ್ಥಾನಗಳಿಗೂ ಪ್ರವಾಹದ ನೀರು ನುಗ್ಗಿದೆ.

ಇದನ್ನೂ ಓದಿ: ಭೀಮಾ ನದಿ ಆರ್ಭಟ; ಪ್ರವಾಹಕ್ಕೆ ಊರಿಗೆ ಊರೇ ಖಾಲಿ

ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿರೋ ಹಿನ್ನಲೆ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಬಿ.ಫೌಝೀಯಾ ತರುನ್ನುಮ್‌ ಆದೇಶಿಸಿದ್ದಾರೆ. ದಸರಾ ರಜೆಯಿಂದ ವಿನಾಯತಿ ಪಡೆದು ನಡೆಸುತ್ತಿರುವ ಶಾಲೆಗಳಿಗೆ ಈ ಆದೇಶ ಅನ್ವಯಿಸಲಿದೆ. ನಾಳೆಯೂ ಕಲಬುರಗಿಯಲ್ಲಿ ಮಳೆಯ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

ರೈತರ ಬದುಕು ಬರ್ಬಾದ್

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಪರಿಣಾಮ ಕಲಬುರಗಿಯ ಸನ್ನತಿ ಬ್ಯಾರೇಜ್ ನಿಂದ ಯಾದಗಿರಿ ಕಡೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಭೀಮಾ ನದಿ ಪ್ರವಾಹಕ್ಕೆ ರೈತರ ಬದುಕು ಅಕ್ಷರಶಃ ಬರ್ಬಾದ್ ಆಗಿದ್ದು, ನಾಯ್ಕಲ್ ಗ್ರಾಮದಲ್ಲಿ ನೂರಾರು ಎಕರೆ ಬೆಳೆ ಪ್ರವಾಹದ ನೀರಲ್ಲಿ ಮುಳುಗಿದೆ. ನದಿ ಪ್ರದೇಶದ ಸುತ್ತ ಸುಮಾರು ಒಂದು ಕಿಲೋಮೀಟರ್​ ವ್ಯಾಪ್ತಿಯವರೆಗೂ ಪ್ರವಾಹದ ನೀರು ನುಗ್ಗಿದ್ದು, ಭತ್ತ ಹಾಗೂ ಹತ್ತಿ ಬೆಳೆದಿದ್ದ ಜಮೀನು ಸಮುದ್ರದ ರೀತಿ ಕಾಣತೊಡಗಿದೆ. ಇದರ ಜೊತೆಗೆ ಯಾದಗಿರಿ ಜಿಲ್ಲೆಯಲ್ಲೂ ವರುಣ ಅಬ್ಬರಿಸುತ್ತಿದ್ದು, ಮಳೆಯ ಹೊಡೆತಕ್ಕೆ ಅನ್ನದಾತರು ಕಂಗೆಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 12:29 pm, Sat, 27 September 25

Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us