Seege Hunnime 2025: ಪ್ರಕೃತಿಯೊಂದಿಗೆ ರೈತರ ಬಾಂಧವ್ಯ ಸಾರುವ ಭೂಮಿ ಹುಣ್ಣಿಮೆ ಹಬ್ಬ
Bhoomi Hunnime: ಭೂಮಿ ಹುಣ್ಣಿಮೆ ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬಂದ ಸಂಪ್ರದಾಯ. ಅಶ್ವಯುಜ ಮಾಸದ ಪೂರ್ಣಿಮೆಯಂದು ಆಚರಿಸಲ್ಪಡುವ ಈ ಹಬ್ಬವು ಪ್ರಕೃತಿ ಮತ್ತು ರೈತರ ನಡುವಿನ ಬಾಂಧವ್ಯವನ್ನು ಸಾರುತ್ತದೆ. ವರ್ಷವಿಡೀ ಅನ್ನ ನೀಡುವ ಭೂಮಿ ತಾಯಿಗೆ ಇಂದಿನ ದಿನ ಕೃತಜ್ಞತೆಗಳನ್ನು ಅರ್ಪಿಸುವುದು ಈ ಹಬ್ಬದ ವಿಶೇಷ.

ಆಧುನಿಕತೆಯ ಹೊಸಯುಗದಲ್ಲಿ ರೈತಾಪಿ ಜನರು ಇಂದಿಗೂ ತಮ್ಮ ಹೊಲಗಳ ಮೇಲೆ ಅವಲಂಬಿತರಾಗಿದ್ದಾರೆ. ಅನ್ನ ಕೊಡುವ ಭೂಮಿಯನ್ನು ಗೌರವಿಸುವ ದಿನವೇ ಭೂಮಿ ಹುಣ್ಣಿಮೆ. ಆಶ್ವಯುಜ ಮಾಸ ಶುಕ್ಲ ಪಕ್ಷದ ಪೂರ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಲಾಗುತ್ತದೆ. ಭೂಮಿ ಪೂಜೆ ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ವರ್ಷವಿಡೀ ನೀಡಿದ ಫಸಲಿಗೆ ಕೃತಜ್ಞತೆಯನ್ನು ಸಲ್ಲಿಸುವ ಸುಂದರ ಪರಿಕಲ್ಪನೆಯೊಂದಿಗೆ ಮತ್ತು ಮುಂದೆಯೂ ಸಮೃದ್ಧವಾದ ಫಸಲು ನೀಡೆಂದು ಪ್ರಾರ್ಥಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಭೂಮಿ ಹುಣ್ಣಿಮೆ ಹಬ್ಬದ ವಿಶೇಷ
ಭೂಮಿ ಹುಣ್ಣಿಮೆ ಹಬ್ಬವನ್ನು ಅಶ್ವಯುಜ ಮಾಸದ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಇದು ಕೃಷಿ ಪ್ರಧಾನ ಸಮಾಜದ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ಹಬ್ಬವಾಗಿದೆ. ಭೂಮಿಯನ್ನು ತಾಯಿ ಎಂದು ಪೂಜಿಸುವ ಭಾರತೀಯರ ನಂಬಿಕೆ ಈ ಹಬ್ಬದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.ಮಳೆಗಾಲ ಮುಗಿದ ನಂತರ ಹೊಲಗಳಲ್ಲಿ ಬೆಳೆಯ ಚಿಗುರುಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ರೈತರು ಭೂಮಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಎತ್ತು, ಕೃಷಿ ಸಾಧನಗಳು ಹಾಗೂ ಪ್ರಕೃತಿಗೆ ಗೌರವ ತೋರಿಸುವುದು ಈ ಹಬ್ಬದ ಪ್ರಮುಖ ಅಂಶ. ಭೂಮಿ ಹುಣ್ಣಿಮೆ ರೈತರ ಜೀವನಕ್ಕೆ ಮಾತ್ರ ಸೀಮಿತವಲ್ಲ, ಪ್ರಕೃತಿಯೊಂದಿಗೆ ರೈತರ ಬಾಂಧವ್ಯವನ್ನು ಹಬ್ಬದ ರೂಪದಲ್ಲಿ ಆಚರಿಸುವುದಾಗಿದೆ.
ಕರ್ನಾಟಕದಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಪೂಜೆ ಸಲ್ಲಿಸುತ್ತಾರೆ. ಹೊಲದಲ್ಲಿಯೇ ತೆನೆಗಳನ್ನು, ಮರಗಿಡಗಳನ್ನು ಹೂವುಗಳಿಂದ ಸಿಂಗರಿಸಿ, ಕಡುಬು, ಪಾಯಸ, ಚಿತ್ರಾನ್ನಗಳಂತಹ ಖಾದ್ಯಗಳನ್ನು ನೈವೇದ್ಯಕ್ಕಿರಿಸುತ್ತಾರೆ. ವಿಜೃಂಭಣೆಯ ಪೂಜೆಯ ನಂತರ ಹೊಲದಲ್ಲೇ ಕುಳಿತು ಊಟ ಮಾಡುತ್ತಾರೆ. ಹೀಗೆ ಆಚರಿಸುವ ಹಬ್ಬವು ಭೂಮಿ ತಾಯಿ ಮತ್ತು ಆಕೆಯನ್ನೇ ಜೀವನವಾಗಿಸಿಕೊಂಡಿರುವ ರೈತಾಪಿ ವರ್ಗದ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
ಭೂಮಿ ಹುಣ್ಣಿಮೆ ಹಬ್ಬದ ಹಿನ್ನೆಲೆ
ಆಶ್ವಯುಜ ಮಾಸವು ಆಗುವುದು ಹುಣ್ಣಿಮೆಯ ದಿನ ಅಶ್ವಿನೀ ನಕ್ಷತ್ರವು ಬಂದಾಗ. ಈ ಅಶ್ವಿನೀ ನಕ್ಷತ್ರದ ದೇವತೆಗಳಾದ ಅಶ್ವಿನೀ ಕುಮಾರರು ದೇವವೈದ್ಯರು. ಇವರ ಅನುಗ್ರಹವು ಇಡೀ ಪ್ರಪಂಚದ ಮೇಲೆ ಹಾಗೂ ವಿಶೇಷವಾಗಿ ಆಹಾರವಾಗಿ ಬಳಸುವ ವಸ್ತುಗಳ ಮೇಲೆ ಇದ್ದರೆ ಆಹಾರಧಾನ್ಯಗಳು ಹಾಗೂ ಆರೋಗ್ಯವೂ ಸಮೃದ್ಧವಾಗುತ್ತದೆ. ಆದ ಕಾರಣ ಈ ದಿನದಂದು ಭೂಮಿಗೆ ಪೂಜೆ ಸಲ್ಲಿಸುವುದು. ಅದರ ಮೂಲಕ ದೇವತೆಗಳ ಪ್ರೀತಿಯಾಗುವುದು.
ಇದನ್ನೂ ಓದಿ ಭೂಮಿ ಹುಣ್ಣಿಮೆಯ ಮಹತ್ವ? ಆಚರಣೆ ಮತ್ತು ಇದರ ಪೂಜಾ ವಿಧಾನ ಹೇಗೆ?
ಶರತ್ಕಾಲದ ಹುಣ್ಣಿಮೆ ವಿಶೇಷ ಹುಣ್ಣಿಮೆ ಕೂಡ ಹೌದು. ಶರತ್ಕಾಲದಲ್ಲಿ ಕಾಣುವ ಚಂದ್ರನು ಅತಿಶಯವಾದ ಕಾಂತಿಯಿಂದ ಶೋಭಿಸುವನು. ಚಂದ್ರನು ಔಷಧಿ ಸಸ್ಯಗಳಿಗೆ ಒಡೆಯನಾದ ಕಾರಣ ಈ ದಿನ ಆತನ ಬೆಳದಿಂಗಳು ದಿವ್ಯವಾದ ಶಕ್ತಿಯಿಂದಲೂ ಕೂಡಿರುತ್ತದೆ. ಎಲ್ಲ ಸಸ್ಯರಾಶಿಗಳ ಮೇಲೆ ವನಸ್ಪತಿಗಳ ಮೇಲೆ ಚಂದ್ರನ ಕೃಪಾದೃಷ್ಟಿ ಇರುವುದರಿಂದ ಇಂದು ಭೂಮಿ ಪೂಜೆಯನ್ನು ಆಚರಿಸುತ್ತೇವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:08 am, Tue, 7 October 25




