ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸರು
ಗಡಿ ಜಿಲ್ಲೆ ಬೀದರ್ ಪೋಲಿಸ್ರು ಇಂದು(ಏ.18) ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಹೆಡೆಮುರಿ ಕಟ್ಟಿದ್ದಾರೆ. ಒಂದೂವರೆ ಕ್ವಿಂಟಾಲ್ಗೂ ಅಧಿಕ ಗಾಂಜಾವನ್ನ ವಶಕ್ಕೆ ಪಡೆದುಕೊಂಡಿದ್ದು, 10 ಲಕ್ಷ ರೂಪಾಯಿ ಮೌಲ್ಯದ ಕಾರನ್ನ ಹಾಗೂ ಐವರನ್ನ ಬಂಧಿಸಿದ್ದಾರೆ.
ಬೀದರ್: ಅಂತರ್ ರಾಜ್ಯ ಗಾಂಜಾ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಇದೀಗ ಬೀದರ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹೌದು ಜಿಲ್ಲೆಯ ಮೂಲಕ ಎಂಟ್ರಿಯಾಗಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆಯ ರಾಜ್ಯಕ್ಕೆ ಗಾಂಜಾ ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ವರ್ಷಕ್ಕೆ ಏನಿಲ್ಲವೆಂದರು ಹತ್ತಾರು ಕ್ವಿಂಟಾಲ್ ಗಟ್ಟಲೇ, ಗಾಂಜಾ ಪತ್ತೆಯಾಗುತ್ತಿರುವುದು. ಅದರಂತೆ ಇಂದು(ಏ.18) ಕೂಡ ಮೂರು ಪ್ರತ್ಯೆಕ ಪ್ರಕರಣಗಳಲ್ಲಿ 1.65 ಕೋಟಿ ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ ಬೀದರ್ ಜಿಲ್ಲೆಯ ಹುಮ್ನಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಳಕೇರಾ ಗ್ರಾಮದ ಬಳಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1.56 ಕೋಟಿ ಮೌಲ್ಯದ ಗಾಂಜಾ ಹಾಗೂ 10 ಲಕ್ಷ ರೂಪಾಯಿ ಮೌಲ್ಯದ ಕಾರನ್ನ ಜಪ್ತಿ ಮಾಡಿಕೊಂಡಿದ್ದು ಇಬ್ಬರನ್ನ ಬಂಧಿಸಿದ್ದಾರೆ. ಇದು ಈ ವರ್ಷದಲ್ಲಿ ನಡೆದ ದೊಡ್ಡ ಗಾಂಜಾ ರೇಡ್ ಆಗಿದ್ದು, ರೇಡ್ ಮಾಡಿದ ಪೊಲೀಸರಿಗೆ ಬೀದರ್ ಎಸ್ಪಿ ಚನ್ನಬಸವಣ್ಣ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಬೀದರ್ ಗಾಂಧಿಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೂ ಕೂಡ 5 ಲಕ್ಷ 3 ಸಾವಿರ ಮೌಲ್ಯದ 5 ಕೆಜಿ 130 ಗ್ರಾಂ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಇಬ್ಬರನ್ನ ಬಂಧಿಸಿದ್ದಾರೆ. ಇದೆ ಗಾಂಧಿಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇನ್ನೊಂದು ಪ್ರಕರಣದಲ್ಲಿ 4.478 ಕಿಲೋ ಗ್ರಾಂ ಗಾಂಜಾವನ್ನ ವಶಕ್ಕೆ ಪಡೆದಿದ್ದು, ಇದರ ಮೌಲ್ಯ 4 ಲಕ್ಷ 78 ಸಾವಿರ ರೂಪಾಯಿ ಆಗಲಿದೆ. ಒಂದೆ ದಿನ ಒಟ್ಟು ಮೂರು ಪ್ರಕರಣಗಳನ್ನ ಬೇಧಿಸಿರುವ ಪೊಲೀಸರು, ಒಟ್ಟು 1.65 ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದು 5 ಜನ ಆರೋಪಿಗಳ ಮೇಲೆ ಕೇಸ್ ದಾಖಲಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ:ಜೈಲಿನಲ್ಲಿದ್ದುಕೊಂಡೇ ಹೆಂಡತಿ-ಮಕ್ಕಳಿಂದ ಗಾಂಜಾ ದಂಧೆ: 13 ಲಕ್ಷ ರೂ. ಮೌಲ್ಯದ ಗಾಂಜಾ ಜೊತೆ ಸಿಕ್ಕಿಬಿದ್ದ ಮಹಿಳೆ
ಹಳೆ ಪ್ರಕರಣಗಳನ್ನ ಭೇದಿಸಿ ನೋಡಿದಾಗ ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಓರಿಸ್ಸಾದಿಂದ ಬೀದರ್ ಮೂಲಕ ಅಂತರ್ ರಾಜ್ಯ ಹಾಗೂ ರಾಜ್ಯದ ವಿವಿಧೆಡೆ ಮಾರಾಟ ಮಾಡುವುದು ಕಂಡು ಬಂದಿದ್ದು, ಇನ್ನು ಮುಂದೆ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಗಾಂಜಾ ಮಾರಾಟಕ್ಕೆ ತಡೆ ಹಾಕುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಆದರೇ ವರ್ಷದಿಂದ ವರ್ಷಕ್ಕೆ ಗಾಂಜಾ ಮಾರಾಟ ಜಾಲ ಹೆಚ್ಚುತ್ತಲೇ ಸಾಗಿದೆಯೇ ಹೊರತು ಕಡಿಮೆ ಆಗಿಲ್ಲ. ಈ ಬಗ್ಗೆ ಪೊಲೀಸರು ಗಮನ ಹರಿಸಿ ಗಾಂಜಾ ಮಾರಾಟ ಜಾಲವನ್ನ ಬುಡ ಸಮೇತ ಕಿತ್ತು ಹಾಕಬೇಕಾಗಿದೆ ಎಂದು ಇಲ್ಲಿನ ಜನರು ಸರಕಾರಕ್ಕೆ, ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ಕೊಡೋದಿಲ್ಲ ಎಂದು ಎಸ್ಪಿ ಹೇಳುತ್ತಿದ್ದಾರೆ.
ಜಿಲ್ಲೆಯೂ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯವನ್ನ ಸುತ್ತುವರೆದಿದೆ. ಹೀಗಾಗಿ ಬೀದರ್ ಮೂಲಕ ಅಂತರ್ ರಾಜ್ಯಕ್ಕೆ ಗಾಂಜಾ ಸಾಗಾಟ ಜೋರಾಗಿ ನಡೆಯುತ್ತಿದೆ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಗಾಂಜಾ ಸಾಗಾಟ ದಂಧೆಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ. ಏನೇ ಇರಲಿ ಇಂದು ನಡೆದ ಅಕ್ರಮ ಗಾಂಜಾ ರೇಡ್ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು ಇದನ್ನ ಬೇಧಿಸಿದ ಪೊಲೀಸರಿಗೆ ಎಸ್ಪಿ ಬಹುಮಾನ ಘೋಷನೆ ಮಾಡಿದ್ದು ಪೊಲೀಸರಲ್ಲಿ ಹುರುಪು ತುಂಬಿದಂತಾಗಿದೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Tue, 18 April 23