ಬೀದರ್‌ ಪಶು ವಿವಿ ಘಟಿಕೋತ್ಸವ: 16 ಚಿನ್ನದ ಪದಕ ಬಾಚಿಕೊಂಡ ಮೀನು ವ್ಯಾಪಾರಿಯ ಮಗಳು

ಬೀದರ್‌ನ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಉಡುಪಿಯ ಖುಷಿ 16 ಚಿನ್ನದ ಪದಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಮೀನು ವ್ಯಾಪಾರಿಯ ಮಗಳಾದ ಖುಷಿ ಪಶುವೈದ್ಯಕೀಯದಲ್ಲಿ ಸಾಧನೆ ಮಾಡಿದ್ದಾರೆ. ತುಮಕೂರಿನ ಭೂಮಿಕಾ ಹೈನು ವಿಜ್ಞಾನದಲ್ಲಿ 6 ಚಿನ್ನದ ಪದಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಬೀದರ್‌ ಪಶು ವಿವಿ ಘಟಿಕೋತ್ಸವ: 16 ಚಿನ್ನದ ಪದಕ ಬಾಚಿಕೊಂಡ ಮೀನು ವ್ಯಾಪಾರಿಯ ಮಗಳು
ಖುಷಿ
Image Credit source: tv9 kannada
Edited By:

Updated on: Feb 27, 2026 | 4:59 PM

ಬೀದರ್​​​, ಫೆಬ್ರವರಿ 27: ಅವಿರತ ಶ್ರಮಪಟ್ಟು, ಶ್ರದ್ಧೆಯಿಟ್ಟು ಮಾಡಿದರೆ ಎಂತಹ ಕನಸೂ ನನಸಾಗುತ್ತದೆ. ಕಂಡ ಕನಸು ಕಾಣುವುದು ಅದನ್ನ ಸಾಕಾರಗೊಳಿಸುವುದು ಅವರವರ ಕೈಯಲ್ಲಿಯೇ ಇದೆ. ಇಂತಹ ಅದ್ಭುತ ಕನಸನ್ನ ಸಾಕಾರಗೊಳಿಸಿ ಚಿನ್ನದ ವಿದ್ಯಾರ್ಥಿಯಾಗಿದ್ದಾರೆ. ಪಶು ವೈದ್ಯಕೀಯ ಪದವಿಯಲ್ಲಿ 16 ಚಿನ್ನದ ಪದಕಗಳನ್ನ (gold medals) ಬಾಚಿಕೊಂಡ ಉಡುಪಿಯ ಖುಷಿ, 6 ಚಿನ್ನದ ಪದಕ ಪಡೆದ ತುಮಕೂರಿನ ಭೂಮಿಕಾರ ಯಶೋಗಾಥೆ ಎಂತಹವರನ್ನೂ ಪ್ರೇರೇಪಿಸುತ್ತದೆ.

ಮೀನು ವ್ಯಾಪಾರಿಯ ಮಗಳು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ

ಉಡುಪಿಯ ಮಂದಾರ್ತಿ ಗ್ರಾಮದ ಖುಷಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ಪದವಿಯಲ್ಲಿ 16 ಚಿನ್ನದ ಪದಕವನ್ನ ಪಡೆದುಕೊಂಡು ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಪಾಸಾಗಿದ್ದಾರೆ. ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಖುಷಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.

ಇದನ್ನೂ ಓದಿ: ಬೀದರ್​​​ನ ಅದೊಂದು ಗ್ರಾಮದಲ್ಲಿ ಭೂಮಿಯಿಂದ ಹೊರಹೊಮ್ಮುತ್ತಿದೆ ವಿಚಿತ್ರ ಶಬ್ಧ

ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ 2023-24ನೇ ಬ್ಯಾಚ್‌ನ ವಿದ್ಯಾರ್ಥಿನಿ ಖುಷಿ, ಚಿನ್ನದ ಪದಕ ಪಡೆಯುವ ನಿಟ್ಟಿನಲ್ಲಿ ಕಷ್ಟಪಟ್ಟು ಓದಿದ್ದಾರೆ. ಆದರೆ, 16 ಚಿನ್ನದ ಪದಕಗಳು ಒಲಿದು ಬರುತ್ತವೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಈ ವಿಷಯ ಗೊತ್ತಾದ ನಂತರ ‘ಖುಷಿ’ ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ ಎಂದು ಅವರು ಟಿವಿ9 ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.

ವಿಶ್ವವಿದ್ಯಾಲಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡ ಭೂಮಿಕಾ 

ಇನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದ ರೈತನ ಮಗಳು ಭೂಮಿಕಾ 6 ಚಿನ್ನದ ಪದಕ ಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.

ಭೂಮಿಕಾ 

ಭೂಮಿಕಾ ಅವರು 2024-25ನೇ ಸಾಲಿನಲ್ಲಿ ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ ಬಿ.ಟೆಕ್ (ಹೈನು ತಂತ್ರಜ್ಞಾನ) ಪದವಿಯಲ್ಲಿ ಈ ಸಾಧನೆ ಮಾಡಿದ್ದಾರೆ. ತಂದೆ ಕೃಷಿ ಕಾಯಕ ಮಾಡುತ್ತಿದ್ದಾರೆ, ತಾಯಿ ಕೃಷಿ ಕಾಯಕದ ಜೊತೆಗೆ ಮನೆಯ ಕೆಲಸವನ್ನ ಕೂಡ ಮಾಡಿಕೊಂಡು ಮಕ್ಕಳ ಓದುಗೆ ಪ್ರೋತ್ಸಾಹ ನೀಡಿದ ಪರಿಣಾಮ ಇಂದು ಭೂಮಿಕಾ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ನಾಗರಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವಾಸೆ: ಭೂಮಿಕಾ

ತನಗೆ ಆರು ಚಿನ್ನ ಪದಕ ಸಿಕ್ಕಿರುವ ಖುಷಿಯನ್ನ ಹಂಚಿಕೊಂಡಿರುವ ಭೂಮಿಕಾ, ಕಾಲೇಜಿನಲ್ಲಿ ಪ್ರಾಧ್ಯಾಪಕರ ಉತ್ತಮ ಪಾಠ, ಮನೆಯಲ್ಲಿ ಉತ್ತಮ ಬೆಂಬಲ ಸಿಕ್ಕಿದ್ದರಿಂದ ನಿತ್ಯ ಆರೇಳು ತಾಸು ಓದುತ್ತಿದ್ದೆ. ಭವಿಷ್ಯದಲ್ಲಿ ಐಎಎಸ್ ಮಾಡಿ, ನಾಗರಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?

ಕಲಿಯುವ, ಸಾಧಿಸುವ ಛಲವಿದ್ದವರಿಗೆ ಯಾವುದು ಕಷ್ಟವಲ್ಲ. ಸಲೀಸು ಅನ್ನೋದಕ್ಕೆ ಈ ಚಿನ್ನದ ಹುಡುಗಿಯರೇ ಸಾಕ್ಷಿ. ಅಲ್ಲದೇ ಬಡತನ ಗುರಿ ಮುಟ್ಟೋಕೆ ಅಡ್ಡಿಯಾಗಲ್ಲ ಅನ್ನೋದಕ್ಕೆ ತಾಜಾ ನಿದರ್ಶನವಾಗಿದ್ದಾರೆ. ಅದೇನೇ ಇದ್ದರೂ ಈ ಚಿನ್ನದ ಹುಡುಗಿಯರ ಮತ್ತಷ್ಟು ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us