ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ದೇವರ ದರ್ಶನಕ್ಕೆ ಹೋಗಿದ್ದ ಕರ್ನಾಟಕದ ನಾಲ್ವರು ಸ್ನೇಹಿತರು ದುರ್ಮರಣ
ಮಹಾರಾಷ್ಟ್ರದ ಉಮ್ಮರ್ಗಾ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ದೀಪಾವಳಿ ಹಿನ್ನೆಲೆ ಸ್ವಾಮೀಜಿ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಅವರಿದ್ದ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀದರ್, ಅಕ್ಟೋಬರ್ 21: ಮಹಾರಾಷ್ಟ್ರದ ಉಮ್ಮರ್ಗಾ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ (accident) ಸಂಭವಿಸಿದ್ದು, ಬೀದರ್ ಮೂಲದ ನಾಲ್ವರು ಸ್ನೇಹಿತರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಘಟನೆ ನಡೆದಿದೆ. ಶಿವಕುಮಾರ್, ರತಿಕಾಂತ, ಇನ್ನಿಬ್ಬರ ಹೆಸರು ತಿಳಿದುಬಂದಿಲ್ಲ. ಮೃತರು ಬೀದರ್ ತಾಲೂಕಿನ ಖಾಶೆಂಪೂರ್ ಗ್ರಾಮದ ನಿವಾಸಿಗಳು. ಓರ್ವನಿಗೆ ಗಂಭೀರ ಗಾಯವಾಗಿದ್ದು, ಉಮ್ಮರ್ಗಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಡೆದದ್ದೇನು?
ದೀಪಾವಳಿ ಹಬ್ಬ ಹಿನ್ನೆಲೆ ಹುಲಜಂತಿ ಮಾಳಿಂಗರಾಯ ಸ್ವಾಮೀಜಿ ದರ್ಶನಕ್ಕೆ ಬೀದರ್ ಮೂಲದ ಐವರು ಸ್ನೇಹಿತರು ತೆರಳಿದ್ದರು. ದರ್ಶನ ಮುಗಿಸಿ ಹಿಂದಿರುಗುವಾಗ ಮಹಾರಾಷ್ಟ್ರದ ಉಮ್ಮರ್ಗಾ ಬಳಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ. ಇಂದು ಬೆಳಗಿನ ಜಾವ ದುರಂತ ಸಂಭವಿಸಿದ್ದು, ಐವರು ಸ್ನೇಹಿತರ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಓವರ್ಟೇಕ್ ಮಾಡುವ ಭರದಲ್ಲಿ ಎದುರಿಗೆ ಬರ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ: ಇಬ್ಬರು ಸಾವು
ಓವರ್ಟೇಕ್ ಮಾಡುವ ಭರದಲ್ಲಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮಲ್ಲಿಮಾಕನಪುರ ಬಳಿ ರಾಜ್ಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ರಾಯಚೂರು: ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ದುರ್ಮರಣ
ಉತ್ತರ ಭಾರತ ಮೂಲದ ಲೋಕೇಶ್(25), ವಿಮಲ್(27) ಮೃತರು. ಗಾಯಗೊಂಡವನನ್ನು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.
ಕಾರು, ಟಂಟಂ ವಾಹನ ನಡುವೆ ಅಪಘಾತ: ಇಬ್ಬರು ಸಾವು
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮದ ಬಳಿ ಕಾರು ಮತ್ತು ಟಂಟಂ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಟಂಟಂ ವಾಹನದಲ್ಲಿದ್ದ ಬಾಷಾ ಸಾಬ್(45), ಶಂಕ್ರಪ್ಪ(41) ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲುವೆಗೆ ಬೈಕ್ ಬಿದ್ದು ಸವಾರ ಸಾವು
ಕೋಲಾರದ ತ್ಯಾವನಹಳ್ಳಿ ಬಳಿ ಕಾಲುವೆಗೆ ಬೈಕ್ ಬಿದ್ದು ಸವಾರ ಮಧುಮೋಹನ ರಾವ್(46) ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮೃತ ಮಧುಮೋಹನ ರಾವ್ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿ ಮನೆಗೆ ವಾಪಸಾಗುವಾಗ ಅಪಘಾತ ಸಂಭವಿಸಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:35 pm, Tue, 21 October 25



