
ಬೀದರ್, ನವೆಂಬರ್ 20: ಬೀದರ್ ಜಿಲ್ಲೆಯ ಜನರಿಗೆ ನೀರಿನ ಪ್ರಮುಖ ಆಸರೆಯಾಗಿರುವ ಕಾರಂಜಾ ಜಲಾಶಯದಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಒಟ್ಟು 7.691 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ ಕೇವಲ 3.305 ಟಿಎಂಸಿ ನೀರು ಮಾತ್ರ ಉಳಿದಿದೆ. ಅಂದರೆ ಜಲಾಶಯದ ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದ ನೀರು ಮಾತ್ರ ಸಂಗ್ರಹವಿದೆ. ಹೀಗಾಗಿ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ನೀರಿನ ಸಂರಕ್ಷಣೆಗೆ ಕ್ರಮ ಕೈಗೊಳ್ಳದಿದ್ದರೆ ಬೇಸಿಗೆಯಲ್ಲಿ ಜನರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಬರಬಹುದೆಂಬ ಆತಂಕ ಎದುರಾಗಿದೆ.
ಈ ವರ್ಷ ಬೀದರ್ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿರುವುದು ನೀರಿನ ಮಟ್ಟ ಇಳಿಕೆಗೆ ಪ್ರಮುಖ ಕಾರಣ. ಜಲಾಶಯಕ್ಕೆ ಹೊಸ ಒಳಹರಿವು ಇಲ್ಲದೆ, ಸಂಗ್ರಹಗೊಂಡ ನೀರನ್ನು ಮಾತ್ರ ಅವಲಂಬಿಸಬೇಕಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಗೆ ಕಾರಂಜಾ ಜಲಾಶಯದಿಂದಲೇ ಕುಡಿಯುವ ನೀರನ್ನು ಪಂಪ್ ಮಾಡಲಾಗುತ್ತಿದೆ. ಇದು ನೀರಿನ ಮಟ್ಟ ಇಳಿಕೆಗೆ ಇನ್ನೊಂದು ಕಾರಣ. ಇದಲ್ಲದೆ, ಜಲಾಶಯದಿಂದ ರೈತರಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ಕಳೆದ ಒಂದು ತಿಂಗಳಿನಿಂದ ರೈತರ ಜಮೀನುಗಳಿಗೆ ನೀರು ಬಿಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ದುರದೃಷ್ಟವಶಾತ್, ನೀರು ಪೂರೈಕೆ ನಿಲ್ಲಿಸಿದ್ದರೂ ಕೂಡ, ಕಾಲುವೆಗಳ ಮೂಲಕ ಪ್ರತಿನಿತ್ಯ ಸಾವಿರಾರು ಲೀಟರ್ ನೀರು ಸೋರಿಕೆಯಾಗಿ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇನ್ನು, ಜಲಾಶಯದ ಹಿನ್ನೀರಿನಲ್ಲಿ ಸಾವಿರಾರು ರೈತರು ಪಂಪ್ ಸೆಟ್‌ಗಳ ಮೂಲಕ ತಮ್ಮ ಜಮೀನುಗಳಿಗೆ ನೀರನ್ನು ಹಾಯಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಬೀದರ್ ಜಿಲ್ಲೆಯಲ್ಲಿ ಚಳಿಗಾಲದಲ್ಲೂ ಕೂಡ ಅನಿರೀಕ್ಷಿತವಾಗಿ ಬಿಸಿಲಿನ ತಾಪಮಾನ ಹೆಚ್ಚಿದೆ. ಇದರ ಪರಿಣಾಮವಾಗಿ ಜಲಾಶಯದಲ್ಲಿರುವ ನೀರು ಆವಿಯಾಗಿ ನಷ್ಟವಾಗುತ್ತಿದೆ. ಈ ಎಲ್ಲಾ ಅಂಶಗಳು ಒಟ್ಟಾಗಿ ನೀರಿನ ಪ್ರಮಾಣ ದಿನೇ ದಿನೇ ಕುಸಿಯಲು ಕಾರಣವಾಗಿವೆ.
ಇದನ್ನೂ ಓದಿ: ಸೌಲಭ್ಯಗಳ ಮಹಾಪೂರ, ಸಾಧನೆಯ ಶಿಖರ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಘೋಡಂಪಳ್ಳಿ ಸರ್ಕಾರಿ ಶಾಲೆ
ಕಳೆದ ವರ್ಷ ಇದೇ ಅವಧಿಯಲ್ಲಿ ಕಾರಂಜಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಡ್ಯಾಂ ಭರ್ತಿಯಾಗಿದ್ದರಿಂದ ಕಾಲುವೆಗಳು ಮತ್ತು ಗೇಟ್‌ಗಳ ಮೂಲಕ ಲಕ್ಷಾಂತರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿತ್ತು. ಆದರೆ, ಈ ವರ್ಷ ಪರಿಸ್ಥಿತಿ ತದ್ವಿರುದ್ಧವಾಗಿದೆ. ಕಳೆದ ವರ್ಷ ತುಂಬಿ ತುಳುಕುತ್ತಿದ್ದ ಡ್ಯಾಂ ಈ ವರ್ಷ ಖಾಲಿಯಾಗುವ ಸ್ಥಿತಿಗೆ ತಲುಪಿದೆ. ಬೀದರ್ ಜಿಲ್ಲೆಯು ಪ್ರತಿ ವರ್ಷ ಕುಡಿಯುವ ನೀರಿಗಾಗಿ ಸುಮಾರು 1.5 ಟಿಎಂಸಿ ನೀರನ್ನು ಬಳಸುತ್ತದೆ. ಇದಲ್ಲದೆ, ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಆಗಿ ಕನಿಷ್ಠ 1 ರಿಂದ 1.5 ಟಿಎಂಸಿ ನೀರು ಇರುತ್ತದೆ. ಈ ನೀರನ್ನು ಯಾವುದೇ ಕಾರಣಕ್ಕೂ ಬಳಸಲು ಸಾಧ್ಯವಿಲ್ಲ, ಏಕೆಂದರೆ ಅದು ಜಲಚರಗಳು, ಪಕ್ಷಿಗಳು ಮತ್ತು ಪರಿಸರ ವ್ಯವಸ್ಥೆಗೆ ಅನಿವಾರ್ಯ. ಹೀಗಾಗಿ ಕಾರಂಜಾ ಜಲಾಶಯದಲ್ಲಿನ ನೀರಿನ ಮಟ್ಟ ಕುಸಿತವು ಬೀದರ್ ಜಿಲ್ಲೆಯ ಜನರಿಗೆ ಮಾತ್ರವಲ್ಲದೆ, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೂ ತೀವ್ರ ಆತಂಕವನ್ನು ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ನೀರಿನ ನಿರ್ವಹಣೆ ಮತ್ತು ಪರ್ಯಾಯ ವ್ಯವಸ್ಥೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವ ತುರ್ತು ಅನಿವಾರ್ಯತೆ ಎದುರಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.