
ಬೆಂಗಳೂರು (ಫೆಬ್ರವರಿ.10): ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ (Biklu Shiva Murder Case) ಸಂಬಂಧಿಸಿದಂತೆ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ( BJP MLA Byrathi Basavaraj) ಜಾಮೀನು ಅರ್ಜಿ ವಜಾಗೊಂಡಿದೆ. ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯಾಗಿರುವ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಇಂದು (ಫೆಬ್ರವರಿ 10) ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದ್ದು, ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಬೈರತಿ ಬಸವರಾಜ್‌ಗೆ ಬಂಧನದ ಭೀತಿ ಎದುರಾಗಿದೆ. ಇದೀಗ ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು.
ಸದ್ಯ, ಅವರು ವಿದೇಶಕ್ಕೆ ಪರಾರಿಯಾಗುವ ಶಂಕೆ ಹಿನ್ನೆಲೆಯಲ್ಲಿ ಅವರು ವಿರುದ್ಧ ‘ಲುಕ್‌ಔಟ್’ ನೋಟಿಸ್ ಜಾರಿಯಲ್ಲಿದೆ. ರಾಜ್ಯದ ಸಿಐಡಿ ಪೊಲೀಸರು ಹೊರರಾಜ್ಯಗಳ ಪೊಲೀಸರ ಜತೆಗೂ ಸಂಪರ್ಕ ಸಾಧಿಸಿದ್ದು, ಅವರ ಬಂಧನಕ್ಕಾಗಿ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಿಂದ ಯಾವುದೇ ಕ್ಷಣದಲ್ಲಿ ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ.
ಕಳೆದ ವರ್ಷ ಜುಲೈ 15ರಂದು ಬೆಂಗಳೂರಿನ ಹಲಸೂರಿನಲ್ಲಿ ನಡೆದ ರೌಡಿ ಬಿಕ್ಲುಶಿವನ ಕೊಲೆ ಪ್ರಕರಣದ ಪ್ರಮುಖ ಆರೋಪಿ ರೌಡಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಶಾಸಕ ಬಸವರಾಜ್‌ಗೆ ನೇರ ಸಂಪರ್ಕವಿದೆ. ಬಿಕ್ಲು ಶಿವನ ಹತ್ಯೆಗೂ ಮುನ್ನ ಹತ್ತಾರು ಬಾರಿ ಭೇಟಿ ಮಾಡಿದ್ದಾರೆ. ಶಾಸಕರ ವಿರುದ್ಧ ಕೆಲವು ಪ್ರಮುಖ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದೆ ಎಂದು ಸಿಐಡಿ ಮೂಲಗಳು ಹೇಳಿವೆ.
Published On - 2:23 pm, Tue, 10 February 26