ಬೆಂಗಳುರು, (ಜುಲೈ 02): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಗೊಂದಲದ ಗೂಡಾಗಿದೆ. ಒಂದು ಕಡೆ 50 : 50 ಅನುಪಾತದಡಿಯ ಮಂಜೂರಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದರೆ ಮತ್ತೊಂದು ಕಡೆ ಖುದ್ದು ಸಿಎಂ ಸಿದ್ದರಾಮಯ್ಯ ಪತ್ನಿ 50 : 50 ಅನುಪಾತದಡಿಯಲ್ಲಿ ಪಡೆದಿರುವ ಬದಲಿ ಜಾಗದ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಈ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇನ್ನು ಈ ಬಗ್ಗೆ ವಿಪಕ್ಷ ಬಿಜೆಪಿ ಸಹ ದಾಖಲೆ ಕಲೆಹಾಕಿತ್ತಿದ್ದು, ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲ್ಯಾನ್ ಮಾಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಸಿಟಿ ರವಿ, ಮುಡಾ ಹಗರಣದ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಅಗೆದಷ್ಟು, ಬಗೆದಷ್ಟು ಹೊರಗೆ ಬರುತ್ತಿದೆ. ನನ್ನನ್ನೂ ಮಿರಿಸಿದ ಹಗರಣ ಮಾಡುತ್ತಿದ್ದಾರೆ ಎಂದು ಚಾರ್ಲ್ಸ್ ಶೋಭರಾಜ್‌ಗೂ ಅನ್ನಿಸುತ್ತಿದೆಯಂತೆ. ಅಧಿವೇಶನದಲ್ಲಿ ಎಲ್ಲಾ ದಾಖಲೆ ಇಟ್ಟು ಚರ್ಚೆ ಮಾಡುತ್ತೇವೆ. ವಿಧಾನಮಂಡಲ ಅಧಿವೇಶನದಲ್ಲಿ ಎಲ್ಲರ ಜಾತಕ ಬಿಚ್ಚಿಡುತ್ತೇವೆ ಎಂದರು.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಪತ್ನಿ ರಕ್ಷಣೆಗೆ ನಿಂತ್ರಾ ಸಚಿವ ಬೈರತಿ ಸುರೇಶ್? ಆರ್ಟಿಐ ಕಾರ್ಯಕರ್ತ ಗಂಭೀರ ಆರೋಪ
ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಒಂದು ವರ್ಷದಲ್ಲೇ ಹಗರಣ ಮೇಲೆ ಹಗರಣ ಬಯಲಿಗೆ ಬರುತ್ತಿದೆ. ವಾಲ್ಮೀಕಿ ನಿಗಮ ಹಗರಣ ಬೆನ್ನಲ್ಲೇ ಮುಡಾದಲ್ಲಿ ಹಗರಣ ಬಯಲಿಗೆ. ಸಿಎಂ ಉಸ್ತುವಾರಿ ಜಿಲ್ಲೆಯಲ್ಲಿ ಹಗರಣ ಆಗಿದ್ರೂ ಸುಮ್ಮನಿದ್ದಾರೆ. ಒಂದು ರೀತಿಯಲ್ಲಿ ಅವರ ಮನೆ ಬಾಗಿಲಲ್ಲೇ ನಡೆದಿರುವ ಹಗರಣ. ಸಿಎಂ ಕುಟುಂಬ ಸದಸ್ಯರಿಗೆ ಸೈಟ್ ಹಂಚಿಕೆ ಆಗಿದ್ದು ವರದಿಯಲ್ಲಿ ಸ್ಪಷ್ಟವಾಗಿದೆ. ರಾಜ್ಯದಲ್ಲಿರೋದು ಶೂನ್ಯ ಅಭಿವೃದ್ಧಿ ಸರ್ಕಾರ. ಅಧಿವೇಶನದಲ್ಲಿ ಹಗರಣದ ಬಗ್ಗೆ ಪ್ರಸ್ತಾಪಿಸ್ತೇವೆ. ಆರೋಪ ಬಂತಂದ್ರೆ ಕೇವಲ ವರ್ಗಾವಣೆ ಮಾಡೋದು ಅಷ್ಟೇ ಆಗುತ್ತಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ. ನಾಳೆ ಪ್ರತಿಭಟನೆ ಮಾಡಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.
ಒಟ್ಟಾರೆ ಮುಡಾದ ಫಿಫ್ಟಿ ಫಿಫ್ಟಿ ಅನುಪಾತದಲ್ಲಿ ಸಿದ್ದರಾಮಯ್ಯನವರ ಕುಟುಂಬಕ್ಕೂ ಹಂಚಿಕೆಯಾಗಿದ್ದು, ಇದನ್ನು ವಿರೋಧ ಪಕ್ಷ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಈ ಬಗ್ಗೆ ಎಲ್ಲಾ ದಾಖಲೆಗಳನ್ನು ಕಲೆಹಾಕಿ ಜುಲೈ 15ರಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲ್ಯಾನ್ ಮಾಡಿಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ