ಮುಡಾ ಹಗರಣ: ಸಿಎಂ ಪತ್ನಿ ರಕ್ಷಣೆಗೆ ನಿಂತ್ರಾ ಸಚಿವ ಬೈರತಿ ಸುರೇಶ್? ಆರ್ಟಿಐ ಕಾರ್ಯಕರ್ತ ಗಂಭೀರ ಆರೋಪ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟುಗಳ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದಿದೆ. ಅಲ್ಲದೆ ಸಿಎಂ ಪತ್ನಿಗೂ ಮುಡಾದಲ್ಲಿ ಸೈಟ್ ಹಂಚಿಕೆಯಾಗಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪತ್ನಿಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಗಂಭೀರ ಆರೋಪಿಸಿದ್ದಾರೆ.
ಮೈಸೂರು, (ಜುಲೈ 02): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟುಗಳ ಹಂಚಿಕೆಯಲ್ಲಿ ಭಾರೀ ಹಗರಣ ನಡೆದಿರುವ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಆಯುಕ್ತ ಸೇರಿದಂತೆ ಕೆಲ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ನೀಡಿದೆ. ಅಲ್ಲದೇ 2 ವರ್ಷದದಿಂದ ಆಗಿರುವ 50 : 50 ಅನುಪಾತದ ಮಂಜೂರಾತಿ ಅಮಾನತು ಮಾಡಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೂಚಿಸಿದ್ದಾರೆ. ಆದ್ರೆ, ಸಚಿವರ ನಡೆಗೆ ಆರ್ಟಿಐ ಕಾರ್ಯಕರ್ತ ಗಂಗರಾಜು ಆಕ್ಷೇಪಿಸಿದ್ದು, ಇದರಲ್ಲಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
2 ವರ್ಷದದಿಂದ ಆಗಿರುವ 50:50 ಅನುಪಾತದ ಮಂಜೂರಾತಿ ಅಮಾನತು ವಿಚಾರದ ಬಗ್ಗೆ ಮಾತನಾಡಿರುವ ಆರ್ಟಿಐ ಕಾರ್ಯಕರ್ತ ಗಂಗರಾಜು, ಪಾರ್ವತಿ ಅವರಿಗೂ ಇದೇ ಅನುಪಾತದಡಿ ಬದಲಿ ಜಾಗ ನೀಡಲಾಗಿದೆ. ಆದ್ರೆ, ಅವರನ್ನು ರಕ್ಷಣೆ ಮಾಡಲು ಕೇವಲ 2 ವರ್ಷದ ಮಂಜೂರಾತಿ ಅಮಾನತ್ತಿನಡಲು ಸಚಿವ ಭೈರತಿ ಸುರೇಶ್ ಸೂಚಿಸಿದ್ದಾರೆ. ಅಂದರೆ 2022 – 23ನೇ ಸಾಲಿನ ಮಂಜೂರಾತಿ ಅನ್ವಯವಾಗುತ್ತೆ. 2021ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೂ ಇದೇ ಅನುಪಾತದಡಿ ಬದಲಿ ಜಾಗ ನೀಡಲಾಗಿದೆ. ಅದನ್ನು ರಕ್ಷಣೆ ಮಾಡಲು ಕೇವಲ 2 ವರ್ಷದ ಮಂಜೂರಾತಿ ಅಮಾನತು ಮಾಡಲಾಗಿದೆ. ಸಂಪೂರ್ಣ 50 : 50 ಅನುಪಾತದಡಿಯ ಮಂಜೂರಾತಿ ಅಮಾನತು ಮಾಡಬೇಕು ಆಗ್ರಹಿಸಿದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ನೀಡಿರುವ ಜಾಗವನ್ನು ವಾಪಸ್ಸು ನೀಡಬೇಕು. ಕಡಿಮೆ ಮೌಲ್ಯದ ಜಾಗವನ್ನು ನೀಡಿ ಹೆಚ್ಚಿನ ಮೌಲ್ಯದ ಜಾಗವನ್ನು ಬದಲಿಗೆ ಪಡೆದಿದ್ದಾರೆ. ಇದರಿಂದ ಮುಡಾಗೆ ಆರ್ಥಿಕ ನಷ್ಟವಾಗಿದೆ ಎಂದು ಟಿವಿ9 ಮೂಲಕ ಆರ್ ಟಿ ಐ ಕಾರ್ಯಕರ್ತ ಗಂಗರಾಜು ಒತ್ತಾಯಿಸಿದ್ದಾರೆ.
1998ರಲ್ಲಿ ವಶಪಡಿಸಿಕೊಂಡ ಭೂಮಿಗೆ 2021ರಲ್ಲಿ ಬದಲಿ ಭೂಮಿ ನೀಡಿದ್ದಾರೆ. 50 : 50 ಅನುಪಾತದ ಅನ್ವಯ ಬದಲಿ ನಿವೇಶನ ನೀಡಲಾಗಿದೆ. 50 : 50 ಪಾಲಿಸಿ ಆರಂಭವಾಗಿದ್ದು 2020ರಲ್ಲಿ 50 : 50 ಅನ್ವಯ ಮುಡಾ ವಶಪಡಿಸಿಕೊಂಡ ಜಾಗವನ್ನು ಮುಡಾ ಅಭಿವೃದ್ಧಿಪಡಿಸಬೇಕು. ಅಭಿವೃದ್ದಿ ಪಡಿಸಿದ ಜಾಗ ನಾಲ್ಕು ಭಾಗ ಮಾಡಲಾಗುತ್ತದೆ. ಒಂದು ಭಾಗ ಭೂ ಮಾಲೀಕರಿಗೆ ಇನ್ನು ಎರಡು ಭಾಗ ರಸ್ತೆ ಉದ್ಯಾನವನ ಸೇರಿ ಇತರ ಬಳಕೆಗೆ. ಮತ್ತೊಂದು ಭಾಗ ಮುಡಾಗೆ ಸೇರುತ್ತದೆ. 50 : 50 ವಿಚಾರದ ಬಗ್ಗೆ ನಮ್ಮ ವಿರೋಧವಿದೆ. ಇದರಿಂದ ಮುಡಾಗೆ ನಷ್ಟವಾಗುತ್ತದೆ. ಇದನ್ನು ರದ್ದುಪಡಿಸಲು 2020ರಿಂದ ಕರುಣಾಕರ್ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡುತ್ತಿದ್ದೇವೆ. 50 : 50 ನೆಪ ಮಾಡಿಕೊಂಡಿ ಹಳೆ ಭೂಮಿ ವಶಪಡಿಸಿಕೊಂಡಿರುವ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತಿದೆ. ಕಡಿಮೆ ಮೌಲ್ಯದ ಭೂಮಿ ವಶಪಡಿಸಿಕೊಂಡು ಹೆಚ್ಚಿನ ಮೌಲ್ಯದ ಭೂಮಿ ನೀಡಲಾಗುತ್ತಿದೆ. ಉಳ್ಳವರಿಗೆ ಒಂದು ಕಾನೂನು ಬಡವರಿಗೆ ರೈತರಿಗೆ ಒಂದು ಕಾನೂನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಪತ್ನಿಗೆ 38,284 ಚದರ ಅಡಿ ಜಾಗ ಹಂಚಿಕೆ
1998ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಕೊಟ್ಟಿದ್ದಾರೆ ಇದು ಈಗ ಚರ್ಚೆಗೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Tue, 2 July 24