ಬೆಂಗಳೂರು, ಜುಲೈ 12: ಸಿಎಂ ಸಿದ್ದರಾಮಯ್ಯ (Siddaramaiah) ಕುಟುಂಬ ಭಾಗಿಯಾಗಿದ್ದಾರೆ ಎನ್ನಲಾದ ಮುಡಾ ಸೈಟ್ ಪ್ರಕರಣದ ಬಗ್ಗೆ ವಿಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು, ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಕ್ಕೆ ಭರ್ಜರಿ ಯೋಜನೆ ರೂಪಿಸಿವೆ. ಹೀಗಾಗಿ ಇಂದು ಬಿಜೆಪಿ-ಜೆಡಿಎಸ್ (bjp-jds) ಸಮನ್ವಯ ಸಭೆ ಮಾಡಲಾಗಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಜಂಟಿ ಹೋರಾಟದ ಬಗ್ಗೆ ವಿಪಕ್ಷ ನಾಯಕರು ಚರ್ಚೆ ಮಾಡಿದ್ದಾರೆ.
ಪ್ರಧಾನವಾಗಿ ಅಧಿವೇಶನದಲ್ಲಿ ಮುಡಾ ಸೈಟ್ ಪ್ರಕರಣ ಮತ್ತು ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯದವರೆಗೂ ಮುಂದುವರಿಸಲು ನಿರ್ಧಾರ ಮಾಡಲಾಗಿದೆ. ಉಳಿದಂತೆ ಬೆಲೆ ಏರಿಕೆ, ಡೆಂಗ್ಯೂ, ಕಾನೂನು ಸುವ್ಯವಸ್ಥೆ ಮತ್ತಿತರ ವಿಷಯ ಆಯಾ ಸನ್ನಿವೇಶಕ್ಕೆ ತಕ್ಕಂತೆ ಪ್ರಸ್ತಾಪ ಮಾಡಲಿದೆ.
ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ನೀವೇ ಅರೆಸ್ಟ್ ಆಗಬಹುದು, ಸಿದ್ದರಾಮಯ್ಯ ಬಗ್ಗೆ ಜೋಶಿ ಅಚ್ಚರಿ ಹೇಳಿಕೆ
ಸದನದಲ್ಲಿ ಆರಂಭದಲ್ಲೇ ಪ್ರತಿಭಟನೆ ಮಾಡುವುದು ಬೇಡ. ವಿಪಕ್ಷವಾಗಿ ಪ್ರಸ್ತಾಪಿಸಬೇಕಿರುವ ಎಲ್ಲ ವಿಷಯ ಪ್ರಸ್ತಾಪಿಸಿದ ಬಳಿಕವೇ ಕೊನೆಯಲ್ಲಿ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ. ಕಳೆದ ಬಾರಿಯಂತೆ ಎಲ್ಲದಕ್ಕೂ ಮೊದಲೇ ಧರಣಿ ಬೇಡ ಎಂದು ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಲಹೆ ನೀಡಿದ್ದಾರೆ. ಸದನದಲ್ಲಿ ಮುಡಾ ಸೈಟ್ ವಿಚಾರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಭೆ ಬಳಿಕ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಅಧಿವೇಶನದಲ್ಲಿ ಮೊದಲ ಬಾರಿಗೆ ಎನ್ಡಿಎ ಆಗಿ ಜಂಟಿಯಾಗಿ ಸರ್ಕಾರದ ವಿರುದ್ಧ ಬಿಸಿ ಮುಟ್ಟುವ ಕೆಲಸ ಮಾಡಬೇಕಿದೆ. ಎಲ್ಲಾ ವಿಚಾರಗಳನ್ನು ತಾರ್ಕಿತ ಅಂತ್ಯಕ್ಕೆ ಕೊಂಡೊಯ್ಯಲು ಶಕ್ತಿ ಸಿಕ್ಕಿದೆ. ಮುಡಾ ಅಕ್ರಮದಲ್ಲಿ ಸಿಎಂ ಭಾಗಿಯಾಗಿರುವುದರಿಂದ ದೇಶದ ವಿಚಾರವಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರವನ್ನು ಸದನದಲ್ಲಿ ಬಟಾ ಬಯಲು ಮಾಡುತ್ತೇವೆ. ಸಿಎಂ 10 ವರ್ಷ ಜಮೀನೇ ನೋಡಿಲ್ಲ ಅನ್ನೋದು ಸಂಶಯಾಸ್ಪದವಾಗಿದೆ ಎಂದಿದ್ದಾರೆ.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯಿಂದಲೇ ಕಾನೂನು ಬಾಹಿರ ಚಟುವಟಿಕೆ ಆಗಿದೆ. 62 ಕೋಟಿ ರೂ. ಪರಿಹಾರ ಯಾವ ಆಧಾರದಲ್ಲಿ ಕೇಳಿದರು? ಭೂಮಿ ಕಳೆದುಕೊಂಡವರಿಗೆ ಪರಿಹಾರವನ್ನ ಕೊಟ್ಟಿದ್ದಾರಾ? ಇವರ ಸರ್ಕಾರ ಎಷ್ಟು ಜನರಿಗೆ ಪರಿಹಾರವನ್ನ ಕೊಟ್ಟಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ವಾಲ್ಮೀಕಿ ಹಗರಣ: ಕಾಂಗ್ರೆಸ್ ಶಾಸಕ ನಾಗೇಂದ್ರನನ್ನು ಅಧಿಕೃತವಾಗಿ ಬಂಧಿಸಿದ ಇಡಿ
ಅರ್ಕಾವತಿ ರೀಡೂ ಮಾಡಿದ ಆಧಾರದಲ್ಲಿ 62 ಕೋಟಿ ರೂ. ಕೇಳಿರಬೇಕು ಅಂತಾ ನನ್ನ ಭಾವನೆ. ಸರ್ಕಾರದ ನಡವಳಿಕೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ತೀರ್ಮಾನಿಸಿದ್ದೇವೆ. ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕುಸಿತ ಅಂತಾ ಅರ್ಥಿಕ ತಜ್ಞ ರಾಯರೆಡ್ಡಿ ಹೇಳಿದ್ದಾರೆ. ಅಶೋಕ್ ನೇತೃತ್ವದಲ್ಲಿ ನಮ್ಮ ಎಲ್ಲಾ ಶಾಸಕರು ಚರ್ಚೆ ಮಾಡಿದ್ದೇವೆ. ಎರಡೂ ಸದನದಲ್ಲಿ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಶಾಸಕ ಡಾ. ಅಶ್ವಥ್ ನಾರಾಯಣ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಸುರೇಶ್ ಬಾಬು
ಶಾರದಾ ಪೂರ್ಯಾ ನಾಯ್ಕ್, ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್, ಕೆ.ಎಸ್. ನವೀನ್ ಸೇರಿ ಹಲವರು ಸಮನ್ವಯ ಸಭೆಯಲ್ಲಿ ಭಾಗಿ ಆಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.