ಬೆಂಗಳೂರು, ಜುಲೈ 25: ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಕಳೆದ ಒಂದು ವಾರದಿಂದ ಹಗರಣಗಳದ್ದೇ ಸದ್ದು. ಮುಡಾ ಸೈಟು ಹಂಚಿಕೆ, ವಾಲ್ಮೀಕಿ ನಿಗಮದಲ್ಲಾಗಿರುವ ಬಹುಕೋಟಿ ಹಗರಣದ ವಿರುದ್ಧ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳ ಹೋರಾಟ ತೀವ್ರಗೊಂಡಿದೆ. ಇಷ್ಟು ದಿನ ಸದನದ ಬಾವಿಗಿಳಿದು ಹೋರಾಟ ಮಾಡುತ್ತಿದ್ದ ಬಿಜೆಪಿ, ಜೆಡಿಎಸ್ ಸದಸ್ಯರು ಬುಧವಾರದಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಅತ್ತ ದಲಿತರ ಹಣವೂ ಲೂಟಿ, ಇತ್ತ ಮುಡಾವೂ ಲೂಟಿ, ಹಗರಣಗಳ ಸರದಾರ, ಕಾಂಗ್ರೆಸ್ ಸರ್ಕಾರ ಅಂತಾ ಭಿತ್ತಿಪತ್ರ ಹಿಡಿದುಕೊಂಡು ಧರಣಿ ಆರಂಭಿಸಿದ ಬಿಜೆಪಿ, ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.
ಧರಣಿ ಮುಂದುವರಿಸಿದ ಬಿಜೆಪಿ, ಜೆಡಿಎಸ್ ಸದಸ್ಯರು ಭಜನೆ, ಹಾಡಿನ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದರು. ಕಂಜಿರಾ, ತಾಳ ಬಡಿಯುತ್ತಾ ಭಜನೆ ಜೊತೆಗೆ ಸಿನಿಮಾದ ಹಾಡುಗಳನ್ನೂ ಹಾಡಿದ್ದಾರೆ. ಬಿವೈ ವಿಜಯೇಂದ್ರ, ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಬಿಜೆಪಿ ಸದಸ್ಯರು ವಿಧಾನಸೌಧದ ಕಾರಿಡಾರ್ನಲ್ಲಿ ಭಜನೆ ಮಾಡುತ್ತಾ ಹೆಜ್ಜೆ ಹಾಕಿದರು.
ವಿಧಾನಪರಿಷತ್ಗೆ ತೆರಳಿದ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರಿಷತ್ ಸದಸ್ಯರ ಜೊತೆಗೆ ಮಾತುಕತೆ ಮಾಡುತ್ತಾ, ಗಾನಗೋಷ್ಠಿಗೆ ದನಿಗೂಡಿಸಿದರು.
ಇದೇ ವೇಳೆ ಜೆಡಿಎಸ್ ಸದಸ್ಯ ಬೋಜೇಗೌಡ ‘ಅನ್ಯಾಯಕಾರಿ ಬ್ರಹ್ಮ’ ಅಂತಾ ಹಾಡುವುದರ ಜೊತೆಗೆ ನಾಟಕದ ಡೈಲಾಗ್ ಹೇಳಿ ಇತರ ಸದಸ್ಯರನ್ನು ರಂಜಿಸಿದರು.
ಇದೇ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್ ಭೇಟಿ ನೀಡಿ ವಿಪಕ್ಷ ಶಾಸಕರ ಯೋಗಕ್ಷೇಮ ವಿಚಾರಿಸಿದರು. ಆರ್. ಅಶೊಕ್ ಜೊತೆಗೂ ಮಾತುಕತೆ ನಡೆಸಿದರು.
ವಿಪಕ್ಷ ಸದಸ್ಯರ ಅಹೋರಾತ್ರಿ ಧರಣಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯುಟಿ ಖಾದರ್, ಇವತ್ತು ಪ್ರತಿಪಕ್ಷದ ಮಿತ್ರರ ಜೊತೆ ಚರ್ಚೆ ಮಾಡಿದೆವು. ಅವರಿಗೆ ಬೇಕಾದ ಸವಲತ್ತಿಗೆ ಅವಕಾಶ ನೀಡಿದ್ದೇವೆ. ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟರೆ ಕೆಟ್ಟ ಸಂಪ್ರದಾಯ ಆರಂಭವಾಗುತ್ತದೆ ಅಂತಾ ಹೇಳಿದ್ದಾರೆ.
ಅಹೋರಾತ್ರಿ ಧರಣಿಯಲ್ಲಿ ಭಾಗಿಯಾದ ವಿಪಕ್ಷ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ ಶಾಸಕರೆಲ್ಲಾ ಆಯಕಟ್ಟಿನ ಜಾಗ ನೋಡಿಕೊಂಡು ಬೆಡ್ ಹಾಸಿ ನಿದ್ದೆಗೆ ಜಾರಿದರು.
ಇದಕ್ಕೂ ಮುನ್ನ ಬುಧವಾರ ಇಡೀ ದಿನ ಮುಡಾ ಸೈಟ್ ಹಂಚಿಕೆ ಹಗರಣದ ಬಗ್ಗೆಯೇ ಬಿಸಿಬಿಸಿ ಚರ್ಚೆಯಾಗಿತ್ತು. ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಮುಡಾ ಚರ್ಚೆಗೆ ಅವಕಾಶ ಕೊಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು. ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಚರ್ಚೆ ಮಾಡವಂಥದ್ದು ಏನಿದೆ ಎಂದು ಸ್ಪೀಕರ್ ಹೇಳಿದಾಗ ದೊಡ್ಡ ಕದನವೇ ನಡೆದಿತ್ತು.
ಇದನ್ನೂ ಓದಿ: ಸದನದಲ್ಲಿ ಬಿಜೆಪಿ ಅಹೋರಾತ್ರಿ ಧರಣಿ; ಅಶೋಕ ವಾದ್ಯ, ಸಿಟಿ ರವಿ ತಾಳಕ್ಕೆ ಹೆಜ್ಜೆ ಹಾಕಿದ ಶಾಸಕ ಪ್ರಭು ಚವ್ಹಾಣ್
ಗದ್ದಲದ ಮಧ್ಯೆ 6 ವಿಧೇಯಕಗಳ ಮಂಡನೆ ಮಾಡಲಾಯಿತು. ಇಂದು ಕೂಡಾ ಹಗರಣಗಳ ವಿಚಾರವಾಗಿ ಬಿಜೆಪಿ, ಜೆಡಿಎಸ್ ಧರಣಿ ಮುಂದುವರಿಸಲಿವೆ. ಈ ನಡುವೆ ಗ್ರೇಟರ್ ಬೆಂಗಳೂರು ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲು ಸರ್ಕಾರ ಚಿಂತನೆ ಮಾಡಿದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 am, Thu, 25 July 24