ಎಂಪಿಯಾಗೋಕೆ ಬಂದಿದ್ದಾ? ಬೆಂಕಿ ಹಚ್ಚೋಕೆ ಬಂದಿದ್ದಾ? ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಶಾಸಕ ಆಕ್ರೋಶ

ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆಯ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿರುವ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, “ಶೋಭಾ ಕರಂದ್ಲಾಜೆ ಎಂಪಿಯಾಗೋಕೆ ಬಂದಿದ್ದಾ? ಬೆಂಗಳೂರಿಗೆ ಬೆಂಕಿ ಹಚ್ಚೋಕೆ ಬಂದಿದ್ದಾ?” ಎಂದು ಪ್ರಶ್ನಿಸಿದ್ದಾರೆ.

ಎಂಪಿಯಾಗೋಕೆ ಬಂದಿದ್ದಾ? ಬೆಂಕಿ ಹಚ್ಚೋಕೆ ಬಂದಿದ್ದಾ? ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಶಾಸಕ ಆಕ್ರೋಶ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Mar 21, 2024 | 7:40 PM

ಬೆಂಗಳೂರು, (ಮಾರ್ಚ್ 21): ನಗರದ ನಗರ್ತಪೇಟೆ ಘಟನೆಯ ವೇಳೆ ‘ತಮಿಳುನಾಡಿನಿಂದ ಬಂದವರು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾರೆ’ ಎಂಬ ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ(shobha karandlaje )ಹೇಳಿಕೆ ವಿರುದ್ಧ ದೂರು ದಾಖಲಾಗಿದೆ. ಇನ್ನು ಈ ಹೇಳಿಕೆಯನ್ನು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್  (st Somashekhar) ಸಹ ಖಂಡಿಸಿದ್ದು, ಶೋಭಾ ಕರಂದ್ಲಾಜೆ ಎಂಪಿಯಾಗೋಕೆ ಬಂದಿದ್ದಾ? ಬೆಂಗಳೂರಿಗೆ ಬೆಂಕಿ ಹಚ್ಚೋಕೆ ಬಂದಿದ್ದಾ ಎಂದು ಕಿಡಿಕಾರಿದ್ದಾರೆ.

ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಎಸ್ ಟಿ ಸೋಮಶೇಖರ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಇಂದು (ಮಾರ್ಚ್ 21) ಹಿರಿಯ ಬಿಜೆಪಿಯ ನಾಯಕ ಬಿಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಗೆ ನನ್ನ ಕ್ಷೇತ್ರ ಬರುತ್ತದೆ. ಡಿ.ಬಿ.ಚಂದ್ರೇಗೌಡ ಸಂಸದರಾಗಿದ್ದರು, ಡಿವಿ ಸದಾನಂದಗೌಡ ಅವರು 10 ವರ್ಷ ಸಂಸದರಾಗಿದ್ದರು. ಒಂದೇ ಒಂದು ಸಣ್ಣ ವ್ಯತ್ಯಾಸವೂ ಆಗಿರಲಿಲ್ಲ. ಆದ್ರೆ, ಇದೀಗ ಯಶವಂತಪುರ ಕ್ಷೇತ್ರಕ್ಕೆ ಹೋಗುವುದಕ್ಕೆ ನಾನೇ ಭಯಪಡುತ್ತಿದ್ದೇನೆ. ಯಾರು ಏನು ಮಾತನಾಡ್ತಾರೋ, ಎತ್ತಿ ಕಟ್ಟುತ್ತಾರೆಂಬ ಭಯವಿದೆ ಎಂದು ಪರೋಕ್ಷವಾಗಿ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದರು.

ಇವತ್ತು ಬೆಂಕಿ ಉಂಡೆಯೂ ಮಾತನಾಡ್ತಿದೆ ನನಗೆ ನನ್ನ ರಕ್ಷಣೆಯೇ ಮುಖ್ಯವಾಗಿದೆ. ಪೊಲೀಸ್ ಆಯುಕ್ತರು ಕೇಳಬೇಕಿದೆ. ಇವರು ಬೆಂಕಿ‌ಹಚ್ಚೊಕೆ ಬಂದಿದ್ದಾರಾ? ಇಲ್ಲ ಬಾಂಬ್ ಇಡೋಕೆ ಬಂದಿದ್ದಾರಾ ಗೊತ್ತಿಲ್ಲ. 10 ವರ್ಷಗಳಿಂದ ಶಾಸಕನಾಗಿ, ಜನರ ನಡುವೆ ಕೆಲಸ ಮಾಡುತ್ತಿದ್ದೇನೆ. ಈ ಎಲ್ಲ ಅವಧಿಯಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ, ಆದರೆ ಈ ಸಲ ಟಿಕೆಟ್ ಗಿಟ್ಟಿಸಿರುವ ಶೋಭಾ ಕರಂದ್ಲಾಜೆ, ಗೆಲ್ಲುವ ಮೊದಲೇ ಅಸಂಬದ್ಧ ಮತ್ತು ಮತೀಯ ಗಲಾಟೆಗಳಿಗೆ ಉತ್ತೇಜನ ನೀಡುವ ಹೇಳಿಕೆ ನೀಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

“ಬೆಂಗಳೂರು ಒಂದು ಶಾಂತಿಪ್ರಿಯ ನಗರ ಎನ್ನುವುದನ್ನು ಶೋಭಾ ಕರಂದ್ಲಾಜೆ ಮನಗಾಣಬೇಕು. ಅವರ ಹೇಳಿಕೆಗಳಿಂದಾಗಿ ಖುದ್ದು ನನಗೇ ನನ್ನ ಕ್ಷೇತ್ರದಲ್ಲಿ ವಾರದಿಂದೀಚೆಗೆ ಓಡಾಡಲು ಭಯವಾಗುತ್ತಿದೆ. ಯಾವ ಸಮಯದಲ್ಲಿ ಏನು ದ್ವೇಷ ಭಾಷಣ ಮಾಡುತ್ತಾರೋ, ಯಾವ ಸಮಯದಲ್ಲಿ ನನ್ನ ವಿರುದ್ಧ ಮಾತನಾಡುತ್ತಾರೋ, ಏನು ನಡೆಯಲಿದೆಯೋ ಎನ್ನುವ ಆತಂಕ ಶುರುವಾಗಿದೆ” ಎಂದು ಎಸ್‌ ಟಿ ಸೋಮಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.