ಹೃದಯವಂತ ಸಂಸದ! ಆಂಜಿಯೋಪ್ಲ್ಯಾಸ್ಟಿ ಅಳವಡಿಸಿ ರೋಗಿಗೆ ಮರುಜೀವ ನೀಡಿದ ಡಾ. ಸಿಎನ್ ಮಂಜುನಾಥ್
ಬೆಂಗಳೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ ಸಿಎನ್ ಮಂಜುನಾಥ್ ಅದೆಷ್ಟೋ ಮಂದಿಯ ಜೀವ ಉಳಿಸಿದ್ದು ರಾಜ್ಯಕ್ಕೇ ತಿಳಿದಿರುವ ವಿಷಯ. ನಂತರ ಬಿಜೆಪಿಯಿಂದ ಚುನಾವಣೆ ಸ್ಪರ್ಧಿಸಿ ಸಂಸದರಾದ ಅವರು, ರಾಜಕಾರಣಿಯಾದ ಮೇಲೂ ವೈದ್ಯಕೀಯ ಸೇವೆ ಮರೆತಿಲ್ಲ. ಇದೀಗ ವಾರದಲ್ಲಿ 2 ದಿನ 3 ಗಂಟೆ ಉಚಿತ ಸೇವೆ ನೀಡುತ್ತಿರುವ ಅವರು, ರೋಗಿಯೊಬ್ಬರಿಗೆ ಆಂಜಿಯೋಪ್ಲ್ಯಾಸ್ಟಿ ಅಳವಡಿಕೆ ಮಾಡಿ ಜೀವ ಉಳಿಸಿದ್ದಾರೆ.
ಬೆಂಗಳೂರು, ಆಗಸ್ಟ್ 23: ಹೃದಯ ರಕ್ತನಾಳ ಶೇ 90ರಷ್ಟು ಬ್ಲಾಕ್ ಆಗಿದ್ದ ಮತ್ತು ಕಿಡ್ನಿ ವೈಫಲ್ಯ ಹೊಂದಿದ್ದ ವ್ಯಕ್ತಿಗೆ ಬಿಜೆಪಿ ಸಂಸದ ಡಾ. ಸಿಎನ್ ಮಂಜುನಾಥ್ ಯಶಸ್ವಿಯಾಗಿ ಆಂಜಿಯೋಪ್ಲ್ಯಾಸ್ಟಿ ಅಳವಡಿಸಿ ಮರುಜೀವ ನೀಡಿದ್ದಾರೆ. ಜಯನಗರದ ಬೆಂಗಳೂರು ಹಾಸ್ಪಿಟಲ್ನಲ್ಲಿ ಗುರುವಾರ ಯಶಸ್ವಿ ಆಂಜಿಯೋಪ್ಲ್ಯಾಸ್ಟಿ ಅಳವಡಿಕೆ ನೆರವೇರಿದೆ. ಆರ್ಬಿಟಲ್ ಅಥೆರೆಕ್ಟಮಿ ಸಾಧನ ಬಳಸಿಕೊಂಡು ಅವರು ಆಂಜಿಯೋಪ್ಲಾಸ್ಟಿ ಅಳವಡಿಸಿದ್ದಾರೆ.
ರಾಯಚೂರು ಮೂಲದ 54 ವರ್ಷ ವಯಸ್ಸಿನ ರೋಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಜತೆಗೆ, ಅವರ ಹೃದಯದ ರಕ್ತನಾಳ ಶೇ 90 ಬ್ಲಾಕ್ ಆಗಿತ್ತು. ಅವರಿಗೆ ಕಾಂಪ್ಲೆಕ್ಸ್ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟ್ ಅಳವಡಿಕೆ ಮೂಲಕ ಮಂಜುನಾಥ್ ಮರುಜೀವ ನೀಡಿದ್ದಾರೆ. ಮಂಜುನಾಥ್ ಸದ್ಯ ರಾಜಕೀಯದ ಜೊತೆಗೆ ವೈದ್ಯಕೀಯ ವೃತ್ತಿಯಲ್ಲಿಯೂ ತೊಡಗಿಕೊಂಡಿದ್ದಾರೆ.
ವಾರದಲ್ಲಿ 2 ದಿನ 3 ಗಂಟೆ ಉಚಿತ ಸೇವೆ
ಡಾ. ಸಿಎನ್ ಮಂಜುನಾಥ್ ಸಂಸದರಾಗಿ ಜನರ ಅಹವಾಲು ಆಲಿಸುವುದರ ಜತೆಗೆ ವಾರದಲ್ಲಿ ಎರಡು ದಿನ ಮೂರು ಗಂಟೆ ಕಾಲ ಉಚಿತ ವೈದ್ಯಕೀಯ ಸೇವೆ ನೀಡಲು ಮುಂದಾಗಿದ್ದಾರೆ. ಅದರಂತೆ, ಆಂಜಿಯೋಪ್ಲ್ಯಾಸ್ಟಿ ಅಳವಡಿಕೆ ಮಾಡುವ ಮೂಲಕ ರೋಗಿಗೆ ಮರುಜೀವ ನೀಡಿದ್ದಾರೆ.
ಸಂಸದರಾದ ನಂತರ ಮೊದಲ ಬಾರಿಗೆ ಇತ್ತೀಚೆಗೆ ಸಂಸತ್ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಿದ್ದ ಮಂಜುನಾಥ್, ಹೆದ್ದಾರಿಯಲ್ಲಿ ಪ್ರಯಾಣಿಕರ ಸುರಕ್ಷತೆ ಸಂಬಂಧ ಪ್ರಶ್ನೆ ಕೇಳಿ ಗಮನ ಸೆಳೆದಿದ್ದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತದ ಸಂದರ್ಭದಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವುದಕ್ಕಾಗಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವ ಬಗ್ಗೆ ಅವರು ಕೇಳಿದ್ದ ಪ್ರಶ್ನೆಗೆ ಹೆದ್ದಾರಿ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿತ್ತು. ಸ್ಪೀಕರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಸಂಸತ್ ಅಧಿವೇಶನದಲ್ಲಿ ತಮ್ಮ ಮೊದಲ ಭಾಷಣದಲ್ಲೇ ಮಹತ್ವದ ಬೇಡಿಕೆ ಇಟ್ಟ ಡಾ ಮಂಜುನಾಥ್
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಬಲ ನಾಯಕ ಡಿಕೆ ಸುರೇಶ್ ವಿರುದ್ಧ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿ ಜೆಡಿಎಸ್ ಮೈತ್ರಿಪಕ್ಷಗಳು ಮತ್ತು ಕಾಂಗ್ರೆಸ್ನ ಪ್ರತಿಷ್ಠೆಯ ಕಣವಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಚ್ಚರಿಯ ಗೆಲುವು ಸಾಧಿಸಿ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ