ಯತ್ನಾಳ್ ಬಣದ ಲಿಂಗಾಯತ ಅಸ್ತ್ರಕ್ಕೆ ಆರಂಭದಲ್ಲೇ ಹಿನ್ನಡೆ: ಗುಂಪುಗಾರಿಕೆ ಮಾಡಲ್ಲ, ಸಭೆ ನಡೆಸಲ್ಲ ಎಂದ ಬೊಮ್ಮಾಯಿ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ದಲಿತ, ಒಬಿಸಿ ಅಸ್ತ್ರ ಪ್ರಯೋಗಿಸಿದ್ದ ಶಾಸಕ ಬಸನಗೌಡ ಯತ್ನಾಳ್ ಬಣ, ನಂತರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮುಂದಿಟ್ಟುಕೊಂಡು ಲಿಂಗಾಯತ ಅಸ್ತ್ರ ಪ್ರಯೋಗಕ್ಕೆ ಮುಂದಾಗಿತ್ತು. ಆದರೆ, ಇದಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ. ಕರ್ನಾಟಕ ಬಿಜೆಪಿ ಆಂತರಿಕ ಸಂಘರ್ಷದ ಇತ್ತೀಚಿನ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

ಬೆಂಗಳೂರು, ಫೆಬ್ರವರಿ 6: ಎರಡು ದಿನ ದೆಹಲಿಗೆ ಶಿಫ್ಟ್ ಆಗಿದ್ದ ಕರ್ನಾಟಕ ಬಿಜೆಪಿ ಬಂಡಾಯ ಮತ್ತೆ ಬೆಂಗಳೂರಿಗೆ ಬದಿದೆ. ಬಿವೈ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷ ಪಟ್ಟದಿಂದ ಕಿತ್ತೆಸೆಯಲೇಬೇಕು ಎಂದು ಯತ್ನಾಳ್ ಬಣ ಪಟ್ಟು ಹಿಡಿದು ಕುಳಿತಿದೆ. ಇತ್ತ ವಿಜಯೇಂದ್ರ ಬಣ ಯತ್ನಾಳ್ರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸುತ್ತಿದೆ. ಇದಕ್ಕೆ ಕೌಂಟರ್ ಮಾಡಿರೋ ಯತ್ನಾಳ್ ಬಣ, ವಿಜಯೇಂದ್ರ ವಿರುದ್ಧ ಲಿಂಗಾಯತ ಅಸ್ತ್ರ ಹೂಡಿದೆ.
ತಟಸ್ಥ ಬಣದಲ್ಲಿ ಗುರುತಿಸಿಕೊಂಡಿದ್ದ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವ ಯತ್ನಾಳ್ ಬಣದ ನಾಯಕರು, ವಿಜಯೇಂದ್ರ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ಲಿಂಗಾಯತ ನಾಯಕರ ನೇತೃತ್ವ ವಹಿಸಿಕೊಳ್ಳುವಂತೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಸೋಮಣ್ಣ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆಗೆ ಸಿದ್ಧತೆ ನಡೆದಿದ್ದು, ಫೆಬ್ರುವರಿ 10 ರಂದು ದೆಹಲಿಯಲ್ಲಿ ಲಿಂಗಾಯತ ನಯಾಕರು ಸಭೆ ಸೇರುವ ಸಾಧ್ಯತೆ ಇದೆ. ಸೋಮಣ್ಣ ಸರ್ಕಾರಿ ನಿವಾಸದ ಪೂಜೆ ನೆಪದಲ್ಲಿ ಸಭೆಗೆ ಪ್ಲ್ಯಾನ್ ಮಾಡಿದ್ದು, ಈ ಸಭೆಯನ್ನ ಬೊಮ್ಮಾಯಿ ನೇತೃತ್ವದಲ್ಲಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಜಯೇಂದ್ರ ಇಳಿಸಲು ವರಿಷ್ಠರಿಗೆ ಮನವರಿಕೆ ಯತ್ನಾಳ್ ಟೀಮ್ ಪ್ಲ್ಯಾನ್ ಮಾಡಿಕೊಂಡಿದೆ.
ಒಂದು ಗುಂಪಿನ ಸಭೆ ನಡೆಸಲ್ಲ ಎಂದ ಬೊಮ್ಮಾಯಿ
ವಿಜಯೇಂದ್ರ ವಿರುದ್ಧದ ಹೋರಾಟಕ್ಕೆ ನೇತೃತ್ವ ವಹಿಸುವಂತೆ ಯತ್ನಾಳ್ ಬಣ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ. ಆದರೆ ಈ ಮನವಿಯನ್ನು ನಯವಾಗಿಯೇ ತಿರಸ್ಕರಿಸಿರುವ ಬಸವರಾಜ ಬೊಮ್ಮಾಯಿ, ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ. ನಾನು ಯಾವುದೇ ಒಂದು ಗುಂಪಿನ ಸಭೆಯನ್ನು ಕರೆಯುವ ಪ್ರಶ್ನೆಯೇ ಬರುವುದಿಲ್ಲ. ಪಕ್ಷ ಮತ್ತು ವರಿಷ್ಠರ ತೀರ್ಮಾನವೇ ಅಂತಿಮ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಬಿಜೆಪಿಯಲ್ಲಿ ಬೆಳವಣಿಗೆ ಆದಷ್ಟು ಬೇಗ ಸರಿಯಾಗುತ್ತದೆ ಎಂದಿರುವ ಸಂಸದ ಜಗದೀಶ್ ಶೆಟ್ಟರ್, ಲಿಂಗಾಯತ ನಾಯಕರು ಸಭೆ ಸೇರುವ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಯತ್ನಾಳ್ ವಿರುದ್ಧ ಸಿಡಿದೆದ್ದ ಶಾಸಕ ಸುರೇಶ್ ಗೌಡ
ಯತ್ನಾಳ್ ಬಣದ ನಡೆಗೆ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಸಿಡಿದೆದ್ದಿದ್ದಾರೆ. ಹಾದಿಬೀದಿಯಲ್ಲಿ ಮಾತಾಡಬಾರದು ಎಂದು ಗುಡುಗಿದ್ದಾರೆ. ವಿಜಯೇಂದ್ರ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಬ್ಯಾಟ್ ಬೀಸಿದ್ದಾರೆ.
ಯತ್ನಾಳ್ ವಿರುದ್ಧ ಕ್ರಮಕ್ಕೆ ರೇಣುಕಾಚಾರ್ಯ ಬಣ ಆಗ್ರಹ
ಯತ್ನಾಳ್ ಬಣಕ್ಕೆ ತಿರುಗೇಟು ಕೊಡಲು ವಿಜಯೇಂದ್ರ ಬಣ ಸಜ್ಜಾಗಿದೆ. ಬುಧವಾರವಷ್ಟೇ ಸಭೆ ನಡೆಸಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದ ರೇಣುಕಾಚಾರ್ಯ ಟೀಮ್, ಮತ್ತೊಂದು ಸಭೆಗೆ ಸಜ್ಜಾಗಿದೆ. ಫೆಬ್ರವರಿ 12 ರಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಈ ಸಭೆ ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಯತ್ನಾಳ್ ಟೀಮ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲಿದೆ. ಜೊತಗೆೆ ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಲು ವಿಜಯೇಂದ್ರ ಆಪ್ತರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರ ವಿರುದ್ಧ ಯತ್ನಾಳ್ ಬಣ ಗೆರಿಲ್ಲಾ ಯುದ್ಧ! ದಲಿತ, ಒಬಿಸಿ ಆಯ್ತು ಈಗ ಲಿಂಗಾಯತ ಅಸ್ತ್ರ
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಎಲ್ಲವನ್ನು ಹೈಕಮಾಂಡ್ ಗಮನಿಸುತ್ತಿದೆ. ವರಿಷ್ಠರೇ ಎಲ್ಲವನ್ನ ಬಗೆಹರಿಸ್ತಾರೆ ಎಂದಿದ್ದಾರೆ.
ಎರಡು ಬಣವೂ ತೊಡೆ ತಟ್ಟಿ ನಿಂತಿದ್ದು, ಈ ರಾಜ್ಯಾಧ್ಯಕ್ಷ ಹುದ್ದೆ ಕದನದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ