ವಿಜಯೇಂದ್ರ ವಿರುದ್ಧ ಯತ್ನಾಳ್ ಬಣ ಗೆರಿಲ್ಲಾ ಯುದ್ಧ! ದಲಿತ, ಒಬಿಸಿ ಆಯ್ತು ಈಗ ಲಿಂಗಾಯತ ಅಸ್ತ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಗೆರಿಲ್ಲಾ ವಾರ್ ಆರಂಭಿಸಿದೆ. ಯತ್ನಾಳ್ ಬಣದ ನಾಯಕರು ದೆಹಲಿಯ ನಾನಾ ಕಡೆಗಳಲ್ಲಿ ತಂಡೋಪತಂಡವಾಗಿ ವರಿಷ್ಠರನ್ನು ಭೇಟಿ ಆಗುತ್ತಿದ್ದಾರೆ. ದಿಕ್ಕಿಗೊಬ್ಬ ನಾಯಕರು ರಾಜ್ಯಾಧ್ಯಕ್ಷರ ವಿರುದ್ಧ ವರಿಷ್ಠರಿಗೆ ವರದಿ ಒಪ್ಪಿಸಿದ್ದಾರೆ.

ನವದೆಹಲಿ, ಫೆಬ್ರವರಿ 5: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರರನ್ನು ಕೆಳಗಿಳಿಸುವುದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಣ ಶಪಥ ಮಾಡಿದೆ. ಇದರ ಭಾಗವಾಗಿ ಮಂಗಳವಾರ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕುಮಾರ್ ಬಂಗಾರಪ್ಪ ಹೈಕಮಾಂಡ್ ನಾಯಕರ ಬಳಿ ದೂರು ಕೊಟ್ಟಿದ್ದರು. ಈ ಮೂಲಕ ಇಡೀ ತಂಡ ದಲಿತ ಹಾಗೂ ಒಬಿಸಿ ಅಸ್ತ್ರ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿತ್ತು. ಇದೀಗ ಯತ್ನಾಳ್ ತಂಡ ಲಿಂಗಾಯತ ಬ್ರಹ್ಮಾಸ್ತ್ರ ಬಿಡುವುದಕ್ಕೆ ಸಜ್ಜಾಗಿದೆ. ಯತ್ನಾಳ್ ಮತ್ತು ಮಾಜಿ ಸಂಸದ ಸಿದ್ದೇಶ್ವರ್ ನೇತೃತ್ವದಲ್ಲಿ ವರಿಷ್ಠರ ಭೇಟಿಗೆ ಯತ್ನಿಸುತ್ತಿದೆ.
ವರಿಷ್ಠರ ಮುಂದೆ ಯತ್ನಾಳ್ ಬಣ ನೀಡುವ ದೂರೇನು?
ಇಡೀ ಲಿಂಗಾಯತ ಸಮುದಾಯ ಬಿವೈ ವಿಜಯೇಂದ್ರ ಹಿಂದೆ ಇಲ್ಲ. ಬಿಎಸ್ ಯಡಿಯೂರಪ್ಪನವರ ವರ್ಚಸ್ಸು ವಿಜಯೇಂದ್ರಗೆ ಇಲ್ಲ. ವಿಜಯೇಂದ್ರ ಬದಲಿಸಿದರೆ ಯಾವುದೇ ಹಿನ್ನಡೆ ಆಗುವುದಿಲ್ಲ ಎನ್ನುವ ಬಣ, ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಬದಲಿಸುವಂತೆ ಮನವಿ ಮಾಡಲಿದೆ. ಇದರ ಜತೆಗೆ ಯತ್ನಾಳ್ ಬಣಕ್ಕೆ ತಟಸ್ಥ ಗುಂಪಿನಲ್ಲಿರುವ ನಾಯಕರು ಕೂಡ ಬೆಂಬಲ ಕೊಟ್ಟಿದ್ದಾರೆ. ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ವರಿಷ್ಠರಿಗೆ ಸಂದೇಶ ರವಾನಿಸಲಿದ್ದಾರೆ.
ಹೋರಾಟದ ನೇತೃತ್ವ ವಹಿಸುವಂತೆ ಬೊಮ್ಮಾಯಿಗೆ ಮನವಿ
ಈ ಮಧ್ಯೆ ಮತ್ತೊಂದು ದಾಳ ಉರುಳಿಸಿರುವ ಯತ್ನಾಳ್ ಬಣ, ವಿಜಯೇಂದ್ರ ವಿರುದ್ಧದ ಹೋರಾಟಕ್ಕೆ ನೇತೃತ್ವ ವಹಿಸುವಂತೆ ಸಂಸದ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದೆ. ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಈ ಬಗ್ಗೆ ನೀವೇ ಹೈಕಮಾಂಡ್ ನಾಯಕರ ಜೊತೆ ಮಾಡನಾಡಿ ಎಂದು ಯತ್ನಾಳ್ ಬಣದ ಶಾಸಕರು ಹೇಳಿದ್ದಾರೆ ಎನ್ನಲಾಗಿದೆ.
ಬಿಜೆಪಿ ವರಿಷ್ಠರ ಮುಂದೆ ಯತ್ನಾಳ್ ಬಣದ ಮೂರು ಬೇಡಿಕೆ
ಯತ್ನಾಳ್ ಬಣ ಬಿಜೆಪಿ ವರಿಷ್ಠರ ಮುಂದೆ ಮೂರು ಬೇಡಿಕೆ ಇಟ್ಟಿದೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮುಕ್ತ ಹಾಗೂ ಹಿಂದುತ್ವದ ವಿರೋಧಿಗಳನ್ನ ಪಟ್ಟದಿಂದ ಕೆಳಗಿಳಿಸಬೇಕೆಂದು ಪಟ್ಟು ಹಿಡಿದಿದೆ. ಇದರ ಜೊತೆಗೆ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷ ಸಿದ್ಧಾಂತವನ್ನೂ ಯತ್ನಾಳ್ ಬಣ ಪ್ರಸ್ತಾಪ ಮಾಡಿದೆ.
ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಶ್ರೀರಾಮುಲು ಕಣ್ಣು!
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಶ್ರೀರಾಮುಲು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ವರಿಷ್ಠರ ಭೇಟಿ ವೇಳೆ ಈ ಬಗ್ಗೆ ಪ್ರಸ್ತಾಪ ಮಾಡಲು ಶ್ರೀರಾಮುಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಹೈಕಮಾಂಡ್ ಕೂಡ ದೆಹಲಿ ಚುನಾವಣೆ ಬಳಿಕ ಬರುವಂತೆ ಬುಲಾವ್ ಕೊಟ್ಟಿದೆ. ಮತ್ತೊಂದೆಡೆ ರಾಮುಲು ಅಧ್ಯಕ್ಷರಾದ್ರೆ ಆಗಬಹುದು ಎಂದು ಯತ್ನಾಳ್ ಬಣ ಅವರ ಬೆನ್ನಿಗೆ ನಿಂತಿರುವುದು ಕುತೂಹಲ ಕೆರಳಿಸಿದೆ.
ಭಿನ್ನಮತಿಯರು ಮೂಲ ಬಿಜೆಪಿಗರಲ್ಲ ಎಂದ ರೇಣುಕಾಚಾರ್ಯ
ಯತ್ನಾಳ್ ಬಣದ ಪಟ್ಟದ ಆಟವೇನೋ ಬಿರುಸುಗೊಂಡಿದೆ. ಹಾಗೆಂದು ವಿಜಯೇಂದ್ರ ಟೀಮ್ ಸುಮ್ಮನೇ ಕೂತಿಲ್ಲ. ಇವತ್ತು ಎಂಪಿ ರೇಣುಕಾಚಾರ್ಯ ಸೇರಿದಂತೆ ಕೆಲ ನಾಯಕರು ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಭಿನ್ನಮತಿಯರು ಮೂಲ ಬಿಜೆಪಿಗರೇ ಅಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲೂ ಸದ್ದು ಮಾಡ್ತಿದೆ ಕರ್ನಾಟಕ ಬಿಜೆಪಿ ಬಂಡಾಯ: ವಿಜಯೇಂದ್ರ ವಿರುದ್ಧ ಹೈಕಮಾಂಡ್ ಮುಂದೆ ರೆಬೆಲ್ಸ್ ಸಮರ
ಅದೇನೆ ಇರಲಿ, ಯತ್ನಾಳ್ ಬಣ ದೆಹಲಿಯಲ್ಲಿ ವರಿಷ್ಠರನ್ನು ಮೀಟ್ ಮಾಡಿ ವಿಜಯೇಂದ್ರರನ್ನು ಕೆಳಗಿಳಿಸುವ ಸಕಲ ಪ್ರಯತ್ನವನ್ನೂ ಮಾಡುತ್ತಿರುವುದಂತೂ ನಿಜ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ