ದೆಹಲಿಯಲ್ಲೂ ಸದ್ದು ಮಾಡ್ತಿದೆ ಕರ್ನಾಟಕ ಬಿಜೆಪಿ ಬಂಡಾಯ: ವಿಜಯೇಂದ್ರ ವಿರುದ್ಧ ಹೈಕಮಾಂಡ್ ಮುಂದೆ ರೆಬೆಲ್ಸ್ ಸಮರ
ಕರ್ನಾಟಕ ಬಿಜೆಪಿಯ ಬಣ ಜಗಳ ದೆಹಲಿಗೆ ತಲುಪಿದೆ. ದೆಹಲಿ ಸೇರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಈಗ ಮುಂದಿನ ದಾಳ ಉರುಳಿಸುವ ಲೆಕ್ಕಾಚಾರದಲ್ಲಿ ತೊಡಗಿದೆ. ಆದರೆ, ಇದಕ್ಕೆ ಕೌಂಟರ್ ಪ್ಲ್ಯಾನ್ ಮಾಡಿರುವ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ನಿಶ್ಚಿಂತೆಯಿಂದ ಇರುವಂತೆ ಕಾಣುತ್ತಿದೆ.

ಬೆಂಗಳೂರು, ಫೆಬ್ರವರಿ 5: ಕರ್ನಾಟಕ ಬಿಜೆಪಿಯಲ್ಲಿ ಹೊತ್ತಿಕೊಂಡಿರುವ ಬಂಡಾಯದ ಜ್ವಾಲೆ ದೆಹಲಿಯವರೆಗೂ ಹಬ್ಬಿದೆ. ರಾಜ್ಯಾಧ್ಯಕ್ಷ ಹುದ್ದೆಯಿಂದ ಬಿವೈ ವಿಜಯೇಂದ್ರ ಕೆಳಗಿಳಿಸುವ ಪ್ರತಿಜ್ಞೆ ಮಾಡಿರುವ ಶಾಸ ಬಸನಗೌಡ ಪಾಟೀಲ್ ಯತ್ನಾಳ್ ಬಣ, ದೆಹಲಿಯಲ್ಲೇ ಮೊಕ್ಕಾಂ ಹೂಡಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಬಿವೈ ವಿಜಯೇಂದ್ರ ವಿರುದ್ಧ ಹೈಕಮಾಂಡ್ ನಾಯಕರ ಬಳಿ ಪ್ರತ್ಯೇಕ ಚಾರ್ಜ್‌ಶೀಟ್ ಸಲ್ಲಿಸಲು ಸಜ್ಜಾಗಿದೆ.
ರಾಜ್ಯಾಧ್ಯಕ್ಷ ಚುನಾವಣೆ ನಡೆಯಲೇಬೇಕು ಎಂದು ಜಿದ್ದಿಗೆ ಬಿದ್ದಿರುವ ಯತ್ನಾಳ್ ಬಣ, ಅದಕ್ಕೆ ತಯಾರಿ ಮಾಡಿಕೊಂಡಂತಿದೆ. ಆದರೆ, ಯತ್ನಾಳ್ ಬಣಕ್ಕೆ ಮೌನವಾಗಿಯೇ ವಿಜಯೇಂದ್ರ ಟಕ್ಕರ್ ಕೊಡಲು ಪ್ಲ್ಯಾನ್ ಮಾಡಿದ್ದಾರೆ. ಆ ಸುಳಿವು ಕೂಡಾ ಅವರ ಮಾತಿನಲ್ಲೇ ಇದೆ.
ಶೀಘ್ರದಲ್ಲೇ ಎಲ್ಲಾ ಸರಿಯಾಗಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ, ಇದಕ್ಕೆ ಕೌಂಟರ್ ಕೊಟ್ಟಿರುವ ಯತ್ನಾಳ್, ವಿಜಯೇಂದ್ರ ಹೋದರೆ ಎಲ್ಲ ಸರಿಯಾಗುತ್ತದೆ ಎಂದಿದ್ದಾರೆ.
ಏತನ್ಮಧ್ಯೆ ಯತ್ನಾಳ್ ಮಾತಿಗೆ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ ದನಿಗೂಡಿಸುತ್ತಿದ್ದು, ಒಬ್ಬರಾದ ಮೇಲೊಬ್ಬರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ಬಿಎಲ್ ಸಂತೋಷ್‌ರನ್ನು ಕುಮಾರ್ ಬಂಗಾರಪ್ಪ, ಜೆಪಿ ನಡ್ಡಾರನ್ನ ರಮೇಶ್ ಜಾರಕಿಹೊಳಿ ಮತ್ತು ಅರವಿಂದ ಲಿಂಬಾವಳಿ ಪ್ರತ್ಯೇಕವಾಗಿ ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವಿಜಯೇಂದ್ರ ಬಿಟ್ಟು ಬೇರೆ ಯಾರನ್ನಾದ್ರೂ ಅಧ್ಯಕ್ಷ ಮಾಡಿ ಎಂದು ವಾದಿಸಿದ್ದಾರೆ.
ಇಂದು ವಿಜಯೇಂದ್ರ ಆಪ್ತರಿಂದ ಯತ್ನಾಳ್ ವಿರುದ್ಧ ಸಭೆ ಸಾಧ್ಯತೆ
ದೆಹಲಿಯಲ್ಲಿ ಬಿಜೆಪಿ ಬಂಡಾಯ ಬಣ ತಮ್ಮ ತಂತ್ರ ಹೆಣೆಯುತ್ತಿದ್ದರೆ, ಇತ್ತ ವಿಜಯೇಂದ್ರ ಬಣ ಕೂಡ ಆಕ್ರೋಶಗೊಂಡಿದೆ. ಬಂಡಾಯ ಬಣದ ನಾಯಕ ಯತ್ನಾಳ್ಗೆ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವಂತೆ ಪಂಥಾಹ್ವಾನ ಕೊಡಲಾಗಿದೆ. ಇದಕ್ಕೆ ಕೌಂಟರ್ ಕೊಟ್ಟಿರುವ ಯತ್ನಾಳ್, ಲಿಂಗಾಯತ ಕೋಟಾ ಬಂದರೆ ನಾನೇ ನಿಮ್ಮ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಎಂದು ತೊಡೆತಟ್ಟಿದ್ದಾರೆ.
ವಿಪಕ್ಷ ನಾಯಕನ ಬದಲಾವಣೆ ಬಗ್ಗೆಯೂ ಚರ್ಚೆ: ಸವದಿ ಬಾಂಬ್
ವಿಪಕ್ಷ ಬಿಜೆಪಿ ಬಣ ಜಗಳದಿಂದ ಕಾಂಗ್ರೆಸ್ ಒಳಗೊಳಗೆ ಖುಷಿಯಾಗಿದೆ. ಇದೇ ಹೊತ್ತಲ್ಲೇ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ, ಬಿಜೆಪಿಯಲ್ಲಿ ವಿಪಕ್ಷ ನಾಯಕನ ಸ್ಥಾನದ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನುವ ಮೂಲಕ ಹೊಸ ಬಾಂಬ್ ಹಾಕಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ನಾಯಕರಿಂದ ನಮಗೆ ಶಹಭಾಸ್ಗಿರಿ ಸಿಕ್ಕಿದೆ: ರಮೇಶ್ ಜಾರಕಿಹೊಳಿ
ಒಟ್ನಲ್ಲಿ, ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯಲ್ಲೇ ಎರಡ್ಮೂರು ಬಣಗಳು ಸೃಷ್ಟಿಯಾಗಿವೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಿದ್ದ ನಾಯಕರು ತಮ್ಮ ಪಕ್ಷದವರ ವಿರುದ್ಧವೇ ಸಮರ ಸಾರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿರುವ ದೆಹಲಿಯ ನಾಯಕರು ಇದನ್ನು ಹೇಗೆ ನಿಭಾಯಿಸುತ್ತಾರೆ? ಯಾವಾಗ ಬಣ ಜಗಳಕ್ಕೆ ಅಂತ್ಯ ಹಾಡುತ್ತಾರೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ