
ಬೆಂಗಳೂರು, ಏಪ್ರಿಲ್ 21: ಕಳೆದ ಎರಡು ವರ್ಷಗಳಿಂದ ಶೇಕಡ 40 ರಷ್ಟು ದರ ಏರಿಕೆ ಕಂಡಿರುವ ಕರಿಮೆಣಸು (Black pepper), ಪೂರೈಕೆ ಕೊರತೆ ಮತ್ತು ಬೇಡಿಕೆ ಹೆಚ್ಚಳದ ಪರಿಣಾಮ ಮತ್ತಷ್ಟು ದುಬಾರಿಯಾಗುವ (Black pepper Price) ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಾಳು ಮೆಣಸು ದರ ಕೆಜಿಗೆ 900 ರಿಂದ 1,100 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ. ಕರ್ನಾಟಕದಲ್ಲಿ (Karnataka) ಹವಾಮಾನ ಬದಲಾವಣೆ, ಅಕಾಲಿಕ ಮಳೆ, ಬೆಳೆಗೆ ರೋಗಬಾಧೆ ಇತ್ಯಾದಿ ಕಾರಣಗಳಿಂದ ಬೆಳೆ ಕುಸಿತವಾಗಿದೆ.
ವಿಯೆಟ್ನಾಂ, ಬ್ರೆಜಿಲ್ನಂತಹ ಹಚ್ಚು ಕರಿಮೆಣಸು ಬೆಳೆಯುವ ದೇಶಗಳಲ್ಲಿ ಬೆಳೆ ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಇದರಿಂದಾಗಿ ಪೂರೈಕೆ ಮೇಲೆ ಹೊಡೆತ ಬಿದ್ದಿದೆ. ಮತ್ತೊಂದೆಡೆ ಬೇಡಿಕೆ ಕೂಡ ಹೆಚ್ಚಾಗಿದೆ ಎಂದು ಕರ್ನಾಟಕ ಸ್ಪೈಸ್ ಅಸೋಸಿಯೇಷನ್ ಮತ್ತು ಚಿಕ್ಕಮಗಳೂರು ಬೆಳೆಗಾರರ ಸಂಘ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಕಳೆದ ವರ್ಷ ಬರಗಾಲದಿಂದಾಗಿ ಹೂಬಿಡುವಿಕೆ ವಿಳಂಬವಾಯಿತು ಮತ್ತು ನಂತರ ಹಠಾತ್ ಮಳೆಯಿಂದಾಗಿ ಬೆಳೆಯ ಮೇಲೆ ಪರಿಣಾಮ ಬೀರಿತು. ಇದು ಒಟ್ಟಾರೆ ಉತ್ಪಾದನೆ ಮೇಲೆ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ಪ್ರಸಕ್ತ ಋತುವಿನಲ್ಲಿ ಉತ್ಪಾದನೆಯು ಶೇ 40 ರಷ್ಟು ಕುಸಿತ ಕಂಡಿದೆ ಎಂದು ಕರ್ನಾಟಕ ಸ್ಪೈಸ್ ಅಸೋಸಿಯೇಷಮನ್ನ ಚಂದ್ರಶೇಖರ ರೆಡ್ಡಿ ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.
ಕಾಳು ಮೆಣಸು ಬೆಳೆಗೆ ತೇವಾಂಶವುಳ್ಳ ಗಾಳಿ, ನೆರಳು ಪ್ರದೇಶ ಮತ್ತು ಚೆನ್ನಾಗಿ ನೀರಿನ ಅಂಶವಿರುವ ಮಣ್ಣು ಬೇಕಾಗುತ್ತದೆ. ಪಶ್ಚಿಮ ಘಟ್ಟಗಳು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕರಿಮೆಣಸು ಉತ್ಪಾದನೆಗೆ ಪೂರಕ ವಾತಾವರಣ ಇವೆ. ಆದರೂ, ಕರ್ನಾಟಕದ ಅತಿಹೆಚ್ಚು ಕರಿಮೆಣಸು ಬೆಳೆಯುವ ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರುಗಳಲ್ಲಿ ಹವಾಮಾನ ಬದಲಾವಣೆಯ ಹೊಡೆತ ಬಿದ್ದಿದೆ. ಇದರಿಂದಾಗಿ ಬೆಳೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಕಷ್ಟಕರವಾಗಿ ಪರಿಣಮಿಸಿದೆ ಎಂದು ಕೃಷಿಕರು ತಿಳಿಸಿದ್ದಾರೆ. ಮಣ್ಣಿನಲ್ಲಿ ತೇವಾಂಶದ ಮಟ್ಟದ ಏರುಪೇರಿನಿಂದಾಗಿ ಶಿಲೀಂಧ್ರ ಸೋಂಕುಗಳೂ ಹೆಚ್ಚಾಗಿವೆ. ಇದು ಬೆಳೆ ಕುಸಿತಕ್ಕೆ ಕಾರಣವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಂಡಮಾನ್, ನಿಕೋಬಾರ್ ಮಾದರಿಯಲ್ಲಿ ಕರಾವಳಿ ಕರ್ನಾಟಕದಕಲ್ಲೂ ದ್ವೀಪ ಪ್ರವಾಸೋದ್ಯಮ ಆರಂಭಿಸಲು ಸಿದ್ದತೆ
ಮುಂದಿನ ಎರಡು ತಿಂಗಳವರೆಗೆ ಹೊಸ ಬೆಳೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇಲ್ಲ. ಈ ಪೂರೈಕೆ ಬಿಕ್ಕಟ್ಟು ಮುಂಬರುವ ತಿಂಗಳುಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿಕ್ಕಮಗಳೂರು ಪ್ಲಾಂಟರ್ಸ್ ಅಸೋಸಿಯೇಷನ್‌ನ ಜಗದೀಶ ಎಂಕೆ ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಇದು ಕರಿಮೆಣಸು ಬೆಲೆ ಮೇಲೆ ಪರಿಣಾಮ ಬೀರಲಿದೆ.
Published On - 9:56 am, Mon, 21 April 25