Crime Update: ಪರಿಹಾರ ಧನಕ್ಕೆ ಲಂಚ, ಬೋರ್​ವೆಲ್ ವೈರ್ ಕಳ್ಳತನ, ಆತ್ಮಹತ್ಯೆ, ಕಳ್ಳರ ಬಂಧನ

ಕರ್ನಾಟಕ ರಾಜ್ಯದ ವಿವಿಧೆಡೆ ಬುಧವಾರ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Crime Update: ಪರಿಹಾರ ಧನಕ್ಕೆ ಲಂಚ, ಬೋರ್​ವೆಲ್ ವೈರ್ ಕಳ್ಳತನ, ಆತ್ಮಹತ್ಯೆ, ಕಳ್ಳರ ಬಂಧನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 09, 2021 | 5:17 PM

ಬೆಂಗಳೂರು: ರಾಜ್ಯದ ವಿವಿಧೆಡೆ ಬುಧವಾರ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಹಾರಕ್ಕೆ ಪಿಡಿಒ ಒಬ್ಬರು ಲಂಚ ಕೇಳಿರುವ ಆಡಿಯೊ ವೈರಲ್ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಹೆತ್ತವರ ವಿರುದ್ಧ ಕಿರುಕುಳದ ಆರೋಪ ಮಾಡಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೆಲಮಂಗಲದಲ್ಲಿ ಅಪ್ಪ ಕೊಟ್ಟಿದ್ದ ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಮಗಳ ಮೇಲೆ ಹಲ್ಲೆ ನಡೆದಿದ್ದರೆ, ರಾಮನಗರ ಜಿಲ್ಲೆಯಲ್ಲಿ ಬೋರ್​ವೆಲ್​ಗಳ ವೈರ್ ಕಳ್ಳತನವಾಗಿದೆ.

ಆಡಿಯೊ ವೈರಲ್ ಹಾವೇರಿ: ಹಾನಗಲ್ ತಾಲ್ಲೂಕು ಹಿರೇಕಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಪರಿಹಾರ ಹಣ ನೀಡಲು ಪಿಡಿಒ ಒಬ್ಬರು ಲಂಚಕ್ಕೆ ಬೇಡಿಕೆಯಿಟ್ಟಿರುವ ಆಡಿಯೊ ವೈರಲ್ ಆಗಿದೆ. ₹ 30 ಸಾವಿರ ಲಂಚ ಕೊಟ್ಟರೆ ₹ 5 ಲಕ್ಷ ಪರಿಹಾರ ಸಿಗುತ್ತೆ. ಇಲ್ಲದಿದ್ದರೆ ₹ 3 ಲಕ್ಷ ಕೊಡುತ್ತೇವೆ ಎಂದು ಪಿಡಿಒ ಅವರದು ಎನ್ನಲಾದ ಧ್ವನಿ ಹೇಳಿರುವುದು ದಾಖಲಾಗಿದೆ. ಮಳೆಯಿಂದಾಗಿ ಮನೆ ಕಳೆದುಕೊಂಡಿದ್ದ ಸುಧಾಬಾಯಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮನೆ ಕಳೆದುಕೊಂಡಿರುವ ಸುಧಾಬಾಯಿ ಅವರ ಮಗ ಮಂಜುನಾಥ ಅವರೊಂದಿಗೆ ಮಾತನಾಡಿರುವ ಪಿಡಿಒ ರೇಣುಕಾ ಶೆಟ್ಟಿ, ಕೊನೆಗೆ ₹ 25 ಸಾವಿರ ಲಂಚಕ್ಕೆ ಒಪ್ಪಿಕೊಂಡಿದ್ದಾರೆ ಎಂದು ದೂರಲಾಗಿದೆ. ಲಂಚ ನೀಡದ ಹಿನ್ನೆಲೆಯಲ್ಲಿ ಈವರೆಗೆ ಸುಧಾಬಾಯಿ ಅವರಿಗೆ ಪರಿಹಾರ ಹಣ ಸಿಕ್ಕಿಲ್ಲ ಎಂದು ಹೇಳಲಾಗಿದೆ.

ಹೆತ್ತವರನ್ನು ದೂರಿ ಪುತ್ರನ ಆತ್ಮಹತ್ಯೆ ಮಂಡ್ಯ: ಹೆತ್ತವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಿರೀಶ್ (32) ಮೃತರು. ‘ನನ್ನ ಸಾವಿಗೆ ಅಪ್ಪ, ಅಮ್ಮ ಕಾರಣ’ ಎಂದು ಅವರು ಮರಣ ಪತ್ರ ಬರೆದುಕೊಂಡಿದ್ದರು. ಇವರ ತಂದೆ-ತಾಯಿ ಸರ್ಕಾರಿ ಶಾಲೆ ಶಿಕ್ಷಕರು. 11 ವರ್ಷದ ಹಿಂದೆ ಗಿರೀಶ್ ಅವರಿಗೆ ಮದುವೆಯಾಗಿತ್ತು. ಗಿರೀಶ್ ವಾಸವಿದ್ದ ಕೊಟ್ಟಿಗೆಯ ತುಂಬಾ ಬರಹಗಳಿವೆ. ಗಿರೀಶ್ ಆತ್ಮಹತ್ಯೆ ಬಳಿಕ ಅವರ ತಂದೆ-ತಾಯಿ ನಾಪತ್ತೆಯಾಗಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆಯ ಸಾಲ ವಾಪಸ್ ಕೇಳಿದ ಮಗಳ ಮೇಲೆ ಹಲ್ಲೆ ನೆಲಮಂಗಲ: ತಂದೆ ಕೊಟ್ಟಿದ್ದ ಸಾಲವನ್ನು ಹಿಂದಿರುಗಿಸುವಂತೆ ಕೇಳಿದ ಮಗಳನ್ನು ನಿಂದಿಸಿ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಮಣ್ಣೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಜನಿ (38), ನಾದಿನಿ ಲೇಖಾ (19) ಅವರ ಮೇಲೆ ಹಲ್ಲೆ ನಡೆದಿದೆ. ವೀರಚಿಕ್ಕಣ್ಣ ಮತ್ತು ಸೌಮ್ಯಾ ವಿರುದ್ಧ ಹಲ್ಲೆ ಮಾಡಿರುವ ದೂರು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ರಜನಿ ಅವರ ತಂದೆ ಬಳಿ ವೀರಚಿಕ್ಕಣ್ಣ ₹ 75 ಸಾವಿರ ಸಾಲ ಮಾಡಿದ್ದರು.

ಬೋರ್​ವೆಲ್ ವೈರ್ ಕಳವು ರಾಮನಗರ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ 22 ಬೋರ್​ವೆಲ್​ಗಳಿಗೆ ಅಳವಡಿಸಿದ್ದ ವೈರ್​ಗಳಲ್ಲಿದ್ದ ತಾಮ್ರದ ತಂತಿಗಳನ್ನು ಕಳ್ಳರು ಕಳವು ಮಾಡಿದ್ದಾರೆ. ವೈರ್​ಗಳನ್ನು ಜಮೀನಿನಲ್ಲಿಯೇ ಸುಟ್ಟು ಅದರೊಳಗಿದ್ದ ತಾಮ್ರದ ತಂತಿಗಳನ್ನು ಕಳ್ಳರು ಕೊಂಡೊಯ್ದಿದ್ದಾರೆ.

ಅಂತರರಾಜ್ಯ ಕಳ್ಳರ ಬಂಧನ ವಿಜಯಪುರ: ನಗರ ಠಾಣೆ ಪೊಲೀಸರು ಏಳು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ರಮೇಶ್ ಕಾಳೆ, ಗಂಗಾರಾಮ್ ಚೌಹಾಣ್, ವಿಜಯಪುರ ಮೂಲದ ಪರಶುರಾಮ ಕಾಳೆ, ಕಿರಣ ಬೇಡೆಕರ, ದೇವದಾಸ, ತನ್ವೀರ್ ಹೊನ್ನುಟಗಿ, ದಶರಥ ಹೊಸಮನಿ ಬಂಧಿತರು. ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಕಳವು ಮಾಡಿದ್ದ ಆರೋಪ ಇವರ ವಿರುದ್ಧ ಇದೆ. ಎಟಿಎಂ, ಆಭರಣ ಅಂಗಡಿ ಮತ್ತು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 356 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ವಸ್ತುಗಳು, ಮೊಬೈಲ್, ಬೊಲೆರೊ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬಾಲಾಜಿ ದರ್ಶನಕ್ಕೆ ನಕಲಿ ಟಿಕೆಟ್ ನೀಡಿ ವಂಚನೆ ಚಿಕ್ಕಬಳ್ಳಾಪುರ: ತಿರುಪತಿ ವೆಂಕಟೇಶ್ವರ ದರ್ಶನಕ್ಕೆಂದು ಬುಕ್ ಮಾಡಿದ್ದ ಮಹಿಳೆಗೆ ನಕಲಿ ಟಿಕೆಟ್ ನೀಡಿ ವಂಚಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವ ಪ್ರಿಯದರ್ಶಿನಿ ಈ ಸಂಬಂಧ ಸೈಬರ್ ಸೆಲ್​ಗೆ ದೂರು ದಾಖಲಿಸಿದ್ದಾರೆ. ಆಂಧ್ರಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ಪಂಜಾ ರಮಣಪ್ರಸಾದ್ ಆರೋಪಿ. 143 ಜನರಿಂದ ತಲಾ ₹ 900ರಂತೆ ಒಟ್ಟು ₹ 1,28,700 ಪಂಜಾಗೆ ನೀಡಲಾಗಿತ್ತು. ಈತ ಕೊಟ್ಟಿದ್ದ ಟಿಕೆಟ್​ಗಳು ನಕಲಿ ಎಂಬ ಕಾರಣಕ್ಕೆ ಟಿಟಿಡಿ ಮಾನ್ಯ ಮಾಡಿರಲಿಲ್ಲ. ಹೀಗಾಗಿ ಅವನನ್ನು ಬಂಧಿಸಿ, ನ್ಯಾಯ ಕೊಡಿಸಬೇಕು ಎಂದು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ರೌಡಿಗಳಿಗೆ ಎಚ್ಚರಿಕೆ ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ, ಬಸವೇಶ್ವರ ನಗರ, ವಿಜಯನಗರ ಸೇರಿದಂತೆ ಪಶ್ಚಿಮ ವಿಭಾಗದ ಎಲ್ಲಾ ಠಾಣೆ ಪೊಲೀಸರು ರೌಡಿಗಳ ಪೆರೇಡ್ ನಡೆಸಿ, ಹಬ್ಬದ ವೇಳೆ ಯಾವುದೇ ಗಲಾಟೆ, ಅಹಿತಕರ ಘಟನೆಗಳಲ್ಲಿ ಭಾಗಿಯಾಗಬಾರದು ಎಂದು ಎಚ್ಚರಿಸಿದ್ದಾರೆ.

ಹಾವು ಕಡಿದು ಬಾಗಲಕೋಟೆಯ ಯೋಧ ಸಾವು ಬಾಗಲಕೋಟೆ: ಕಾಶ್ಮೀರದಲ್ಲಿ ಕರ್ತವ್ಯದ ಮೇಲಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಯೋಧ ಚಿದಾನಂದ ಚನ್ನಬಸಪ್ಪ ಹಲಕುರ್ಕಿ (25) ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಾವು ಕಡಿದು ಮೃತಪಟ್ಟಿದ್ದಾರೆ. ಭಾರತೀಯ ಸೇನೆಯ ಮರಾಠಾ ರೆಜಿಮೆಂಟ್​ನ ಸೈನಿಕರಾಗಿ ಕಳೆದ 6 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಮೃತ ಯೋಧ ಚಿದಾನಂದನಿಗೆ ಒಬ್ಬ ಸಹೋದರ, ತಾಯಿ ರತ್ನಮ್ಮ ಇದ್ದಾರೆ. ಸ್ವಗ್ರಾಮದಲ್ಲಿಯೇ ಮೃತ ಯೋಧನ ಅಂತ್ಯಕ್ರಿಯೆ ನಡೆಯಲಿದೆ.

(Bribe Demand Wire Theft Thieves Arrest Crime news of Karnataka)

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಶಿಕ್ಷಕ-ಶಿಕ್ಷಕಿಯರಿಗೊಂದು ಕಟ್ಟುನಿಟ್ಟಿನ ನಿಯಮ ಜಾರಿ; ತಾಲಿಬಾನ್​ನಂತೆ ಆಯ್ತು ಎಂದ ನೆಟ್ಟಿಗರು

ಇದನ್ನೂ ಓದಿ: Opinion: ತಾಲಿಬಾನ್​ ರಾಷ್ಟ್ರಕ್ಕೆ ಜಗತ್ತಿನ ಮನ್ನಣೆ; ಮಕ್ಕಳಿಗೆ ತೋರಿಸಲು ಒಳ್ಳೆಯದು-ಕೆಟ್ಟದು ಪರಿಕಲ್ಪನೆಗಳೇ ಇನ್ನಿಲ್ಲ!

Published On - 5:15 pm, Thu, 9 September 21