ಬಿಎಸ್ ಯಡಿಯೂರಪ್ಪ ಪೋಕ್ಸೋ ಕೇಸ್: ಆಡಳಿತದ ದುರುಪಯೋಗ, ರಾಜಕೀಯ ವೈಶಮ್ಯ ಎಂದ ಜೋಶಿ
ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ವೈಶಮ್ಯದ ರಾಜಕಾರಣ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು, ಜೂನ್ 14: ಪೊಕ್ಸೋ (POCSO) ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದ್ದನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಖಂಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದು ರಾಜಕೀಯ ವೈಶಮ್ಯ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಪ್ರಲ್ಹಾದ್ ಜೋಶಿ”ಲೋಕಸಭೆ ಚುನಾವಣೆ 2024ರಲ್ಲಿ ಸೋಲುಂಡ ಕಾಂಗ್ರೆಸ್ ಅದನ್ನು ಜೀರ್ಣಿಸಿಕೊಳ್ಳಲಾಗದೆ ಆಡಳಿತವನ್ನು ದುರುಪಯೋಗ ಮಾಡಿ ಮನಬಂದಂತೆ ಷಡ್ಯಂತ್ರ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆಕೆ ಮಾನಸಿಕವಾಗಿ ಅಸ್ವಸ್ಥಳು, ದುರುದ್ದೇಶದಿಂದ ದೂರು ನೀಡಿದ್ದಾಳೆ. ಆಕೆ ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಕೇಸ್ ಗಳನ್ನು ದಾಖಲಿಸಿದ್ದಾಳೆ’ ಎಂದು ಅವರ ಗೃಹ ಮಂತ್ರಿಗಳೇ ಖುದ್ದಾಗಿ ಈ ಹಿಂದೆ ಹೇಳಿದ್ದರು. ಈಗ ನಿಮ್ಮ ದುರಾಡಳಿತವನ್ನು ಮರೆಮಾಚಲಿಕ್ಕೆ 81 ವರ್ಷದ ಬಿಜೆಪಿ ವರಿಷ್ಠರಾದ ಬಿಎಸ್ ಯಡಿಯೂರಪ್ಪ ಅವರ ಮೇಲೆ ಈ ಇಲ್ಲಸಲ್ಲದ ಪ್ರಕರಣ ಎಳೆಯುತ್ತಿರುವುದು ರಾಜಕೀಯ ವೈಶಮ್ಯವಷ್ಟೇ. ನಿಮ್ಮ ಈ ದುರ್ಬುದ್ಧಿಗೆ ನೀವು ತಕ್ಕ ಪಾಠ ಕಲಿಯಲಿದ್ದೀರಿ” ಎಂದು ವಾಗ್ದಾಳಿ ಮಾಡಿದರು.
ಲೋಕಸಭೆ ಚುನಾವಣೆ 2024ರಲ್ಲಿ ಸೋಲುಂಡ ಕಾಂಗ್ರೆಸ್ ಅದನ್ನು ಜೀರ್ಣಿಸಿಕೊಳ್ಳಲಾಗದೆ ಆಡಳಿತವನ್ನು ದುರುಪಯೋಗ ಮಾಡಿ ಮನಬಂದಂತೆ ಷಡ್ಯಂತ್ರ ಮಾಡುತ್ತಿದೆ. ‘ಆಕೆ ಮಾನಸಿಕವಾಗಿ ಅಸ್ವಸ್ಥಳು, ದುರುದ್ದೇಶದಿಂದ ದೂರು ನೀಡಿದ್ದಾಳೆ. ಆಕೆ ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಕೇಸ್ ಗಳನ್ನು…
— Pralhad Joshi (@JoshiPralhad) June 14, 2024
ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ಇದು ಹಗೆತನ ರಾಜಕೀಯವಲ್ಲವೇ? ಸಿಎಂಗೆ ಬಿಜೆಪಿ ನಾಯಕರ ಪ್ರಶ್ನೆ
ಒಂದೇ ದಿನ ಕಾಂಗ್ರೆಸ್ಸಿಗೆ ಅರ್ಜೆನ್ಸಿ
ಕೇಸ್ ಕೊಟ್ಟವರು ತೀರಿಕೊಂಡಿದ್ದಾರೆ. ಕೇಸ್ ಕೊಟ್ಟ ಮಹಿಳೆಯ ಮಗನ ದೂರು ಪಡೆದು ತಕ್ಷಣಕ್ಕೆ ಕೋರ್ಟಿಗೆ ಹೋದ ಪೊಲೀಸರು ಹೀಗೆ ಮಾಡಿದ್ದಾರೆ. ಯಡಿಯೂರಪ್ಪನವರು ದೆಹಲಿಯಲ್ಲಿ ಇದ್ದು, ಎರಡು ದಿನಗಳಲ್ಲಿ ಬರುವುದಾಗಿ ಹೇಳಿದ್ದರೂ ಅರ್ಜೆನ್ಸಿ ಮಾಡಿದ್ದಾರೆ. 4 ತಿಂಗಳು ಇಲ್ಲದ ಅರ್ಜೆನ್ಸಿ ಕಾಂಗ್ರೆಸ್ಸಿಗೆ ಇವತ್ತು ಒಂದೇ ದಿನ ಬಂದಿದೆ. ಇವತ್ತು ಜಾಮೀನುರಹಿತ ವಾರಂಟ್ ಪಡೆದು ಅರೆಸ್ಟ್ ಮಾಡಲು ಹೋಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಖಂಡನಾರ್ಹ ವಿಚಾರ. ಕಾಂಗ್ರೆಸ್ ಪಕ್ಷ ಹಗೆತನದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ.
ಘಟನೆ ವಿವರ
ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ಪುತ್ರಿಯೊಂದಿಗೆ ಬಿಎಸ್ ಯಡಿಯೂರಪ್ಪ ಅವರು ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಮಾರ್ಚ್ ತಿಂಗಳಲ್ಲಿ ದೂರು ನೀಡಿದ್ದರು. ಆದರೆ, ಕಳೆದ ತಿಂಗಳು ಆ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ಬಿಎಸ್ ಯಡಿಯೂರಪ್ಪಗೆ ಪೊಲೀಸರು ನೋಟಿಸ್ ನೀಡಿದ್ದರು. ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಜೂನ್ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಇನ್ನು ಬಿ.ಎಸ್.ಯಡಿಯೂರಪ್ಪ ಬಂಧಿಸುವಂತೆ ನಿರ್ದೇಶನ ಕೋರಿ ಪೋಕ್ಸೋ ಕೇಸ್ ಸಂತ್ರಸ್ತೆಯ ಸಹೋದರ ಜೂ.12 ರಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಮಾಡಿದೆ. ಬಿಎಸ್ ಯಡಿಯೂರಪ್ಪ ಅವರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Fri, 14 June 24




