ರಾಜ್ಯಪಾಲರಿಂದ ಪ್ರಾಸಿಕ್ಯೂಷನ್​ಗೆ ಅನುಮತಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿವೈ ವಿಜಯೇಂದ್ರ ಆಗ್ರಹ

|

Updated on: Aug 17, 2024 | 12:48 PM

ಮುಡಾ ಹಗರಣದಲ್ಲಿ ಸಿಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಅನುಮತಿ ನೀಡಿರುವ ಬೆನ್ನಲ್ಲೇ ಬಿಜೆಪಿ ನಾಯಕರು ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಘನತೆ ಎತ್ತಿಹಿಡಿಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದರೆ, ನಮ್ಮ ಪಾದಯಾತ್ರೆ ಫಲಕೊಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ರಾಜ್ಯಪಾಲರಿಂದ ಪ್ರಾಸಿಕ್ಯೂಷನ್​ಗೆ ಅನುಮತಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿವೈ ವಿಜಯೇಂದ್ರ ಆಗ್ರಹ
ಆರ್ ಅಶೋಕ ಮತ್ತು ವಿಜಯೇಂದ್ರ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಆಗಸ್ಟ್ 17: ಮುಡಾ ಹಗರಣ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ಕಾರಣ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದರ ಪ್ರತಿಯನ್ನು ಲಗತ್ತಿಸಿ ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಕಚೇರಿಯ ಘನತೆ ಕಾಪಾಡಬೇಕು ಎಂದು ಹೇಳಿದ್ದಾರೆ.

ವಿಜಯೇಂದ್ರ ಎಕ್ಸ್ ಸಂದೇಶ


‘ಮುಖ್ಯಮಂತ್ರಿ ವಿರುದ್ಧದ ಮುಡಾ ಹಗರಣದ ದೂರಿನ ಮೇಲೆ ಕಾನೂನು ಕ್ರಮಕ್ಕೆ ಅಧಿಕಾರ ನೀಡಲು ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ಸಾಕಷ್ಟು ಪುರಾವೆಗಳು ಇವೆ. ಗಂಭೀರ ಆರೋಪಗಳು ಕೇಳಿಬಂದಿರುವ ಕಾರಣ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ನಿರ್ಣಾಯಕವಾಗಿದೆ. ಅವರು ರಾಜೀನಾಮೆ ನೀಡಿ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಕಲ್ಪಿಸಿ, ಮುಖ್ಯಮಂತ್ರಿ ಕಚೇರಿಯ ಘನತೆ ಕಾಪಾಡಬೇಕಿದೆ. ಅವರಿಗೆ ನ್ಯಾಯ ಸಿಗುತ್ತದೆ’ ಎಂದು ವಿಜಯೇಂದ್ರ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ನಮ್ಮ ಪಾದಯಾತ್ರೆ ಹೋರಾಟ ಯಶಸ್ವಿ: ಅಶೋಕ್

ಮುಡಾ ಹಗರಣದ ವಿರುದ್ಧ ನಮ್ಮ ಪಾದಯಾತ್ರೆ ಹೋರಾಟ ಯಶಸ್ವಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಮುಡಾ ಕೇಸ್​ನಲ್ಲಿದ್ದ ಅನುಮಾನಗಳಿಗೆ ವಿಧಾನಸಭೆಯಲ್ಲಿ ಸ್ಪಷ್ಟನೆ ಕೊಡಲು ಸಿದ್ದರಾಮಯ್ಯಗೆ ಅವಕಾಶವಿತ್ತು. ಆದರೆ ಸ್ಪಷ್ಟನೆ ಕೊಡದೆ ವಿಧಾನಸಭೆ ಕಲಾಪದಿಂದ ಓಡಿ ಹೋದರು. ಅಧಿವೇಶನದಲ್ಲಿ ಚರ್ಚೆ ವೇಳೆ ನಮ್ಮ ಬಳಿ ದಾಖಲೆಗಳ ಸಂಗ್ರಹ ಇತ್ತು. ಸಾಮಾಜಿಕ ಕಾರ್ಯಕರ್ತರು ಪ್ರಾಸಿಕ್ಯೂಷನ್​​​ಗೆ ಮನವಿ ಮಾಡಿದ್ದರು. ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್​​ಗೆ ಅನುಮತಿ ಕೊಟ್ಟಿದ್ದಾರೆ. ನಮ್ಮ ಪಾದಯಾತ್ರೆ ಹೋರಾಟ ಯಶಸ್ವಿಯಾಗಿದೆ ಎಂದರು.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ, ಕಾನೂನು ಸಮಾಲೋಚನೆಯಲ್ಲಿ ಸಿಎಂ

ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಶೆಟ್ಟರ್

ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿರುವುದು ಕಾನೂನುಬದ್ಧವಾಗಿದೆ. ಸಿಎಂ ರಾಜೀನಾಮೆ ಕೊಟ್ಟು ತನಿಖೆಗೆ ಅವಕಾಶ ಮಾಡಿಕೊಡಬೇಕು. ಕಾನೂನು ಹೋರಾಟ ಮಾಡೋದು ಕಾಂಗ್ರೆಸ್​ಗೆ ಬಿಟ್ಟಿರುವ ವಿಚಾರ. ಅಕಸ್ಮಾತ್ ರಾಜ್ಯಪಾಲರ ಪ್ರಾಸಿಕ್ಯೂಷನ್​ಗೆ ಚಾಲೆಂಜ್ ಮಾಡಿದರೆ ಅದು ಸರಿ ಅಲ್ಲ ಎಂದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Sat, 17 August 24