ಕರ್ನಾಟಕಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶವನ್ನು ಎತ್ತಿಹಿಡಿದಿದ್ದು, ತಮಿಳುನಾಡಿಗೆ ಪ್ರತಿದಿನ 9000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸೂಚಿಸಿದೆ. ಇದು ಕರ್ನಾಟಕಕ್ಕೆ ಭಾರಿ ಹಿನ್ನಡೆಯಾಗಿದೆ. ಇದು ರಾಜ್ಯದ ರೈತರಲ್ಲಿ ಆತಂಕ ಮೂಡಿಸಿದೆ. ರಾಜ್ಯ ಸರ್ಕಾರ ಕಾನೂನು ಹೋರಾಟ ಮುಂದಿವರಿಸುವ ಬಗ್ಗೆ ಕಾನೂನು ತಂಡ ನಿರ್ಧರಿಸಲಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಕರ್ನಾಟಕಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA
ಹೊಗೇನಕಲ್​ನಲ್ಲಿ ಕಾವೇರಿ ನದಿ ನೀರು ಧುಮ್ಮಿಕ್ಕುತ್ತಿರುವುದು
Image Credit source: PTI

Updated on: Aug 25, 2026 | 1:24 PM

ನವದೆಹಲಿ, ಆಗಸ್ಟ್ 25: ಕಾವೇರಿ ವಿವಾದ (Cauvery Dispute) ಸಂಬಂಧ ಕರ್ನಾಟಕಕ್ಕೆ ಮತ್ತೆ ಭಾರಿ ಹಿನ್ನಡೆಯಾಗಿದೆ. ಪ್ರತಿ ದಿನ ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)  ಸೋಮವಾರ ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ ಎತ್ತಿಹಿಡಿಯಲಾಗಿದೆ. ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಿಂದ ಎಸಿಎಸ್ (ಮುಖ್ಯ ಕಾರ್ಯದರ್ಶಿ) ಗೌರವ್ ಗುಪ್ತಾ ಹಾಗೂ ಕಾವೇರಿ ನೀರಾವರಿ ನಿಗಮ ಎಂಡಿ ಮಹೇಶ್ ಭಾಗಿಯಾದರು. ತಮಿಳುನಾಡಿನಿಂದ ನೀರಾವರಿ ಕಾರ್ಯದರ್ಶಿ ಪ್ರಶಾಂತ್, ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಂ ಭಾಗಿಯಾದರು.

ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದೇನು?

ಬಳಿಕ ಮಾತನಾಡಿದ ಗೌರವ್ ಗುಪ್ತಾ, ‘ಇಂದು ಒಂದೂವರೆ ಗಂಟೆಗಳ ಕಾಲ ಸಭೆ ಮಾಡಿದ್ದೇವೆ. ನೆನ್ನೆ ಕೊಟ್ಟಿರುವ ಶಿಫಾರಸನ್ನು ಪಾಲಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ . ತಮಿಳುನಾಡು 28 ಟಿಎಂಸಿ ನೀರಿನ ಬೇಡಿಕೆ ಇಟ್ಟಿತ್ತು . ಆದರೆ, ಪ್ರಾಧಿಕಾರ ಅದನ್ನು ಒಪ್ಪಿಲ್ಲ. ಮುಂದೆ ಉತ್ತಮ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಆಶಯ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ನೀರು ಹರಿಸಲು ಸೂಚಿಸಿದೆ ಎಂದು ತಿಳಿಸಿದರು.

ಕಾನೂನು ಹೋರಾಟದ ಬಗ್ಗೆ ಕಾನೂನು ತಂಡದಿಂದ ತೀರ್ಮಾನ: ಗೌರವ್ ಗುಪ್ತಾ

ಕಾನೂನು ಹೋರಾಟದ ಬಗ್ಗೆ, ಕಾನೂನು ತಂಡ ನಿರ್ಧಾರ ಮಾಡಲಿದೆ. ಇವತ್ತಿನ ಬೆಳವಣಿಗೆಯನ್ನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಗಮನಕ್ಕೆ ತರುತ್ತೇವೆ ಎಂದು ಗೌರವ್ ಗುಪ್ತಾ ಹೇಳಿದರು.

ತಮಿಳುನಾಡಿಗೆ ಪ್ರತಿ ದಿನ 9000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದ CWRC: ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು

ಮತ್ತೊಂದೆಡೆ, ಕಾವೇರಿ ನೀರು ಹಂಚಿಕೆ ವಿವಾದದ ವಿಚಾರ ಸುಪ್ರೀಂ ಕೋರ್ಟ್​ನಲ್ಲಿಯೂ ವಿಚಾರಣೆ ಹಂತದಲ್ಲಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ ಈ ಹಿಂದಿನ ಆದೇಶವಾದ, ಪ್ರತಿ ದಿನ 12000 ಕ್ಯೂಸೆಕ್ ನೀರು ಹರಿಸಬೇಕೆಂಬುದನ್ನು ಕರ್ನಾಟಕ ಪಾಲಿಸುತ್ತಿಲ್ಲ ಎಂದು ತಮಿಳುನಾಡು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ ಆಕ್ಷೇಪಿಸಿತ್ತು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಆಗಸ್ಟ್ 25 ರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ ಅಂಕಿಅಂಶಗಳ ಸಹಿತ ಹಾಜರಾಗುವಂತೆ ಉಭಯ ರಾಜ್ಯಗಳಿಗೆ ಸೂಚಿಸಿ ಮುಂದಿನ ವಿಚಾರಣೆಯನ್ನು ಆಗಸ್ಟ್ 31ಕ್ಕೆ ನಿಗದಿಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:23 pm, Tue, 25 August 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us