
ನವದೆಹಲಿ/ಬೆಂಗಳೂರು, ಮೇ 06: ಓಬಳಾಪುರಂ ಮೈನಿಂಗ್ ಕಂಪನಿ (OMC) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಅಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಬಿ.ವಿ.ಶ್ರೀನಿವಾಸರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಂಪನಿಯ ಮುಖ್ಯಸ್ಥನಾಗಿದ್ದ ಜನಾರ್ದನ ರೆಡ್ಡಿ ಅಪರಾಧಿ ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ (CBI Court) ತೀರ್ಪು ಪ್ರಕಟಿಸಿದೆ.
ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಮೂಲಕ ಗಾಲಿ ಜನಾರ್ದನ ರೆಡ್ಡಿ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇನ್ನು, ಇದೇ ಪ್ರಕರಣದಲ್ಲಿ ವಿ.ಡಿ.ರಾಜಗೋಪಾಲ್, ದಿ. ರಾವ್ ಲಿಂಗಾರೆಡ್ಡಿ, ಕೆ.ಮೆಹಫೂಸ್ ಅಲಿ ಖಾನ್, ಬಿವಿ ಶ್ರೀನಿವಾಸ್ ರೆಡ್ಡಿ (ಜನಾರ್ದನ್ ರೆಡ್ಡಿ ಸಂಬಂಧಿ) ಮತ್ತು ಓಎಂಸಿ ಕಂಪನಿ ಕೂಡ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಅಪರಾಧವು ಐಪಿಸಿಯ ಸೆಕ್ಷನ್ 120B ಜೊತೆಗೆ 420, 409, 468, 471 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (2) ಜೊತೆಗೆ 13 (1)(d) ಅಡಿಯಲ್ಲಿ ಸಾಬೀತಾಗಿದೆ.
ಶಾಸಕ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದ್ದು, 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗಿರುವುದರಿಂದ ಜೈಲು ಸೇರುವುದು ಖಚಿತವಾಗಿದೆ. ಜಾಮೀನಿಗಾಗಿ ಹೈದರಾಬಾದ್ನ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಹೈಕೋರ್ಟ್ ಜಾಮೀನು ನೀಡುವವರೆಗೆ ಜೈಲಿನಲ್ಲಿರಬೇಕು.
ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ಅದಿರನ್ನು ಅಕ್ರಮವಾಗಿ ಗಣಿಕಾರಿಕೆ ಮಾಡಲಾಗಿತ್ತು. 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದರು. ಈ ಪ್ರಕರಣದ ತನಿಖೆಗಾಗಿ 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು.
ಇದನ್ನೂ ಓದಿ: ಬಳ್ಳಾರಿ ಬಿಜೆಪಿಯಲ್ಲಿ ಬಣಬಡಿದಾಟ ಶುರು: ಕುತೂಹಲ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ
“ಬಳ್ಳಾರಿ ಮತ್ತು ಗಂಗಾವತಿಯ ಜನರು ನನ್ನನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ
ನಾನು ಸಾರ್ವಜನಿಕ ಸೇವೆಗೆ ಸಮರ್ಪಿತನಾಗಿದ್ದೇನೆ. ಸಾರ್ವಜನಿಕರಿಂದ ನನಗೆ ಸಿಗುವ ಬೆಂಬಲವು ಆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ದಯವಿಟ್ಟು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಜನಾರ್ದನ್ ರೆಡ್ಡಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಜನಾರ್ದನ ರೆಡ್ಡಿ ಮನವಿಯನ್ನು ತಿರಸ್ಕರಿಸಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Tue, 6 May 25