ರಾಮುಲು ಅವಕಾಶ ಕೇಳಿದ್ದಷ್ಟೇ ಬಂತು! ಬಳ್ಳಾರಿಯಲ್ಲಿ ಚರ್ಚೆಗೆ ಗ್ರಾಸವಾದ ಅಮಿತ್ ಶಾ, ರೆಡ್ಡಿ ಭೇಟಿ
ಬಳ್ಳಾರಿಯ ಬಿಜೆಪಿ ನಾಯಕ ಶ್ರೀರಾಮುಲು ಅವರು ಬೆಂಗಳೂರಿಗೆ ಬಂದ ಅಮಿತ್ ಶಾ ಅವರನ್ನು ಭೇಟಿಯಾಗಲು ಬಯಸಿದ್ದರು, ಆದರೆ ಅವಕಾಶ ಸಿಗಲಿಲ್ಲ. ಆದರೆ, ಮತ್ತೊಂದೆಡೆ ಅಮಿತ್ ಶಾ ಅವರನ್ನು ಜನಾರ್ದನ ರೆಡ್ಡಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ಬಳ್ಳಾರಿಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ರಾಮುಲು ಹೈಕಮಾಂಡ್‌ನೊಂದಿಗೆ ತಮ್ಮ ಅಸಮಾಧಾನವನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅವರ ಪ್ರಯತ್ನ ವಿಫಲವಾಗಿದೆ.

ಬಳ್ಳಾರಿ, ಮಾರ್ಚ್ 8: ಕೇಂದ್ರ ಗ್ರಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ಬೆಂಗಳೂರಿಗೆ ಬಂದಿದ್ದ ವೇಳೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು ಎಂದು ಬಳ್ಳಾರಿಯ ಬಿಜೆಪಿ ನಾಯಕ ಶ್ರೀರಾಮುಲು (B Sriramulu) ಬಯಸಿದ್ದರು. ಆದರೆ, ಇತ್ತೀಚಿಗಷ್ಟೇ ಅವರ ವಿರುದ್ಧ ಮುನಿಸಿಕೊಂಡಿರುವ ಶಾಸಕ ಜನಾರ್ದನ ರೆಡ್ಡಿ, ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ರಾಮುಲುಗೆ ಅಮಿತ್ ಶಾ ಭೇಟಿಯಾಗುವ ಅವಕಾಶ ಸಿಗಲಿಲ್ಲ. ಇದು ಸದ್ಯ ಬಳ್ಳಾರಿ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡ ಬಳಿಕ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅಳಲು ತೋಡಿಕೊಳ್ಳಲು ಶ್ರೀರಾಮುಲು ಮುಂದಾಗಿದ್ದರು. ಒಂದು ಬಾರಿ ಅವರನ್ನು ದೆಹಲಿಗೆ ಬರುವಂತೆ ಹೇಳಿದ್ದ ಹೈಕಮಾಂಡ್ ನಾಯಕರು, ನಂತರ ಸದ್ಯಕ್ಕೆ ಬರುವುದು ಬೇಡ ಎಂಬ ಸಂದೇಶ ಕಳುಹಿಸಿದ್ದರು. ಇದರಿಂದಾಗಿ ಹೈಕಮಾಂಡ್ ಮುಂದೆ ಅಸಮಾಧಾನ ಹೇಳಿಕೊಳ್ಳುವ ರಾಮುಲು ಪ್ರಯತ್ನಕ್ಕೆ ತಡೆಯಾಗಿತ್ತು.
ರಾಮುಲುಗೆ ಸಿಗದ ಅವಕಾಶ
ಇದೀಗ ಅಮಿತ್ ಶಾ ಬೆಂಗಳೂರಿಗೆ ಬರುವುದನ್ನೇ ರಾಮಲು ಎದುರು ನೋಡುತ್ತಿದ್ದರು. ಶಾ ಅವರೊಂದಿಗಿನ ತಮ್ಮ ಹಳೆಯ ಸ್ನೇಹವನ್ನು ಬಳಸಿಕೊಂಡು, ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಉತ್ಸಾಹದಿಂದ ಇದ್ದರು. ಆದರೆ ರಾಮುಲುಗೆ ಜನಾರ್ದನ ರೆಡ್ಡಿ ಟಕ್ಕರ್ ಕೊಟ್ಟಿದ್ದಾರೆ.
ರಾಮುಲುಗೆ ರೆಡ್ಡಿ ಟಕ್ಕರ್
ಗಂಗಾವತಿ ಶಾಸಕರಾಗಿರುವ ಗಾಲಿ ಜನಾರ್ದನ ರೆಡ್ಡಿ ಶುಕ್ರವಾರ ಕರ್ನಾಟಕ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಜೊತೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿ ನಡೆಸಿದ್ದಾರೆ.
ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ, ಕೋರ್ ಕಮಿಟಿ ಸಭೆ ಬೆಳವಣಿಗೆ, ರಾಜ್ಯಸಭಾ ಸದಸ್ಯ ಸ್ಥಾನದ ಬಗ್ಗೆ ಚರ್ಚಿಸಲು ರಾಮುಲು ಅವಕಾಶ ಕೇಳಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು. ಆದರೆ, ರಾಮುಲು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಜನಾರ್ದನ ರೆಡ್ಡಿ, ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ರಾಜ್ಯ ರಾಜಕಾರಣಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಅಮಿತ್ ಶಾ ಭೇಟಿಯಾಗಲು ಶ್ರೀರಾಮುಲು ಪ್ಲಾನ್
ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ, ಮಾರತ್ತಹಳ್ಳಿಯಲ್ಲಿ ನಡೆಯಲಿರುವ ‘‘ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆ’’ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಚಿವ ಅರವಿಂದ ಲಿಂಬಾವಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಮಿತ್ ಶಾ ಭೇಟಿ ವೇಳೆ ರಾಜ್ಯ ರಾಜಕೀಯ ನಾಯಕರ ಭೇಟಿ, ಚರ್ಚೆ ನಿಗದಿಯಾಗಿರಲಿಲ್ಲ. ಆದಾಗ್ಯೂ ರಾಮುಲು ಭೇಟಿಗೆ ಅವಕಾಶ ದೊರೆಯದೆ, ರೆಡ್ಡಿ ಜತೆ ಶಾ ಮಾತುಕತೆ ನಡೆಸಿದ್ದು ಕುತೂಹಲ ಹೆಚ್ಚಿಸಿದೆ.