ಚಿಕ್ಕಪ್ಪನ ಕ್ರಷರ್‌ಗೆ ಹೋಗಲು ಅಕ್ರಮವಾಗಿ ರಸ್ತೆ ನಿರ್ಮಾಣ: ಶಾಸಕ ಗಣೇಶ್ ಪ್ರಸಾದ್ ವಿರುದ್ದ ಗಂಭೀರ ಆರೋಪ
ಅವರೆಲ್ಲರೂ ಇದ್ದ ಚೂರು ಪಾರು ಭೂಮಿಯಲ್ಲಿ ಉತ್ತು ಬಿತ್ತು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬಡ ರೈತರು. ಹೀಗಿದ್ದ ಆ ಬಡ ರೈತರ ಜೀವನ ಈಗ ಮೂರಾಬಟ್ಟೆಯಾಗಿದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಕೈ ಶಾಸಕ ಅನ್ನದಾತರ ಅನ್ನವನ್ನೆ ಕಿತ್ತು ಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹಾಗಾದರೆ, ಆ ಶಾಸಕರು ಯಾರು? ಅವರು ಮಾಡಿಕೊಂಡ ಎಡವಟ್ಟಾದರೂ ಏನು ಅಂತೀರಾ? ಈ ಸ್ಟೋರಿ ಓದಿ.
ಚಾಮರಾಜನಗರ, ಸೆ.19: ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್(MLA Ganesh Prasad) ನಡೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡಹುಂಡಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಚಿಕ್ಕಪ್ಪನ ಕ್ರಷರ್‌ಗೆ ಹೋಗಲು ರಸ್ತೆ ಮಾಡುವ ಉದ್ದೇಶದಿಂದ ಜಮೀನಿನಲ್ಲಿ ಫಸಲು ನಾಶ ಮಾಡಿ ರಸ್ತೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ರಸ್ತೆಯಿಂದ ಜಮೀನುಗಳಲ್ಲಿ ಬೆಳೆದಿದ್ದ ಹುರುಳಿ, ಸೂರ್ಯಕಾಂತಿ, ಜೋಳ ಮತ್ತಿತ್ತರ ಬೆಳೆ ನಾಶವಾಗಿದೆ. ಬಂಡೀದಾರಿ ಹೆಸರಿನಲ್ಲಿ ಸುಮಾರು 2 ಕಿಮೀ ರಸ್ತೆ ನಿರ್ಮಿಸಲಾಗಿದೆ. ನಾವ್ಯಾರು ಬಂಡೀ ದಾರಿ ನಿರ್ಮಿಸಿ ಎಂದು ಕೇಳಿಲ್ಲ. ಆದರೂ ಕೂಡ ಶಾಸಕರ ಚಿಕ್ಕಪ್ಪ ನಂಜುಂಡ ಪ್ರಸಾದ್ಗೆ ಸೇರಿದ ಕ್ರಷರ್‌ಗೆ ದಾರಿ ಮಾಡಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ರಸ್ತೆ ನಿರ್ಮಿಸಲು ಹೊರಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ರಸ್ತೆ ನಿರ್ಮಿಸುವ ಸ್ಥಳಕ್ಕೆ ಗುಂಡ್ಲುಪೇಟೆ ತಹಶೀಲ್ದಾರ್ ಭೇಟಿ ಕೊಟ್ಟಿದ್ದರು. ಈ ವೇಳೆ ರೈತರು ತಹಶೀಲ್ದಾರ್ಗೆ ತರಾಟೆ ತೆಗೆದುಕೊಂಡರು. ನಮಗೆ ಇಲ್ಲಿರುವುದೇ ಅರ್ಧ, ಒಂದು ಎಕರೆ ಜಮೀನು. ರಸ್ತೆ ನಿರ್ಮಾಣ ಮಾಡಿದರೆ ನಮಗೆ ಜಮೀನು ಉಳಿಯಲ್ಲ. ಅಲ್ಲದೇ ಕ್ರಷರ್ ಲಾರಿಗಳ ಸಂಚಾರದಿಂದ ಧೂಳಿನಿಂದ ಬೆಳೆಗಳಿಗೆ ಹಾನಿಯಾಗುತ್ತದೆ. ಹಿಂದೆ 2018 ರಲ್ಲೂ ಕೂಡ ರಸ್ತೆ ನಿರ್ಮಿಸಲು ಹೊರಟಾಗ ರೈತರು ತಡೆಗಟ್ಟಿದ್ದರು.ಇದೀಗ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅಧಿಕಾರದ ಬಲದಿಂದ ನಮ್ಮ ಮೇಲೆ ದೌರ್ಜನ್ಯ ಮಾಡ್ತಿದ್ದಾರೆಂದು ಸ್ಥಳೀಯ ರೈತರು ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ: ಮತ್ತೊಂದು ಆನೆಯ ಕಳೇಬರ ಪತ್ತೆ; ಅರಣ್ಯಾಧಿಕಾರಿಗಳಲ್ಲಿ ಮೂಡಿದ ಅನುಮಾನ
ಒಟ್ಟಿನಲ್ಲಿ ರೈತರ ಜಮೀನಿಗೆ ಹೋಗಿ ವ್ಯವಸಾಯ ಮಾಡಲು ಎಷ್ಟೋ ಕಡೆ ರಸ್ತೆಗಳಿಲ್ಲ. ಆದ್ರೆ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಅಧಿಕಾರದ ಬಲದಿಂದ ತಮ್ಮ ಚಿಕ್ಕಪ್ಪ ನಂಜುಂಡ ಪ್ರಸಾದ್ ಕ್ರಷರ್‌ಗೆ ದಾರಿ ಮಾಡಿಕೊಡಲೂ ರಸ್ತೆ ನಿರ್ಮಿಸಲು ಹೊರಟಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಇದಕ್ಕೆ ಅಧಿಕಾರಿಗಳು ಸಾಥ್ ಕೊಟ್ಟಿದ್ದರಿಂದ ಸ್ಥಳೀಯರು ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ