ಬಂಡೀಪುರದಲ್ಲಿ ಹಸಿರು ಸುಂಕ ವಸೂಲಿಗೆ ಫಾಸ್ಟ್ ಟ್ಯಾಗ್ ಐಡಿಯಾ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮುಂದಾದ ಅರಣ್ಯ ಇಲಾಖೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಸಿರು ಸುಂಕ ವಸೂಲಿಗೆ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದಿದೆ. ವಾರಾಂತ್ಯದಲ್ಲಿ ಉಂಟಾಗುತ್ತಿದ್ದ ದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೂರು ಫಾಸ್ಟ್‌ಟ್ಯಾಗ್ ಕೇಂದ್ರಗಳು ಸ್ಥಾಪಿಸಲಾಗಿದೆ. ಲಘು ವಾಹನಗಳಿಗೆ 20 ರೂ ಮತ್ತು ಭಾರಿ ವಾಹನಗಳಿಗೆ 50 ರೂ. ಸುಂಕ ವಿಧಿಸಲಾಗುತ್ತಿದೆ.

ಚಾಮರಾಜನಗರ, ಫೆಬ್ರವರಿ 21: ಬಂಡೀಪುರ ಭಾಗದಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳಿಗೂ ಕೂಡ ಅರಣ್ಯ ಇಲಾಖೆ ಹಸಿರು ಸುಂಕ (Green Tax) ವಸೂಲಿ ಮಾಡ್ತಿದೆ. ಈ ಹಸಿರು ಸುಂಕ ವಸೂಲಿ ವೇಳೆ ವೀಕೆಂಡ್ನಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿತ್ತು. ಈ ಟ್ರಾಫಿಕ್ ಕಿರಿಕಿರಿಗೆ ಇತಿಶ್ರೀ ಹಾಡಲು ಪ್ರಯೋಗಿಕವಾಗಿ ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ತಂದಿದೆ. ಯಾವ ಅರಣ್ಯದಲ್ಲಿ ಫಾಸ್ಟ್ ಟ್ಯಾಗ್ನಿಂದ ವಸೂಲಿ ಮಾಡ್ತಿದ್ದಾರೆ? ಇದ್ರಿಂದ ಟ್ರಾಫಿಕ್ ಕಿರಿಕಿರಿ ಹೇಗೆ ತಪ್ಪುತ್ತೆ ಎಂಬ ನಿಮ್ಮ ಪ್ರಶ್ನೆಗೆ ಮುಂದೆ ಉತ್ತರವಿದೆ ಓದಿ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಿಂದ ಕೇರಳ ಮತ್ತು ಊಟಿ ಸೇರಿದಂತೆ ತಮಿಳುನಾಡಿಗೆ ತೆರಳುವ ವೇಳೆ ಎದುರಾಗುತ್ತಿದ್ದ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ಗೆ ಮುಕ್ತಿ ಸಿಗುತ್ತಿದ್ದು, ನಗದು ಬದಲಾಗಿ ಫಾಸ್ಟ್ ಟ್ಯಾಗ್ ಆರಂಭಿಸಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರಿಂದ ಹಸಿರು ಸುಂಕ ವಸೂಲಿಗೆ ನಿರ್ಮಾಣವಾಗಿರುವ ಫಾಸ್ಟ್ ಟ್ಯಾಗ್ ಕೇಂದ್ರಕ್ಕೆ ಶೀಘ್ರದಲ್ಲೇ ಚಾಲನೆ ಸಿಗಲಿದ್ದು, ಈಗಾಗಲೇ ಪ್ರಾಯೋಗಿಕ ನಿರ್ವಹಣೆ ಆರಂಭವಾಗಿದೆ.
ಇದನ್ನೂ ಓದಿ: ಕರಿದ ಹಸಿರು ಬಟಾಣಿಗೆ ಕೃತಕ ಬಣ್ಣ ಬಳಸಿ ಮಾರಾಟ: ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ
ರಾಷ್ಟ್ರೀಯ ಹೆದ್ದಾರಿ 67 ಮತ್ತು 766ರಲ್ಲಿ ಮೂರು ಫಾಸ್ಟ್ ಟ್ಯಾಗ್ ಕೇಂದ್ರ ತೆರೆಯಲಾಗಿದೆ. ಮೇಲುಕಾಮನಹಳ್ಳಿ, ಕೆಕ್ಕನಹಳ್ಳ ಮತ್ತು ಮದ್ದೂರಿನ ಚೆಕ್ ಪೋಸ್ಟ್ ಬಳಿ ಫಾಸ್ಟ್ ಟ್ಯಾಗ್ ಕೇಂದ್ರ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಯಾವುದಾದರೂ ಸಮಸ್ಯೆ ಆಗುತ್ತಿದೆಯಾ ಎಂದು ಪರೀಕ್ಷೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಕಸ ನಿರ್ವಹಣೆ, ಅಪಘಾತ ನಿರ್ವಹಣೆ ಸೇರಿ ವಿವಿಧ ಉದ್ದೇಶಗಳಿಗಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗುವ ವಾಹನಗಳಿಂದ ಲಘು ವಾಹನಗಳಿಗೆ 20 ರೂ., ಭಾರಿ ವಾಹನಗಳಿಗೆ 50 ರೂ. ನಂತೆ ಹಸಿರು ಸುಂಕ ವಸೂಲಿ ಮಾಡಲಾಗುತ್ತಿದೆ.
ಇನ್ನೂ ರಜೆ ದಿನ ಹಾಗೂ ವಾರಾಂತ್ಯದಲ್ಲಿ ಊಟಿ ಹಾಗೂ ಕೇರಳದ ಪ್ರವಾಸಿ ತಾಣಗಳಿಗೆ ಹೆಚ್ಚು ಪ್ರವಾಸಿಗರು ಹೋಗಲಿದ್ದು, ಹಸಿರು ಸುಂಕ ವಸೂಲಿ ಮಾಡುವ ವೇಳೆ ವಾಹನಗಳು ಕಿ.ಮೀ ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿದ್ದವು. ಚೆಕ್ ಪೋಸ್ಟ್ ನಲ್ಲಿ ಟಿಕೆಟ್ ಪಡೆದು ಹೊರಡುವಷ್ಟರಲ್ಲಿ ಗಂಟೆಗೂ ಹೆಚ್ಚು ಸಮಯ ಕಳೆದು ಹೋಗುತ್ತಿತ್ತು. ಅಲ್ಲದೆ ಅರಣ್ಯ ಪ್ರದೇಶದಲ್ಲಿ ವಾಹನಗಳು ನಿಂತು ಪ್ರಾಣಿಗಳ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಇದೇ ಸಂದರ್ಭ ಬಳಸಿಕೊಂಡು ಪ್ರವಾಸಿಗರು ಕಾಡಿನಲ್ಲಿ ವಾಹನದಿಂದ ಕೆಳಗಿಳಿದು ಪ್ರಾಣಿಗಳ ಫೋಟೋ ತೆಗೆಯುವುದು, ಆಹಾರ ನೀಡುವುದನ್ನು ಮಾಡುತ್ತಿದ್ದರು. ಒಂದು ಚೆಕ್ ಪೋಸ್ಟ್ನಲ್ಲಿ ಒಬ್ಬ ಅಥವಾ ಇಬ್ಬರು ಟಿಕೆಟ್ ನೀಡುತ್ತಿದ್ದರು. ಒಂದು ದಿನಕ್ಕೆ ವಾರಾಂತ್ಯದಲ್ಲಿ 3 ಸಾವಿರದಿಂದ 4 ಸಾವಿರ ವಾಹನಗಳು ಸಂಚಾರ ಮಾಡುತ್ತಿದ್ದವು.
ಇದನ್ನೂ ಓದಿ: ಕೆಂಪೇಗೌಡ ಲೇಔಟ್ಗೆ ಮೂಲಭೂತ ಸೌಕರ್ಯ ವಿಳಂಬ: ಬಿಡಿಎ ಅಧಿಕಾರಿಗಳ ವರ್ತನೆಗೆ ಅರ್ಜಿ ಸಮಿತಿ ಸದಸ್ಯರು ಸಭಾತ್ಯಾಗ
ಪ್ರವಾಸಿ ವಾಹನಗಳು ಹೆಚ್ಚು ಇದ್ದ ಸಂದರ್ಭದಲ್ಲಿ ತುರ್ತಾಗಿ ಹೋಗಬೇಕಾದ ತರಕಾರಿ, ಹಾಲಿನ ವಾಹನ ಮತ್ತು ಸ್ಥಳೀಯರಿಗೆ ಹೆಚ್ಚಿನ ತೊಂದರೆಯಾಗುತ್ತಿತ್ತು. ಈಗ ಫಾಸ್ಟ್ ಟ್ಯಾಗ್ ಅಳವಡಿಸಿರುವುದರಿಂದ ಕೆಲವೇ ನಿಮಿಷಗಳಲ್ಲಿ ಸುಂಕ ಪಾವತಿಸಿ ವಾಹನಗಳು ಮುಂದಕ್ಕೆ ತೆರಳಲಿವೆ. ಫಾಸ್ಟ್ ಟ್ಯಾಗ್ನಿಂದ ಹಣ ಬದಲಾಗಿ ಡಿಜಿಟಲ್ ಮೂಲಕ ಹಣ ಪಾವತಿ ಆಗುವುದರಿಂದ ಪಾರದರ್ಶಕತೆ ಇರಲಿದೆ.
ಒಟ್ನಲ್ಲಿ ಬಂಡೀಪುರದಲ್ಲಿ ಹಸಿರು ಸುಂಕ ವಸೂಲಿಗೆ ಫಾಸ್ಟ್ ಟ್ಯಾಗ್ ಐಡಿಯಾ ಮಾಡಿದ್ದು, ಇದ್ರಿಂದ ವೀಕೆಂಡ್ ಹಾಗೂ ಹಬ್ಬದ ರಜೆ ಸಂದರ್ಭದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.