
ಚಾಮರಾಜನಗರ, ಆಗಸ್ಟ್ 30: ಹನೂರು ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ನೀಡಿದ ವರದಿ ಆಧಾರದ ಮೇಲೆ ಸಿಐಡಿ ತನಿಖೆ ನಡೆಸುತ್ತಿದ್ದು, ಒಟ್ಟು ನಾಲ್ಕು ಪ್ರಕರಣದಲ್ಲಿ ಪ್ರತ್ಯೇಕ ನಾಲ್ಕು ತಂಡಗಳಿಂದ ಸಿಐಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ನಡುವೆ ನಕ್ಸಲ್ ನಿಗ್ರಹ ಪಡೆ (ANF) ಮತ್ತೆ ರೀ ಆ್ಯಕ್ಟಿವೇಟ್ ಆಗುವ ಮುನ್ಸೂಚನೆ ಸಿಕ್ಕಿದ್ದು, ಜಿಲೆಟಿನ್ ಕಡ್ಡಿಯಿಟ್ಟು ಕಳ್ಳಬೇಟೆ ತಡೆ ಶಿಬಿರ ಸ್ಫೋಟಿಸಿದ್ದ ಪ್ರಕರಣದ ತನಿಖೆ ಹೊಣೆಯನ್ನು ಎಎನ್ಎಫ್ಗೆ ನೀಡುವ ಚಿಂತನೆಯೂ ಇದೆ ಎನ್ನಲಾಗ್ತಿದೆ.
ರಾಜ್ಯದಲ್ಲಿ ನಕ್ಸಲ್ ಸಂಘಟನೆಗಳು ನಿಷ್ಕ್ರಿಯವಾಗಿದ್ದ ಹಿನ್ನಲೆ ನಕ್ಸಲ್ ನಿಗ್ರಹ ಪಡೆಯನ್ನು ಮುಚ್ಚಲಾಗಿತ್ತು. ಆದರೆ ಹನೂರು ಪ್ರಕರಣದ ತನಿಖೆ ವೇಳೆ ನಕ್ಸಲ್ ಪರ ಒಲವುಳ್ಳ ಟೈಗರ್ ಆಫ್ ಜಸ್ಟೀಸ್ ಸಂಘಟನೆಯ ಪಾತ್ರ ಬೆಳಕಿಗೆ ಬಂದ ಹಿನ್ನಲೆ ಗೃಹ ಇಲಾಖೆ ಮತ್ತೆ ಎಎನ್ಎಫ್ನ ರೀ ಆಕ್ಟೀವ್ ಮಾಡಲು ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಇದೆ. ಬಾಂಬ್ ಬ್ಲಾಸ್ಟ್ ಪ್ರಕರಣದ ಇಂಚಿಂಚು ಮಾಹಿತಿಯನ್ನು ಕೇಂದ್ರ ಭದ್ರತಾ ಪಡೆ ಕೂಡ ಕಲೆಹಾಕುತ್ತಿದ್ದು, NIA ಕೂಡ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಎಂಟ್ರಿಯಾಗುವ ಸಾಧ್ಯತೆ ಇದೆ. ಆರೋಪಿಗಳಿಗೆ ಜಿಲೆಟಿನ್ ಕಡ್ಡಿ ಸಿಕ್ಕಿದ್ದೇಗೆ? ಅದನ್ನು ತಂದು ಅವರು ಸ್ಫೋಟಿಸಿದ್ದು ಯಾರು? ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಹೀಗಾಗಿ ಸಿಐಡಿ ತನಿಖೆ ಬಳಿಕ ಎಎನ್‌ಎಫ್ ಅಥವಾ ಎನ್ಐಎ ಬಾಂಬ್ ಬ್ಲಾಸ್ಟ್ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹನೂರು ಎನ್ ಕೌಂಟರ್ ಬೆನ್ನಲ್ಲೇ ಬಯಲಾಯ್ತು ಅಂತರರಾಷ್ಟ್ರೀಯ ಜಾಲ: ಚಾಮರಾಜನಗರದಿಂದ ಚೀನಾ, ಮಲೇಷಿಯಾಗೆ ಚಿಪ್ಪುಹಂದಿ ಸ್ಮಗ್ಲಿಂಗ್
ಇನ್ನು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡ, ಘಟನೆ ಸಂಬಂಧ ಒಂದೆಡೆವ ಅರಣ್ಯ ಸಿಬ್ಬಂದಿಯಿಂದ ದಾಖಲಾತಿ ಪಡೆಯುತ್ತಿದರೆ ಮತ್ತೊಂದು ತಂಡದಿಂದ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹ ನಡೆಯುತ್ತಿದೆ. ರಾಮಾಪುರ, ಹನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಲಾಟೆ ಪ್ರಕರಣ, ಜಿಲೆಟಿನ್ ಕಡ್ಡಿ ಸ್ಫೋಟ ಕೇಸ್ನ ಡಿಟೇಲ್ಸ್ ಪಡೆದುಕೊಂಡಿದೆ. ಮೃತರು, ಅವರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಮೇಲೆ ಈ ಹಿಂದೆ ದಾಖಲಾಗಿದ್ದ ಪ್ರಕರಣದ ಬಗ್ಗೆಯೂ ಸಿಐಡಿ ಕೆದಿಕಿದೆ. ಚಾಮರಾಜನಗರ SP ಮುತ್ತುರಾಜ್ ಅವರನ್ನೂ ಭೇಟಿ ಮಾಡಿದ ತಂಡ, ತನಿಖೆಗೆ ಬೇಕಾಗುವ ಸಹಕಾರ ಕೇಳಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:13 am, Sun, 30 August 26